
ಬೆಂಗಳೂರು: ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಪತ್ನಿ, ಆಕೆಯ ತಾಯಿ ಮತ್ತು ಸಹೋದರನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು.. 34 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಸುಭಾಷ್ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬೆಂಗಳೂರಿನ ಮಾರತಹಳ್ಳಿ ಪೊಲೀಸರು ಶನಿವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅತುಲ್ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಅವರ ಅತ್ತೆ ನಿಶಾ ಸಿಂಘಾನಿಯಾ ಮತ್ತು ಅವರ ಸೋದರ ಭಾವ ಅನುರಾಗ್ ಸಿಂಘಾನಿಯಾ ಎಂದು ಗುರುತಿಸಲಾಗಿದೆ. ಮತ್ತೊಬ್ಬ ಆರೋಪಿ ಸುಶೀಲ್ ಸಿಂಘಾನಿಯಾ ಅವರನ್ನು ಇನ್ನೂ ಬಂಧಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಪೊಲೀಸರು, 'ನಿಕಿತಾ ಅವರನ್ನು ಶನಿವಾರ ಬೆಳಿಗ್ಗೆ ಹರಿಯಾಣದ ಗುರ್ಗಾಂವ್‌ನಲ್ಲಿ ಬಂಧಿಸಲಾಗಿದ್ದು, ನಿಶಾ ಮತ್ತು ಅನುರಾಗ್ ಅವರನ್ನು ಉತ್ತರ ಪ್ರದೇಶದ ಅಲಹಾಬಾದ್‌ನಲ್ಲಿ ಬಂಧಿಸಲಾಗಿದೆ. ಪೊಲೀಸರು ಎಲ್ಲ ಮೂವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಹೇಳಿದ್ದಾರೆ.
ಅಂತೆಯೇ ಅತುಲ್ ಸಹೋದರ ಬಿಲಾಸ್ ಕುಮಾರ್ ನೀಡಿದ ದೂರಿನ ಮೇರೆಗೆ ಪೊಲೀಸರು ಅತುಲ್ ಪತ್ನಿ ಮತ್ತು ಅವರ ಕುಟುಂಬದ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರ ಮೇಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.
ಸಿಂಘಾನಿಯಾ ನಿವಾಸಕ್ಕೆ ಸಮನ್ಸ್ ನೀಡಲು ಗುರುವಾರ ಬೆಂಗಳೂರಿನ ನಾಲ್ವರು ಸದಸ್ಯರ ಪೊಲೀಸ್ ತಂಡವು ಜೌನ್‌ಪುರಕ್ಕೆ ಪ್ರಯಾಣ ಬೆಳೆಸಿತ್ತು. ಆದಾಗ್ಯೂ, ಪೊಲೀಸ್ ತಂಡವು ಕುಟುಂಬದ ಮನೆ ಲಾಕ್ ಆಗಿರುವುದನ್ನು ನೋಡಿ ಬುಧವಾರ ಮಧ್ಯರಾತ್ರಿಯ ನಂತರ ಕುಟುಂಬವು ಸ್ಥಳದಿಂದ ಪರಾರಿಯಾಗಿದೆ ಎಂದು ನೆರೆಹೊರೆಯವರು ಹೇಳಿದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಏನಿದು ಪ್ರಕರಣ?
ಡಿಸೆಂಬರ್ 9 ರಂದು ಸುಭಾಷ್ ಅವರ ಪತ್ನಿ ಮತ್ತು ಅವರ ಕುಟುಂಬದವರ ಕಿರುಕುಳದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಸುಭಾಷ್ ಅವರು 25 ಪುಟಗಳ ಡೆತ್ ನೋಟ್ ಅನ್ನು ಕೂಡ ಬರೆದಿದ್ದರು. ಡಿಸೆಂಬರ್ 9 ರಂದು ಮಾರತ್‌ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ತನ್ನ ಕೋಣೆಯಲ್ಲಿ ಅತುಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ತನ್ನ ಪತ್ನಿ ಮತ್ತು ಅವರ ಕುಟುಂಬದಿಂದ ಕಿರುಕುಳದ ಆರೋಪ ಹೊರಿಸಿ 25 ಪುಟಗಳ ಡೆತ್ ನೋಟ್ ಬರೆದಿದ್ದರು. ತನ್ನ ಮೇಲೆ ಸುಳ್ಳು ಪ್ರಕರಣಗಳಲ್ಲಿ ಆರೋಪ ಹೊರಿಸಲಾಗಿದೆ ಮತ್ತು ಹೆಚ್ಚಿನ ಜೀವನಾಂಶ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ನೋಟ್‌ನಲ್ಲಿ ಹೇಳಲಾಗಿತ್ತು. ಡೆತ್ ನೋಟ್ ಜೊತೆಗೆ ಅತುಲ್ ಸುಭಾಷ್ ವೀಡಿಯೊ ಕೂಡ ರೆಕಾರ್ಡ್ ಮಾಡಿದ್ದರು.
Advertisement