ಹುಕ್ಕಾ ಬಾರ್ ನಿಷೇಧ ಬೆನ್ನಲ್ಲೇ ಸಿಸಿಬಿ ಬೇಟೆ: ಅಕ್ರಮವಾಗಿ ಉತ್ಪನ್ನಗಳನ್ನು ಪೂರೈಸುತ್ತಿದ್ದ 9 ಮಂದಿ ಸೆರೆ

ಅಕ್ರಮವಾಗಿ ಹುಕ್ಕಾ ಬಾರ್‌ಗಳಿಗೆ ನಿಕೋಟಿನ್ ಹಾಗೂ ತಂಬಾಕು ಉತ್ಪನಗಳನ್ನು ಪೂರೈಸುತ್ತಿದ್ದ 9 ಮಂದಿಯನ್ನು ಬಂಧಿಸಿ 1..45 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಬೆಂಗಳೂರು ನಗರ ಅಪರಾಧ ವಿಭಾಗ(CCB police) ಜಪ್ತಿ ಮಾಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಅಕ್ರಮವಾಗಿ ಹುಕ್ಕಾ ಬಾರ್‌ಗಳಿಗೆ ನಿಕೋಟಿನ್ ಹಾಗೂ ತಂಬಾಕು ಉತ್ಪನಗಳನ್ನು ಪೂರೈಸುತ್ತಿದ್ದ 9 ಮಂದಿಯನ್ನು ಬಂಧಿಸಿ 1..45 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಬೆಂಗಳೂರು ನಗರ ಅಪರಾಧ ವಿಭಾಗ(CCB police) ಜಪ್ತಿ ಮಾಡಿದೆ.

ಮೈಸೂರಿನ ಮುರಳೀಧರ್‌, ಇರೋದಯ ಅಂತೋಣಿ, ಸಂಪಂಗಿರಾಮನಗರದ ವಿಶ್ವನಾಥ್‌ ಪ್ರತಾಪ್ ಸಿಂಗ್‌ ಅಲಿಯಾಸ್ ಬಿಪಿನ್, ಭರತ್‌, ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಕಂಡಿಬೇಡಳ ಮಧು, ಹರಿಕೃಷ್ಣ, ರಮೇಶ್, ದಿವಾಕರ್ ಚೌಧರಿ ಹಾಗೂ ಮಹದೇವಪುರದ ಮಧು ಬಂಧಿತ ಆರೋಪಿಗಳಾಗಿದ್ದಾರೆ. 

ಆರೋಪಿಗಳಿಂದ ತಂಬಾಕು ಹಾಗೂ ನಿಕೋಟಿನ್ ಅಂಶವಿರುವ ‘ಅಪ್ಜಲ್’ ಹೆಸರಿನ ಮೊಲಾಸಿಸ್ (ಹುಕ್ಕಾ ಬಾರ್‌ಗೆ ಬಳಸುವ ಉತ್ಪನ್ನ) ಮತ್ತು ತಂಬಾಕು ಉತ್ಪನ್ನಗಳಾದ ದಿಲ್‌ಬಾಗ್, ಜೆಡ್ಎಲ್-1, ಆ್ಯಕ್ಷನ್‌-7, ಬಾದ್‌ಷಾ, ಮಹಾ ರಾಯಲ್-717 ಸೇರಿದಂತೆ ಒಟ್ಟು 1.45 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 

ಚಾಮರಾಜಪೇಟೆಯಲ್ಲಿ ನಿಕೋಟಿನ್‌ ಉತ್ಪನ್ನಗಳನ್ನು ಅಕ್ರಮವಾಗಿ ಮುರಳೀಧರ್‌, ಅಂತೋಣಿ, ವಿಶ್ವನಾಥ್‌ ಪ್ರತಾಪ್ ಸಿಂಗ್‌, ಭರತ್‌ ದಾಸ್ತಾನು ಮಾಡಿದ್ದರೆ, ಇನ್ನುಳಿದವರು ರಾಮಮೂರ್ತಿ ನಗರ ಹಾಗೂ ಮಹದೇವಪುರದಲ್ಲಿ ಪ್ರತ್ಯೇಕವಾಗಿ ದಂಧೆ ನಡೆಸುತ್ತಿದ್ದರು ಎಂದು ತಿಳಿದು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. 

ಆರೋಪಿಗಳ ವಿರುದ್ಧ 1919ರ ಪಾಯ್ಸನ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಹುಕ್ಕಾ ನಿಷೇಧದ ಆದೇಶದಲ್ಲಿ ನಿಕೋಟಿನ್‌ ವಿಷಕಾರಿ ಅಂಶ ಎಂದು ಉಲ್ಲೇಖಿಸಲಾಗಿದೆ. ಹೀಗಾಗಿ ಪಾಯ್ಸನ್‌ ಕಾಯ್ದೆಯನ್ನು ಕೂಡಾ ಎಫ್‌ಐಆರ್‌ನಲ್ಲಿ ಅಡಕಗೊಳಿಸಲಾಗಿದೆ. ಇದರಲ್ಲಿ ದಂಡ ಸಹಿತ 10 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿದೆ.

ಇತ್ತೀಚಿಗೆ ಯುವ ಸಮೂಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಹೇಳಿ ರಾಜ್ಯದಲ್ಲಿ ಹುಕ್ಕಾ ಬಾರ್ ನ್ನು ಸರ್ಕಾರ ನಿಷೇಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com