ಶೇ.40 ಕಮಿಷನ್‌ ಆರೋಪ: ನ್ಯಾ. ನಾಗಮೋಹನ್‌ ದಾಸ್‌ ಆಯೋಗಕ್ಕೆ ಮತ್ತೆ 6 ವಾರಗಳ ಕಾಲಾವಕಾಶ ನೀಡಿದ ಹೈಕೋರ್ಟ್‌

ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಅವರ ಏಕ ವ್ಯಕ್ತಿ ಆಯೋಗಕ್ಕೆ ವರದಿ ಸಲ್ಲಿಸಲು ಹೈಕೋರ್ಟ್‌ ಮತ್ತೆ ಆರು ವಾರಗಳ ಗಡುವು ನೀಡಿ ಆದೇಶಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ಕಳೆದ ನಾಲ್ಕು ವರ್ಷದಲ್ಲಿ ಬಿಬಿಎಂಪಿ ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌ ಎನ್‌ ನಾಗಮೋಹನ್‌ ದಾಸ್‌ ಅವರ ಏಕ ವ್ಯಕ್ತಿ ಆಯೋಗಕ್ಕೆ ವರದಿ ಸಲ್ಲಿಸಲು ಹೈಕೋರ್ಟ್‌ ಮತ್ತೆ ಆರು ವಾರಗಳ ಗಡುವು ನೀಡಿ ಆದೇಶಿಸಿದೆ.

ರಾಜ್ಯ ಸರ್ಕಾರವು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಅವರ ಏಕವ್ಯಕ್ತಿ ಆಯೋಗ ರಚಿಸಿ 2023ರ ಆಗಸ್ಟ್‌ 5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಮೆರ್ಸಸ್‌ ನಿಕ್ಷೇಪ್‌ ಇನ್ಫ್ರಾ ಪ್ರಾಜೆಕ್ಟ್ಸ್‌ ಸೇರಿದಂತೆ ಹಲವು ಗುತ್ತಿಗೆ ಕಂಪೆನಿಗಳು ಮತ್ತು ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಎಲ್ಲಾ ಪಾಲುದಾರರ ವಾದ ಆಲಿಸಿದ ಮತ್ತು ಎಲ್ಲಾ ದಾಖಲೆ ಪರಿಗಣಿಸಿದ ನಂತರ ಆಯೋಗವು 45 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ವರದಿಯನ್ನು ಹೈಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಬೇಕು ಎಂದು 2023ರ ಡಿಸೆಂಬರ್‌ 13ರಂದು ನಿರ್ದೇಶಿಸಿದ್ದರೂ ಈವರೆಗೂ ವಿಚಾರಣೆಯೇ ಆರಂಭವಾಗಿಲ್ಲ ಎಂಬ ವಿಷಯ ತಿಳಿದು ಆಚ್ಚರ್ಯಗೊಂಡ ಪೀಠವು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರ ಮನವಿ ಮೇರೆಗೆ ಮತ್ತೆ ಆರು ವಾರ ಕಾಲಾವಾಶ ನೀಡಿತು.

ಮುಂದಿನ ಆರು ವಾರಗಳಲ್ಲಿ ಏಕ ಸದಸ್ಯ ಆಯೋಗ ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಪುನಾ ಕಾಲಾವಕಾಶ ನೀಡುವುದಿಲ್ಲ. ಇದೇ ಕೊನೆಯ ಬಾರಿಗೆ ಕಾಲಾವಕಾಶ ನೀಡಲಾಗುತ್ತಿದೆ. ಒಂದು ವೇಳೆ‌ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸದಿದ್ದರೆ ಗುತ್ತಿಗೆದಾರರಿಗೆ ಶೇ.100ರಷ್ಟು ಬಿಲ್‌ ಪಾವತಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಲಾಗುವುದು ಎಂದು ಕಠಿಣ ಎಚ್ಚರಿಕೆ ನೀಡಿದ ಪೀಠ ವಿಚಾರಣೆಯನ್ನು ಏಪ್ರಿಲ್‌ 2ಕ್ಕೆ ಮುಂದೂಡಿತು.

