ರಾಜ್ಯದ 1,300 ಪ್ರಾಥಮಿಕ ಶಾಲಾ ಶಿಕ್ಷಕರ ಭವಿಷ್ಯ ಅತಂತ್ರ!

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್‌ಟಿ) ಹುದ್ದೆಗಳಿಗೆ ಆಯ್ಕೆಯಾದ 1,300 ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಅಧಿಕಾರಶಾಹಿ ಹಾಗೂ ಕಾನೂನು ಸಂಕೀರ್ಣತೆಗಳು ಅವರು ಸೇವೆಗೆ ಸೇರುವು ದನ್ನು ವಿಳಂಬಗೊಳಿಸುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿ ಮುಳುಗುವಂತೆ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ (ಜಿಪಿಎಸ್‌ಟಿ) ಹುದ್ದೆಗಳಿಗೆ ಆಯ್ಕೆಯಾದ 1,300 ಕ್ಕೂ ಹೆಚ್ಚು ಅಭ್ಯರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಅಧಿಕಾರಶಾಹಿ ಹಾಗೂ ಕಾನೂನು ಸಂಕೀರ್ಣತೆಗಳು ಅವರು ಸೇವೆಗೆ ಸೇರ್ಪಡೆಯಾಗುವುದನ್ನು ವಿಳಂಬಗೊಳಿಸುತ್ತಿದ್ದು, ಆರ್ಥಿಕ ಸಂಕಷ್ಟದಲ್ಲಿ ಮುಳುಗುವಂತೆ ಮಾಡಿದೆ.

ಹಿಂದಿನ ಸರ್ಕಾರ ಮಾರ್ಚ್ 2022 ರಲ್ಲಿ ರಾಜ್ಯಾದ್ಯಂತ ಜಿಪಿಎಸ್ ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸುವ ಮೂಲಕ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಯಿತು. ಮೇ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆದು, 13,352 ಅಭ್ಯರ್ಥಿಗಳನ್ನು ಒಳಗೊಂಡ ಅಂತಿಮ ಆಯ್ಕೆ ಪಟ್ಟಿಯನ್ನು ಮಾರ್ಚ್ 2023ರಲ್ಲಿ ಪ್ರಕಟಿಸಲಾಯಿತು.

ಆದಾಗ್ಯೂ, ಅಧಿಕಾರದ ಬದಲಾವಣೆ ಕಾರ್ಯವಿಧಾನದಲ್ಲಿ ಬದಲಾವಣೆಗಳನ್ನು ತಂದಿತು. ಆಯ್ಕೆಯಾದ ಅಭ್ಯರ್ಥಿಗಳನ್ನು ಹೊಸ ಸರ್ಕಾರದಡಿ ಕೌನ್ಸೆಲಿಂಗ್‌ಗೆ ಕರೆಯಲಾಗಿದ್ದು, ಅದಕ್ಕೆ ಅನುಗುಣವಾಗಿ ಪೋಸ್ಟಿಂಗ್‌ಗಳನ್ನು ನಿಗದಿಪಡಿಸಲಾಗಿದೆ. ಆದರೂ, 'ಸಿಂಧುತ್ವ ಪ್ರಮಾಣಪತ್ರ' ದ ಹಠಾತ್ ಅಗತ್ಯ ಅನೇಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. 1,300 ಕ್ಕೂ ಹೆಚ್ಚು ಅಭ್ಯರ್ಥಿಗಳು ಅಗತ್ಯ ದಾಖಲಾತಿ ಪಡೆಯಲು ಪರದಾಡಿದ್ದರಿಂದ ವಿಳಂಬಕ್ಕೆ ಕಾರಣವಾಯಿತು. 

ಇದೇ ವೇಳೆ ಬಹುತೇಕರು ಪ್ರಮಾಣ ಪತ್ರ ಪಡೆದು ಆದೇಶ ಪ್ರತಿ ಪಡೆಯಲು ಡಿಡಿಪಿಐಗೆ ಸಲ್ಲಿಸುವಷ್ಟರಲ್ಲಿ ವಿವಾಹಿತ ಮಹಿಳೆಯರು ತಮ್ಮ ಸಂಗಾತಿಯ ಬದಲಿಗೆ ತಂದೆಯ ಜಾತಿ- ಆದಾಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಆಯ್ಕೆಪಟ್ಟಿಯಿಂದ ಹೊರಗಿಡಲಾಗಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು.

ಅಂತಿಮ ಪಟ್ಟಿಯ 11,494 ಅಭ್ಯರ್ಥಿಗಳು ಈಗಾಗಲೇ ತಮ್ಮ ಆದೇಶ ಪ್ರತಿಯನ್ನು ಆಯಾ ಡಿಡಿಪಿಐಗಳಿಂದ ಸಂಗ್ರಹಿಸಿ ಕರ್ತವ್ಯಕ್ಕೆ ಸೇರಿದ್ದಾರೆ. ಆದಾಗ್ಯೂ, 1,377 ಅಭ್ಯರ್ಥಿಗಳು ಇನ್ನೂ ಆದೇಶವನ್ನು ಪಡೆಯುವ ಪ್ರಕ್ರಿಯೆಯಲ್ಲಿದ್ದಾರೆ ಆದರೆ ವಿವಾಹಿತ ಮಹಿಳಾ ವರ್ಗದ ಅಡಿಯಲ್ಲಿ ಬರುವ ಒಟ್ಟು 13,352 ಮಹಿಳೆಯರಲ್ಲಿ 481 ಮಹಿಳೆಯರು ನ್ಯಾಯಾಲಯದ ಬಾಗಿಲು ತಟ್ಟಿದ್ದಾರೆ. ಇದು ಆಯ್ಕೆ ಪ್ರಕ್ರಿಯೆಗೆ ತಡೆ ನೀಡಿದೆ. 

