ಬಜೆಟ್'ನಲ್ಲಿ ಬೆಂಗಳೂರಿಗೆ ವಿಶ್ವದರ್ಜೆಯ ಹೂವಿನ ಮಾರುಕಟ್ಟೆ ಘೋಷಣೆ ಮಾಡಿ: ಸರ್ಕಾರಕ್ಕೆ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಆಗ್ರಹ

ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ವಿಶ್ವದರ್ಜೆಯ ಹೂವಿನ ಮಾರುಕಟ್ಟೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ನಲ್ಲಿ ಬೆಂಗಳೂರು ನಗರಕ್ಕೆ ವಿಶ್ವದರ್ಜೆಯ ಹೂವಿನ ಮಾರುಕಟ್ಟೆ ಘೋಷಣೆ ಮಾಡುವಂತೆ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಈ ಕುರಿತು ಇಬ್ಬರಿಗೂ ಪತ್ರ ಬರೆದಿರುವ ಅವರು, ‘ಸುಸಜ್ಜಿತ ಮಾರುಕಟ್ಟೆ ನಿರ್ಮಿಸುವ ಕುರಿತು ಈ ಬಾರಿಯ ಬಜಟ್‌ನಲ್ಲಿ ಘೋಷಿಸಬೇಕೆಂದು‘ ಮನವಿ ಮಾಡಿದ್ದಾರೆ.

‘ಕರ್ನಾಟಕದಲ್ಲಿ 35 ಸಾವಿರ ಹೆಕ್ಟೇರ್‌ನಲ್ಲಿ ಪುಷ್ಪ ಕೃಷಿಯಿದೆ. ಬೆಂಗಳೂರು ಸುತ್ತಮುತ್ತ 10 ರಿಂದ 12 ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂವುಗಳನ್ನು ಬೆಳೆಯಲಾಗುತ್ತದೆ. ಈಗಿರುವ ಅಂಕಿ-ಅಂಶಗಳ ಪ್ರಕಾರ ಬೆಂಗಳೂರು ಜಿಲ್ಲೆಯಲ್ಲಿ 535 ಹೆಕ್ಟೇರ್ ಪ್ರದೇಶದಲ್ಲಿ 2,100 ಮೆಟ್ರಿಕ್ ಟನ್ ಹೂವನ್ನು ಬೆಳೆಯಲಾಗುತ್ತಿದೆ. ಸಾವಿರಾರು ಕೋಟಿ ವ್ಯವಹಾರವಿರುವ ಪುಷ್ಪ ಕೃಷಿಗೆ ರಾಜ್ಯದಲ್ಲಿ ಉತ್ತಮ ಮಾರುಕಟ್ಟೆ ವ್ಯವಸ್ಥೆ ಇಲ್ಲ.

 ಹೀಗಾಗಿ ಹೂವಿನ ಬೆಳೆಗಾರರು, ಕೆ.ಆರ್. ಮಾರುಕಟ್ಟೆ, ಮತ್ತಿತರ ಪಾದಚಾರಿ ಮಾರ್ಗಗಳಲ್ಲಿ ಬಿಡಿ ಬಿಡಿಯಾಗಿ ಹೂವು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಬೆಳೆಗಾರರಿಗೆ ಉತ್ತಮ ಬೆಲೆಯೂ ಸಿಗುತ್ತಿಲ್ಲ, ಸರ್ಕಾರಕ್ಕೂ ಸರಿಯಾದ ಅಂಕಿ– ಅಂಶಗಳು ಸಿಗುತ್ತಿಲ್ಲ‘. ಹೀಗಾಗಿ ‘ಬಜೆಟ್‌ನಲ್ಲಿ ಹೂವಿನ ಮಾರುಕಟ್ಟೆ ಘೋಷಣೆ ಜೊತೆಗೆ, ಹೂವುಗಳನ್ನು ಹೆಚ್ಚು ದಿನಗಳ ಕಾಲ ಕೆಡದಂತೆ ಸುರಕ್ಷಿತವಾಗಿ ಇಡಲು ಶೈತ್ಯಾಗಾರ ಘಟಕಗಳ ನಿರ್ಮಾಣಕ್ಕೂ ಆದ್ಯತೆ ನೀಡಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com