ಇದಕ್ಕೂ ಮುನ್ನ, ಮಂಗಳವಾರ ಬೆಳಗಿನ ಕಲಾಪದಲ್ಲಿ ಅರ್ಜಿ ವಿಚಾರಣೆಗೆ ಬಂದಾಗ, "ಆಯೋಗ ವಿಚಾರಣೆ ಪೂರ್ಣಗೊಳಿಸಿದೆಯೇ?" ಎಂದು ಸರ್ಕಾರವನ್ನು ಪೀಠ ಪ್ರಶ್ನಿಸಿತು. ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೋಕೇಟ್‌ ಜನರಲ್‌ ಅವರು ಸಮಿತಿ ಇನ್ನೂ ವಿಚಾರಣೆಯನ್ನೇ ಆರಂಭಿಸಿಲ್ಲ ಎಂದರು.

ಇದರಿಂದ ಅಸಮಾಧಾನಗೊಂಡ ಪೀಠವು "ಏನು, ಇನ್ನೂ ವಿಚಾರಣೆಯೇ ಆರಂಭವಾಗಿಲ್ಲವೇ? 45 ದಿನಗಳಲ್ಲಿ ವಿಚಾರಣೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಹಿಂದೆಯೇ ನಿರ್ದೇಶಿಸಲಾಗಿತ್ತಲ್ಲವೇ? ವಿಚಾರಣೆ ಪೂರ್ಣಗೊಳಿಸಲು 45 ದಿನ ಸಾಕಾಗುವುದಿಲ್ಲವೇ? ಏಕೆ ಇನ್ನೂ ವಿಚಾರಣೆ ಆರಂಭವಾಗಿಲ್ಲ" ಎಂದು ಮರು ಪ್ರಶ್ನೆ ಹಾಕಿತು.

ಇದಕ್ಕೆ ಅಡ್ವೋಕೇಟ್‌ ಜನರಲ್‌ ಅವರು "ಸಮಿತಿಗೆ ಜನವರಿ 9ರಂದು ದಾಖಲೆ ಸಲ್ಲಿಸಲಾಗಿದೆ. ಎಲ್ಲಾ ಪ್ರಕರಣಗಳ ದಾಖಲೆ ಸಂಗ್ರಹಿಸಿ, ಸಮಿತಿಗೆ ಒದಗಿಸಲು ವಿಳಂಬವಾಯಿತು" ಎಂದು ಸಮಜಾಯಿಸಿ ನೀಡಿದರು.

ಇದರಿಂದ ಮತ್ತಷ್ಟು ಕೋಪಗೊಂಡ ಪೀಠವು "ವಿಚಾರಣೆ ವಿಳಂಬವಾದರೆ ಗುತ್ತಿಗೆದಾರರ ಸ್ಥಿತಿ ಏನಾಗಬೇಕು? ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲಸ ಮಾಡಲಾಗಿದೆ ಎಂಬ ಕಾರಣಕ್ಕೆ ಬಿಲ್ ಪಾವತಿ ತಡೆ ಹಿಡಿಯಲಾಗುತ್ತಿದೆಯೇ? ಅವರಿಗೆ ಯಾವಾಗ ಬಿಲ್‌ ಪಾವಿಸುತ್ತೀರಿ? ವಿಚಾರಣೆ ತಡವಾಗಿದೆ ಎಂಬ ಕಾರಣ ಮುಂದುಟ್ಟುಕೊಂಡು ಬಿಲ್‌ ಪಾವತಿಸುವಲ್ಲಿ ವಿಳಂಬ ಮಾಡುವುದನ್ನು ಒಪ್ಪಲಾಗದು. ದಾಖಲೆಗಳನ್ನು ಸಲ್ಲಿಸಬೇಕಾಗಿರುವ ಕರ್ತವ್ಯದಲ್ಲಿ ಲೋಪ ಎಸಗಿರುವ ನೋಡಲ್ ಅಧಿಕಾರಿ ಯಾರು? ಅವರ ವಿರುದ್ಧ ಕ್ರಮಕ್ಕೆ ಆದೇಶಿಸಲಾಗುವುದು" ಎಂದು ಖಾರವಾಗಿ ನುಡಿಯಿತು.

