
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಹತ್ತಿರ ಇರುವ ಕ್ರಿಕೆಟರ್ ವಿರಾಟ್ ಕೊಹ್ಲಿ ಸಹ ಮಾಲೀಕತ್ವದ ಒನ್ 8 ಕಮ್ಯೂನ್ ಬಾರ್ ಆಂಡ್ ರೆಸ್ಟೋರೆಂಟ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೊಟೀಸ್ ನೀಡಿದೆ. ಒನ್ 8 ಕಮ್ಯೂನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಅಗ್ನಿ ಸುರಕ್ಷತೆ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣ ಪತ್ರ ಪಡೆಯದೇ ಕಾನೂನು ಉಲ್ಲಂಘನೆ ಮಾಡಲಾಗಿದೆ ಎಂದು ನೊಟೀಸ್ ನಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಎಂಬುವರು ಈ ಬಗ್ಗೆ ಪಾಲಿಕೆಗೆ ದೂರು ನೀಡಿದ್ದರು. ದೂರು ಆಧರಿಸಿ ಶಾಂತಿನಗರ ಪಾಲಿಕೆ ಅಧಿಕಾರಿಗಳು ನೊಟೀಸ್ ನೀಡಿದ್ದಾರೆ. ಈ ಹಿಂದೆ ಕೂಡ ವಿರಾಟ್ ಕೊಹ್ಲಿಯವರಿಗೆ ನೊಟೀಸ್ ಜಾರಿ ಮಾಡಲಾಗಿತ್ತು. ಆಗ ಉತ್ತರಿಸದೇ ನಿರ್ಲಕ್ಷ್ಯ ವಹಿಸಿದ್ದರು. ಇದೀಗ ಏಳು ದಿನದೊಳಗೆ ಸಮಜಾಯಿಸಿ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಇರುವಂತಹ ಹಲವಾರು ರೆಸ್ಟೋರೆಂಟ್ ಬಾರ್ ಹಾಗೂ ಪಬ್ಗಳು ಅಗ್ನಿ ಶಾಮಕದಳದ ಯಾವುದೇ ಸುರಕ್ಷಿತೆಗಳು ಇಲ್ಲ. ಈ ಹಿಂದೆ ಬೆಂಗಳೂರಿನಲ್ಲಿ ಅಗ್ನಿ ಅವಘಡಗಳು ನಡೆದಾಗ ಹಲವಾರು ಜನ ಸಾವು ನೋವು ಅನುಭವಿಸಿದ್ದಾರೆ. ಕಾರ್ಲ್ಟನ್ ಭವನದಲ್ಲಿ ಶಾರ್ಟ್ ಸರ್ಕ್ಯೂಟ್ ಆದಾಗ ಅಗ್ನಿ ಅವಘಡದಿಂದ ಜೀವ ಉಳಿಸಿಕೊಳ್ಳಲು ಮಹಡಿಯಿಂದ ಜನ ಜಿಗಿದಿದ್ದರು. ಇಂತಹ ಅವಘಡಗಳು ಮರುಕಳಿಸಬಾರದು ಎಂದು ಬಿಬಿಎಂಪಿ ಹಾಗೂ ಅಗ್ನಿ ಶಾಮಕದಳ ಅಗ್ನಿ ಸುರಕ್ಷತೆ ಕಡ್ಡಾಯಗೊಳಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಹೇಳಿದರು.
ಸುಮಾರು ಕಟ್ಟಡಗಳಲ್ಲಿ ಅಗ್ನಿ ಶಾಮಕ ಸುರಕ್ಷತೆ ಕ್ರಮಗಳು ಇಲ್ಲದಿರುವುದರಿಂದ ಅಂತಹ ಕಟ್ಟಡಗಳಿಗೆ ಲೈಸೆನ್ಸ್ ಕೊಡಬಾರದು. ಅಗ್ನಿ ಸುರಕ್ಷತೆ ಇರದ ಕಟ್ಟಡಗಳಲ್ಲಿ ಕಾರ್ಯಚಟುವಟಿಕೆ ಮಾಡದಂತೆ ನಿಯಮ ತರಲಾಗಿದೆ. ಆದರೆ, ನಿಯಮಗಳನ್ನು ಮೀರಿ ಪಬ್ಗಳನ್ನು ನಡೆಸಲಾಗುತ್ತಿದೆ ಎಂದರು.
ಇದೇ ರೀತಿಯಾಗಿ ಎಂಜಿ ರಸ್ತೆಯ ರತ್ನ ಕಂಪ್ಲೇಕ್ಸ್ನಲ್ಲಿ ಇರುವ ಹೈ ರೈಸ್ ಬಿಲ್ಡಿಂಗ್ನಲ್ಲಿರುವ ರೆಸ್ಟೋರೆಂಟ್ನಲ್ಲಿ ಅಗ್ನಿಶಾಮಕ ದಳದ ಸುರಕ್ಷಿತ ಕ್ರಮ ತಗೆದುಕೊಂಡಿಲ್ಲ. ಈ ವಿಚಾರವಾಗಿ ನಾವು ಹೋರಾಟ ನಡೆಸಿದ್ದೇವೆ. ಬಿಬಿಎಂಪಿ ಗಮನಕ್ಕೆ ತಂದಿದ್ದೇವೆ. ಇದೀಗ ಅವರು ನೋಟಿಸ್ ಜಾರಿ ಮಾಡಿದ್ದಾರೆ. ಸುರಕ್ಷತೆ ಕಾಪಾಡುವಲ್ಲಿ ಬಿಬಿಎಂಪಿ ಹಾಗೂ ಅಗ್ನಿಶಾಮಕ ದಳ ಎಷ್ಟಮಟ್ಟಿಗೆ ಮುಂದಾಗುತ್ತಾರೆ ಕಾದು ನೋಡಬೇಕಿದೆ ಎಂದು ಹೇಳಿದರು.
Advertisement