
ಮಂಡ್ಯ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಚಾರವಾಗಿ ಬಿಜೆಪಿ ಎಂ ಎಲ್ಸಿ ಸಿ ಟಿ ರವಿ ಅವರನ್ನು ಬಂಧಿಸಿರುವುದನ್ನು ಬಿಜೆಪಿ ನಾಯಕರು ಖಂಡಿಸುತ್ತಿರುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಹೆಣ್ಣುಮಕ್ಕಳಿಗೆ ಇಷ್ಟು ಕೆಟ್ಟ ಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಬಿಜೆಪಿಯವರು ಬೆಂಬಲಿಸುತ್ತಿದ್ದಾರೆ. ಸಿ.ಟಿ.ರವಿಯವರು ಕೀಳುಭಾಷೆ ಬಳಸಿದ್ದನ್ನು ಸ್ಥಳದಲ್ಲಿದ್ದವರು ಕೇಳಿಸಿಕೊಂಡಿದ್ದಾರೆ. ಅಷ್ಟು ಕೆಟ್ಟ ಮಾತು ಆಡಿರುವುದಕ್ಕೆ ಸಾಕ್ಷಿಯಾದ ಆಡಿಯೊ, ವಿಡಿಯೊ ಇದೆ ಎಂದು ಹೇಳಿದ್ದಾರೆ. ಆದರೆ ನಾನು ಅದನ್ನು ನೋಡಿಲ್ಲ. ಹೆಣ್ಣುಮಗಳನ್ನು ಬಹಳ ಶುಚೀಕರಣವಾಗಿ ಅವಹೇಳನ ಮಾಡಿದರೂ ಬಿಜೆಪಿಯವರು ಅದನ್ನು ಬೆಂಬಲಿಸುತ್ತಾರೆಯೇ ಎಂದು ಕೇಳಿದರು.
ಇಂದು ಮಂಡ್ಯದ ಗೆದ್ದಲಗೆರೆ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆಯಿಂದ ನೊಂದಿರುವ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆ ಪ್ರಕಾರ ಸಿ.ಟಿ.ರವಿ ಅವಾಚ್ಯ ಶಬ್ದ ಬಳಸಿರುವುದು ನಿಜ. ತಪ್ಪು ಮಾಡಿದವರು ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಸಿ.ಟಿ.ರವಿ ಕೂಡ ನಾನು ಹಾಗೆ ಹೇಳಿಲ್ಲ ಎಂದು ಹೇಳುವುದು ಸಹಜ ಎಂದರು.
ಸಾಮಾನ್ಯವಾಗಿ ಹೆಣ್ಣುಮಕ್ಕಳು ಸುಳ್ಳು ಆರೋಪ ಮಾಡಿ ದೂರು ಕೊಡುವುದಿಲ್ಲ. ಒಂದು ವೇಳೆ ಆ ರೀತಿ ಪದಬಳಕೆ ಮಾಡದೇ ಇದ್ದರೆ ಸಿ.ಟಿ.ರವಿ ಬಂಧನ ಏಕೆ ಆಗುತ್ತಿತ್ತು?, ಆ ರೀತಿಯ ಪದವನ್ನು ಆತ ಏಕೆ ಬಳಸಿದ್ದಾರೋ ಗೊತ್ತಿಲ್ಲ. ಮೇಲ್ನೋಟಕ್ಕಂತೂ ಅದು ಅಪರಾಧ ಎಂದರು.
ಸಿ.ಟಿ.ರವಿ ನಾನು ಫೆಸ್ಟ್ರೇಶನ್ ಪದ ಬಳಸಿದ್ದೇನೆ ಎಂದು ಹೇಳುತ್ತಿದ್ದಾರೆ. ನಿಂದನೆಗೆ ಒಳಗಾದ ಲಕ್ಷ್ಮೀ ಹೇಳುತ್ತಿರುವುದನ್ನು ನಾನು ಕೇಳಿದ್ದೇನೆ. ಆಡಿಯೋ, ವಿಡಿಯೋ ಸಾಕ್ಷ್ಯಗಳೂ ಇವೆ ಎಂದು ಹೇಳುತ್ತಿದ್ದಾರೆ. ಅದರ ಪ್ರಕಾರ ಪದಬಳಕೆ ಸತ್ಯ ಎಂದು ತಿಳಿದುಬಂದಿದೆ ಎಂದು ಹೇಳಿದರು.
ಬಸವರಾಜ ಹೊರಟ್ಟಿಯವರು ಘಟನೆ ನಡೆದಾಗ ಅಧಿವೇಶನದಲ್ಲಿ ಇರಲಿಲ್ಲ. ಹೀಗಾಗಿ ಅವರಿಗೆ ಮಾಹಿತಿ ಇಲ್ಲದೇ ಇರಬಹುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸಿ.ಟಿ.ರವಿಯವರನ್ನು ಬೆಳಗಾವಿಯಿಂದ ಖಾನಾಪುರ ಠಾಣೆಗೆ ಕರೆದೊಯ್ದಿದ್ದೇ ಆತನ ಸುರಕ್ಷತಾ ದೃಷ್ಟಿಯಿಂದ.ತಮಗೆ ಏನಾದರೂ ಅಪಾಯವಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಸಿ.ಟಿ.ರವಿ ಹೇಳುತ್ತಿರುವುದು ಸರಿಯಲ್ಲ. ಹಾಗಿದ್ದರೆ ತಪ್ಪು ಮಾಡಿದವರ ವಿರುದ್ಧ ಕ್ರಮವನ್ನೇ ಕೈಗೊಳ್ಳುವಂತಿಲ್ಲವೇ ಎಂದು ಕೇಳಿದರು.
ಸಿ ಟಿ ರವಿ ಹಿತದೃಷ್ಟಿಯಿಂದಲೇ ಪೋಲೀಸರು ಮೂರಾರು ಜಿಲ್ಲೆ ಓಡಾಡಿಸಿದ್ದಾರೆ. ಸ್ಥಳೀಯ ಜನ ಗಲಾಟೆ ಮಾಡ್ತಾರೆ ಅಂತಾ ಪೊಲೀಸರಿಗೆ ಮಾಹಿತಿ ಬಂದಿದೆ. ಈ ಹಿನ್ನೆಲೆ ಸುತ್ತಾಡಿಸಿದ್ದಾರೆ ಮುನ್ನೆಚ್ಚರಿಕೆ ಕ್ರಮವಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
Advertisement