KPTCL ಗೆ 404 ಸಹಾಯಕ ಇಂಜಿನಿಯರ್‌ ನೇಮಿಸಲು ಸರ್ಕಾರಕ್ಕೆ ಹೈಕೋರ್ಟ್ ಅನುಮತಿ

ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿನ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್ ಹುದ್ದೆಗಳ (ಎಇ) ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ವಿತರಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣ ನಿಗಮ ನಿಯಮಿತದಲ್ಲಿನ (ಕೆಪಿಟಿಸಿಎಲ್) 404 ಸಹಾಯಕ ಎಂಜಿನಿಯರ್ ಹುದ್ದೆಗಳ (ಎಇ) ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅರ್ಹ ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ವಿತರಿಸುವಂತೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ​ಗೆ 404 ಸಹಾಯಕ ಇಂಜಿನಿಯರ್​ಗಳ ನೇಮಕಕ್ಕೆ ಷರತ್ತಿನ ಅನುಮತಿ ನೀಡಿ ಹೈಕೋರ್ಟ್ ವಿಭಾಗೀಯ ಪೀಠದಿಂದ ಮಧ್ಯಂತರ ಆದೇಶ ಹೊರಡಿಸಲಾಗಿದೆ. ನೇಮಕಾತಿ ಹೈಕೋರ್ಟ್​​ನ‌ ಅಂತಿಮ ತೀರ್ಪಿಗೆ ಬದ್ಧವಾಗಿರಬೇಕು. ಹೈಕೋರ್ಟ್​​ನ ತೀರ್ಪಿಗನುಗುಣವಾಗಿ ಸೇವಾ ಜೇಷ್ಠತೆ ಕಾಯ್ದುಕೊಳ್ಳಬೇಕು ಎಂದು ಸಿಜೆ ಪಿ.ಎಸ್.ದಿನೇಶ್ ಕುಮಾರ್,‌ ನ್ಯಾ.ಟಿ.ಜಿ.ಶಿವಶಂಕರೇಗೌಡರಿದ್ದ ಪೀಠ ಆದೇಶ ನೀಡಿದೆ.

‘2023ರ ಜನವರಿ 3ರಂದು ಪ್ರಕಟಿಸಿದ ಅರ್ಹ ಅಭ್ಯರ್ಥಿಗಳ ತಾತ್ಕಾಲಿಕ ಅಂಕಪಟ್ಟಿ ಅನುಸಾರ 404 (313 ಮೂಲ ವೃಂದ, 91 ಕಲ್ಯಾಣ ಕರ್ನಾಟಕ ವೃಂದ) ಅಭ್ಯರ್ಥಿಗಳಿಗೆ ತಾತ್ಕಾಲಿಕ ನೇಮಕಾತಿ ಆದೇಶ ನೀಡಿ’ ಎಂದು ಕೆಪಿಟಿಸಿಎಲ್‌ಗೆ ನ್ಯಾಯಪೀಠ ನಿರ್ದೇಶಿಸಿದೆ.

ಈ ನೇಮಕಾತಿಗಳು ಹೈಕೋರ್ಟ್ ನ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ನೇಮಕಾತಿ ಆದೇಶಗಳಲ್ಲಿ ನಮೂದಿಸಬೇಕು. ಒಂದೊಮ್ಮೆ ಮೇಲ್ಮನವಿ ಪುರಸ್ಕೃತಗೊಂಡು ಮೇಲ್ಮನವಿದಾರರು ಆಯ್ಕೆಗೊಂಡರೆ ಸೇವಾ ಹಿರಿತನ ಮತ್ತು ರೋಸ್ಟರ್ ಪಾಲಿಸಬೇಕು’ ಎಂದು ಸೂಚಿಸಿರುವ ನ್ಯಾಯಪೀಠ ವಿಚಾರಣೆಯನ್ನು ಮಾರ್ಚ್ 13ಕ್ಕೆ ಮುಂದೂಡಿದೆ.

ಕೆಪಿಟಿಸಿಎಲ್​ನ ಕಿರಿಯ ಸಹಾಯಕ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲೂ ಭಾರಿ ಅಕ್ರಮ ನಡೆದಿತ್ತು. ಕಿಂಗ್ ಪಿನ್ ಸೇರಿದಂತೆ ನಕಲು ಮಾಡಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳು ಕೂಡ ಜೈಲು ಪಾಲಾಗಿದ್ದರು. ಆಗಸ್ಟ್ 7, 2022 ರಂದು ರಾಜ್ಯಾದ್ಯಂತ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಖಾಸಗಿ ಕಾಲೇಜೊಂದರಲ್ಲಿ ಪರೀಕ್ಷಾರ್ಥಿ ನಕಲು ಮಾಡಿದ ವಿಚಾರ ಬಹಿರಂಗವಾಗಿತ್ತು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿತು ಮತ್ತು ಜನವರಿ 3, 2023 ರಂದು ಪಟ್ಟಿಯನ್ನು ಪ್ರಕಟಿಸಲಾಯಿತು. ನಂತರ, ಕೆಲವು ಪ್ರಮುಖ ಉತ್ತರಗಳು ಸರಿಯಾಗಿಲ್ಲ ಎಂದು ಕಂಡುಬಂದಿತು.  ನಂತರ, ಫೆಬ್ರವರಿ 4, 2023 ರಂದು ಪರಿಷ್ಕೃತ ಪಟ್ಟಿಯನ್ನು ಸಿದ್ಧಪಡಿಸಲಾಯಿತು.  ನೇಮಕಾತಿ ಸಂಬಂಧ ಕೆಪಿಟಿಸಿಎಲ್ 2023ರ ಫೆಬ್ರುವರಿ 4ರಂದು ಪ್ರಕಟಿಸಿದ್ದ ತಾತ್ಕಾಲಿಕ ಅರ್ಹತಾ ಪಟ್ಟಿಯನ್ನು ಏಕಸದಸ್ಯ ನ್ಯಾಯಪೀಠ ರದ್ದುಪಡಿಸಿತ್ತು. ಈ ಪಟ್ಟಿಯಲ್ಲಿ ಅರ್ಹತೆ ಪಡೆದಿದ್ದ ಅಭ್ಯರ್ಥಿಗಳು ಈ ಮೇಲ್ಮನವಿ ಸಲ್ಲಿಸಿದ್ದರು.

ವಕೀಲ ಪೃಥ್ವೀಶ್ ಎಂ ಕೆ  ಮತ್ತು  ಚೇತನ್ ಕೆ ಸೇರಿದಂತೆ ಕೆಲವು ಅಭ್ಯರ್ಥಿಗಳು ನ್ಯಾಯಾಧೀಶರ ಮುಂದೆ ವಾದ ಮಂಡಿಸಿದ್ದರು. ನಂತರ ಫೆಬ್ರವರಿ 4, 2023 ರಂದು ಪ್ರಕಟಿಸಲಾದ ಪ್ರಮುಖ ಉತ್ತರಗಳು ಮತ್ತು ತಾತ್ಕಾಲಿಕ ಮೆರಿಟ್ ಪಟ್ಟಿಯನ್ನು ರದ್ದುಗೊಳಿಸಿತು. ನಾಲ್ಕು ತಿಂಗಳೊಳಗೆ ಆಯ್ಕೆಯ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಂತೆ KPTCL ಗೆ ನಿರ್ದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com