ಇದಕ್ಕೆ ಅಡ್ವೊಕೇಟ್ ಜನರಲ್‌ ಅವರು "ಹಿರಿತನದ ಆಧಾರದಲ್ಲಿ ಗುತ್ತಿಗೆದಾರರಿಗೆ ಶೇ.75ರಷ್ಟು ಬಿಲ್‌ ಪಾವತಿಸಲಾಗಿದೆ. ಶೇ.25ರಷ್ಟು ಬಾಕಿ ಉಳಿಸಿಕೊಳ್ಳಲಾಗಿದೆ. ಮಧ್ಯಾಹ್ನ 2.30ಕ್ಕೆ ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ ಜೊತೆಗಿನ ಸರ್ಕಾರದ ಸಂವಹನದ ವಿವರಣೆ, ಗುತ್ತಿಗೆದಾರರಿಗೆ ಬಿಲ್‌ ಪಾವತಿಯ ವಿವರ ಸಲ್ಲಿಸಲಾಗುವುದು" ಎಂದರು.

ಅದನ್ನು ಒಪ್ಪಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ ಪೀಠವು "ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಸಮರ್ಪಕ ಉತ್ತರ ನೀಡಬೇಕು" ಎಂದು ಸೂಚಿಸಿತು.

ಮಧ್ಯಾಹ್ನದ ಕಲಾಪದಲ್ಲಿ ಅರ್ಜಿಯನ್ನು ಮತ್ತೆ ವಿಚಾರಣೆಗೆ ತೆಗೆದುಕೊಂಡಾಗ ಅಡ್ವೋಕೇಟ್ ಜನರಲ್‌ ಅವರು "ಆರೋಪ ಇರುವ ಕಾಮಗಾರಿಗಳಲ್ಲಿ ಶೇ.50ರಷ್ಟು ಮತ್ತು ಆರೋಪ ಇಲ್ಲದ ಕಾಮಗಾರಿಗಳಿಗೆ ಶೇ.75ರಷ್ಟ ಬಿಲ್‌ ಪಾವತಿಸಲಾಗಿದೆ. ಸಮಿತಿವು ವಿಚಾರಣೆ ಪೂರ್ಣಗೊಳಿಸಲು ಸ್ವಲ್ಪ ಕಾಲಾವಕಾಶ ನೀಡಬೇಕು" ಎಂದು ಕೋರಿದರು. ಅರ್ಜಿದಾರರ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಅವರು "ಯಾವ ಗುತ್ತಿಗೆದಾರರಿಗೂ ಶೇ.75ರಷ್ಟು ಬಿಲ್‌ ಪಾವತಿಯಾಗಿಲ್ಲ" ಎಂದು ತಿಳಿಸಿದರು.

ಆಗ ಪೀಠವು "ಕೆಲಸ ಮಾಡಿಲ್ಲ ಎಂದು ಬಿಲ್‌ ತಡೆಹಿಡಿದರೆ ಅರ್ಥವಿದೆ. ಕೆಲಸ ಮಾಡಿದರೂ ಬಿಲ್‌ ಪಾವತಿಸದಿರುವುದನ್ನು ಒಪ್ಪಲಾಗದು. ಕಾಮಗಾರಿ ನಡೆದಿದೆ ಅಥವಾ ಇಲ್ಲ ಎಂಬುದರ ತನಿಖೆಗೆ ಎಷ್ಟು ದಿನ ಅಗತ್ಯವಿದೆ" ಎಂದು ಪ್ರಶ್ನಿಸಿದರು. ಅಂತಿಮವಾಗಿ ಸಮಿತಿ ವಿಚಾರಣೆ ಪೂರ್ಣಗೊಳಿಸಲು ಆರು ವಾರ ಕಾಲಾವಕಾಶ ನೀಡಿ ಪೀಠ ಆದೇಶಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com