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಇತ್ತೀಚೆಗೆ ತನ್ನ ತಡೆಯಾಜ್ಞೆಯನ್ನು ಮಾರ್ಪಡಿಸಿ ಕರ್ನಾಟಕ ಸರ್ಕಾರಕ್ಕೆ 11,494 ಪದವೀಧರ ಪ್ರಾಥಮಿಕ ಶಿಕ್ಷಕರನ್ನು ನೇಮಿಸಲು ಅನುಮತಿ ನೀಡಿತು ಮತ್ತು ವಿವಾಹಿತ ಮಹಿಳಾ ಅಭ್ಯರ್ಥಿಗಳು ತಮ್ಮ ಪೋಷಕರ ಆದಾಯ ಮತ್ತು ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ನೇಮಕಾತಿಗೆ ಅರ್ಹತೆ ಹೊಂದಿಲ್ಲದಿದ್ದರೆ ಅವರ ಒಟ್ಟಾರೆ ಅರ್ಹತೆಯ ಆಧಾರದ ಮೇಲೆ ಸಾಮಾನ್ಯ ಅರ್ಹತೆಯ ವರ್ಗದಡಿ ಪರಿಗಣಿಸುವಂತೆ ಸೂಚಿಸಿತ್ತು.

ಪಾಂಡವಪುರ ತಾಲೂಕಿನ 31 ವರ್ಷದ ಮಧುಸೂಧನ್ ಐಸಿ, ಜಿಪಿಎಸ್‌ಟಿ ನೇಮಕಾತಿ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸ್ಥಿರವಾದ ಸರ್ಕಾರಿ ನೌಕರಿಯ ನಿರೀಕ್ಷೆಯ ಹೊರತಾಗಿಯೂ, ಮಧುಸೂಧನ್ ಅವರು ಆಯ್ಕೆಯಾಗಿ ಮೂರು ತಿಂಗಳು ಕಳೆದರೂ ಯಾವುದೇ ಆದೇಶದ ಪ್ರತಿ ಅಥವಾ ಕೆಲಸ ಮಾಡಲು ಅವಕಾಶವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ.

ನಮ್ಮ ಕುಟುಂಬದಲ್ಲಿ ಸರ್ಕಾರಿ ನೌಕರಿ ಪಡೆದ ಮೊದಲ ವ್ಯಕ್ತಿ ನಾನಾಗುವ ಆಸೆಯಿಂದ ಹಿಂದಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ರಾಜೀನಾಮೆ ನೀಡಿದ್ದೇನೆ. ಆದರೆ ಮೂರು ತಿಂಗಳಿನಿಂದ ಕೆಲಸವಿಲ್ಲದೇ, ಸಂಬಳವಿಲ್ಲದೇ ನಮ್ಮನ್ನು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಅವರು ತಮ್ಮ ಅಳಲು ತೋಡಿಕೊಂಡರು.

ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮಸ್ಯೆಯನ್ನು ಪ್ರಸ್ತಾಪಿಸಿದ್ದೇವೆ. ಆದರೆ ನ್ಯಾಯಾಲಯದ ಆದೇಶದಲ್ಲಿ ನಮ್ಮ ಬಗ್ಗೆ ಸ್ಪಷ್ಟವಾದ ಉಲ್ಲೇಖವಿಲ್ಲ ಮತ್ತು ಅವರು ಪ್ರಕ್ರಿಯೆಯನ್ನು ವಿಳಂಬಗೊಳಿಸುತ್ತಿದ್ದಾರೆ ಎಂದು ಇನ್ನೊಬ್ಬ ಅಭ್ಯರ್ಥಿ ಹೇಳಿದರು. ಈ ಅಭ್ಯರ್ಥಿಗಳು ತಮ್ಮ ಉದ್ಯೋಗದ ಸ್ಥಿತಿಯ ಬಗ್ಗೆ ಸ್ಪಷ್ಟತೆಗಾಗಿ ಕಾಯುತ್ತಿರುವಂತೆ, ಆರ್ಥಿಕ ಸಂಕಷ್ಟದ ಭೀತಿಯು ಹೆಚ್ಚಾಗಿದೆ. ಸ್ಥಿರ ಉದ್ಯೋಗ ಮತ್ತು ಉತ್ತಮ ಭವಿಷ್ಯಕ್ಕಾಗಿ ಅವರ ಆಕಾಂಕ್ಷೆಗಳು ಅಧಿಕಾರಶಾಹಿ ಅಡೆತಡೆಗಳು ಮತ್ತು ಕಾನೂನು ತೊಡಕುಗಳಿಂದ ಮುಚ್ಚಿಹೋಗಿವೆ, ಅವರ ದುಃಸ್ಥಿತಿಯನ್ನು ನಿವಾರಿಸಲು ತ್ವರಿತ ಪರಿಹಾರದ ಅಗತ್ಯವಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com