
ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಮತ್ತಷ್ಟು ಅಭಿವೃದ್ಧಿಗೆ ಡಾ. ಗೋವಿಂದರಾವ್ ನೇತೃತ್ವದ ಸಮಿತಿಯಿಂದ ವರದಿ ಬಂದ ಕೂಡಲೇ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದರು.
ವಿಧಾನಸಭೆಯಲ್ಲಿ ಗುರುವಾರ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ವೇಳೆ ಮಾತನಾಡಿದ ಸಿಎಂ, 2013 ರಿಂದ 31 ಸಾವಿರ ಕೋಟಿ ರೂಪಾಯಿಗಳನ್ನು ವಿವಿಧ ಅಭಿವೃದ್ಧಿ ಉಪಕ್ರಮಗಳಿಗೆ ಖರ್ಚು ಮಾಡಿದರೂ, ಈ ಭಾಗದ ಪ್ರಗತಿ ನಿರೀಕ್ಷೆಗೆ ತಕ್ಕಂತೆ ನಡೆದಿಲ್ಲ ಎಂದು ಹೇಳಿದರು.
ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ನಂಜುಂಡಪ್ಪ ವರದಿಯ ಪ್ರಕಾರ 2007-08 ರಿಂದ 2023-24 ರವರೆಗೆ 35 ಸಾವಿರ ಕೋಟಿಗೂ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ. ಅದರಲ್ಲಿ, ಉತ್ತರ ಕರ್ನಾಟಕದ 14 ಜಿಲ್ಲೆಗಳಿಗೆ 17,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಆದರೆ, ನಿರೀಕ್ಷಿತ ಪ್ರಮಾಣದ ಪ್ರಗತಿ ಆಗಿಲ್ಲವೆಂದು ಬಹುಪಾಲು ಸದಸ್ಯರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರಿಂದ ಕಳೆದ ಬಾರಿ ಇದೇ ಸದನದಲ್ಲಿ ಘೋಷಣೆ ಮಾಡಿದಂತೆ 14ನೇ ಹಣಕಾಸು ಆಯೋಗದ ಸದಸ್ಯರಾಗಿದ್ದ ಡಾ.ಗೊವಿಂದರಾವ್ ಅಧ್ಯಕ್ಷತೆಯಲ್ಲಿ ಹೈ ಪವರ್ ಕಮಿಟಿಯೊಂದನ್ನು ರಚಿಸಲಾಗಿದೆ. ಸದರಿ ಸಮಿತಿಯು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದೆ. ಈ ಸಮಿತಿ ವರದಿ ಕೊಟ್ಟ ಕೂಡಲೇ ಅದನ್ನು ಅನುಷ್ಠಾನ ನಮ್ಮ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 2013-14 ರಿಂದ ಇದುವರೆಗೆ 19,878 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಒದಗಿಸಲಾಗಿದೆ. 13,229 ಕೊಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದುವರೆಗೆ 11,500 ಕೋಟಿ ಖರ್ಚು ಮಾಡಲಾಗಿದೆ. ಮಂಡಳಿಯು ಬಿಡುಗಡೆಯಾದ ಅನುದಾನಕ್ಕೆ ಶೇ.85ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. ಒಟ್ಟಾರೆ 35,885 ಕಾಮಗಾರಿಗಳು ಕೈಗೆತ್ತಿಕೊಂಡಿದ್ದು, 27,264 ಕಾಮಗಾರಿಗಳನ್ನು ಪೂರ್ಣಗೊಳಿಸಿದೆ. 8,621 ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲ್ಲಿವೆ.
ಮೂಲಸೌಕರ್ಯ, ವಿಶೇಷವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವೆ ಅಸಮಾನತೆ ಇರುವುದು ಗಮನಕ್ಕೆ ಬಂದಿದ್ದು, ಗೋವಿಂದರಾವ್ ಸಮಿತಿಯ ವರದಿಯು ಈ ಅಂತರವನ್ನು ಕಡಿಮೆ ಮಾಡಲಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತವನ್ನು ಪೂರ್ಣಗೊಳಿಸಲು ನಮ್ಮ ಬದ್ಧವಾಗಿದೆ ಎಂದು ತಿಳಿಸಿದರು.
Advertisement