
ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಜಂಟಿ ಕ್ರಿಯಾ ಸಮಿತಿ ಡಿ.31 ರಂದು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆದಿವೆ.
ಇಂದು ಸಿಎಂ ಗೃಹ ಕಚೇರಿ ಕಾವೇರಿಯಲ್ಲಿ ಸಿದ್ದರಾಮಯ್ಯ ಜೊತೆಗೆ ಸಾರಿಗೆ ರಾಮಲಿಂಗಾರೆಡ್ಡಿ ಸಭೆ ನಡೆಸಿದ ಹಿನ್ನೆಲೆಯಲ್ಲಿ ಮುಷ್ಕರವನ್ನು ಹಿಂಪಡೆಯಲು ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ತೀರ್ಮಾನಿಸಿದೆ.
ಸಭೆಯಲ್ಲಿ ಸಾರಿಗೆ ಇಲಾಖೆ 4 ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದರು. ಈ ವೇಳೆ ಸಾರಿಗೆ ಸಿಬ್ಬಂದಿ ಬೇಡಿಕೆ ಬಗ್ಗೆ ಸಿಎಂಗೆ ಮನವರಿಕೆ ಮಾಡಲಾಗಿದೆ ಎನ್ನಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾರೆಡ್ಡಿ, ಸಾರಿಗೆ ಸಿಬ್ಬಂದಿ ಮುಷ್ಕರದ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಿದ್ದೇವೆ. ಬಿಜೆಪಿ ಸರ್ಕಾರ ರೂ.5,900 ಕೋಟಿ ಸಾಲ ಬಿಟ್ಟು ಹೋಗಿದ್ದೇ ಸಮಸ್ಯೆಗೆ ಕಾರಣವಾಗಿದೆ. ಫೆಬ್ರವರಿ ಬಜೆಟ್‌ನಲ್ಲಿ ಇಲಾಖೆಗೆ ಅನುದಾನ ನೀಡಿ ಅಂತಾ ಬೇಡಿಕೆ ಇಟ್ಟಿದ್ದೇನೆ. ಸಂಕ್ರಾಂತಿ ಹಬ್ಬದ ಬಳಿಕ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು.
ಸಂಕ್ರಾಂತಿ ಹಬ್ಬದ ಬಳಿಕ ಮತ್ತೆ ಸಭೆ ನಡೆಸಲಿರುವ ಜಂಟಿ ಕ್ರಿಯಾ ಸಮಿತಿ:
ಸಿಎಂ ಸಿದ್ದರಾಮಯ್ಯ ಜೊತೆಗೆ ಸಾರಿಗೆ ಸಚಿವರ ಮಾತುಕತೆ ಹಿನ್ನೆಲೆಯಲ್ಲಿ ಸಾರಿಗೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಡಿಸೆಂಬರ್ 31 ರಂದು ಕರೆ ನೀಡಿದ್ದ ಮುಷ್ಕರವನ್ನು ಹಿಂಪಡೆಯಲು ನಿರ್ಧರಿಸಿವೆ. ಸಂಕ್ರಾಂತಿ ಬಳಿಕ ಜಂಟಿ ಕ್ರಿಯಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ರಸ್ತೆ ಸಾರಿಗೆ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದ ಮುಷ್ಕರ ವಾಪಸ್ ಹಿನ್ನೆಲೆಯಲ್ಲಿ ಡಿಸೆಂಬರ್ 31 ರಂದು ಸಾರಿಗೆ ಸಂಸ್ಥೆ ಬಸ್ ಗಳು ಎಂದಿನಂತೆ ಕಾರ್ಯಾಚರಣೆ ನಡೆಸಲಿವೆ.
Advertisement