ಕನ್ನಡಿಗರ ತೆರಿಗೆ ಹಣ ರಾಹುಲ್ ಗಾಂಧಿ ಜೇಬು ಸೇರುತ್ತಿದೆ: ಸರ್ಕಾರದ ವಿರುದ್ಧ ಆರ್ ಅಶೋಕ, ಸಿಟಿ ರವಿ ಕಿಡಿ

ಆನೆ ದಾಳಿಗೆ ಬಲಿಯಾದ ಕೇರಳದ ವ್ಯಕ್ತಿ ಕುಟುಂಬಕ್ಕೆ ಪರಿಹಾರ ನೀಡಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಬಿಜೆಪಿ ವಿರೋಧ ಪಕ್ಷದ ನಾಯಕ ಆರ್ ಅಶೋಕ ಮತ್ತು ಸಿಟಿ ರವಿ ಖಂಡಿಸಿದ್ದಾರೆ.
ಸಿಟಿ ರವಿ- ಆರ್ ಅಶೋಕ
ಸಿಟಿ ರವಿ- ಆರ್ ಅಶೋಕ

ಬೆಂಗಳೂರು: ಕೇರಳದಲ್ಲಿ ಆನೆ ದಾಳಿಗೆ ಬಲಿಯಾದವರ ಕುಟುಂಬಕ್ಕೆ ಪರಿಹಾರ ನೀಡಿರುವ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿರುವ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಕನ್ನಡಿಗರ ತೆರಿಗೆ ಹಣ ರಾಹುಲ್ ಗಾಂಧಿಯವರ ಜೇಬಿಗೆ ಸೇರುತ್ತಿದೆ ಎಂದು ಮಂಗಳವಾರ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಕನ್ನಡಿಗರ ತೆರಿಗೆ ಹಣವನ್ನು ಕೇರಳ ಸಂಸದರಾದ ರಾಹುಲ್ ಗಾಂಧಿ ಮತ್ತು ಕೆಸಿ ವೇಣುಗೋಪಾಲ್ ಅವರ ಅಣತಿಯಂತೆ ಬಿಡುಗಡೆ ಮಾಡಲು ಕರ್ನಾಟಕವೇನು ಕಾಂಗ್ರೆಸ್ ಪಕ್ಷದ ಆಸ್ತಿ ಅಂದುಕೊಂಡಿದ್ದೀರಾ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರೇ? ಎಂದಿದ್ದಾರೆ.

ಮುಂದುವರಿದು, ಸಿಎಂ ಸಿದ್ದರಾಮಯ್ಯನವರೇ, 'ನಮ್ಮ ತೆರಿಗೆ, ನಮ್ಮ ಹಕ್ಕು' ಎಂದು ನಿಮ್ಮ ಪಕ್ಷದ ಹೈಕಮಾಂಡ್ ನಾಯಕರ ಬಳಿ ಧೈರ್ಯವಾಗಿ ಪ್ರಶ್ನಿಸಲು ನಿಮ್ಮ ಸಚಿವರಿಗೆ ತಾಕತ್ತಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, 'ಕರ್ನಾಟಕ ಸರ್ಕಾರವು ಕೇರಳದ ಕಾಂಗ್ರೆಸ್ ಸಂಸದನ ತಾಳಕ್ಕೆ ತಕ್ಕಂತೆ ಏಕೆ ಕುಣಿಯುತ್ತಿದೆ? ಕಾಂಗ್ರೆಸ್ ತನ್ನ ನಾಯಕರ ಹಿತಾಸಕ್ತಿ ಕಾಪಾಡುವ ಸಲುವಾಗಿ ಕರ್ನಾಟಕದ ಹಿತಾಸಕ್ತಿಗೆ ಪದೇ ಪದೆ ದ್ರೋಹ ಮಾಡಿದೆ.

ತನ್ನ 'ಧಣಿಗಳ' ಮನ ಮೆಚ್ಚಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ನಿರಂತರವಾಗಿ ವಿಶ್ವಾಸಘಾತ ಮಾಡುತ್ತಿದೆ. ನಕಲಿ ಗಾಂಧಿಗಳ ಹಿತಾಸಕ್ತಿಯ ರಕ್ಷಣೆಗೆ ಕನ್ನಡಿಗರು ಎಷ್ಟು ದಿನ ತಮ್ಮ ಹಿತಾಸಕ್ತಿಗಳನ್ನು ಬಲಿ ನೀಡಬೇಕು?. ಗಾಂಧಿ ಪರಿವಾರದಲ್ಲಿ ಹುಟ್ಟಿದ್ದಾರೆ ಎನ್ನುವ ಏಕೈಕ ಸಾಧನೆಗೆ, ರಿಲಾಂಚ್ ಮೇಲೆ ರಿಲಾಂಚ್ ಮಾಡಿದರೂ ಉಡಾವಣೆಯಾಗದ ರಾಕೆಟ್ ಹಾಗಿರುವ, ನಿಮ್ಮ ಅಧಿನಾಯಕನ ಆದೇಶಕ್ಕೆ ಕನ್ನಡಿಗರ ಹಣವನ್ನು ಏಕೆ ಖರ್ಚು ಮಾಡಲಾಗುತ್ತಿದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ? ಎಂದು ಪ್ರಶ್ನಿಸಿದ್ದಾರೆ.

ಸಿಟಿ ರವಿ- ಆರ್ ಅಶೋಕ
ರಾಹುಲ್ ಗಾಂಧಿ ಸಲಹೆಯಂತೆ ಕರ್ನಾಟಕದ ಹಣ ದುರುಪಯೋಗ: ಬಿ ವೈ ವಿಜಯೇಂದ್ರ ಆರೋಪ

ಅಂದಹಾಗೆ ರಾಜ್ಯದ ಮಂತ್ರಿಯೊಬ್ಬರ ಅಧಿಕೃತ ಆದೇಶ ಪತ್ರದ ನಕಲನ್ನು ಹೊರ ರಾಜ್ಯದ ಕಾಂಗ್ರೆಸ್ ಪದಾಧಿಕಾರಿಗಳ ಹೆಸರಿನಲ್ಲಿ ಹೊರಡಿಸಿರುವ ಔಚಿತ್ಯ ಏನು? ಕೆಸಿ ವೇಣುಗೋಪಾಲ್ ನಿಮ್ಮ ಸರ್ಕಾರದ ಕೊರಿಯರ್ ಬಾಯ್ ಎನ್ನುವ ಕಾರಣಕ್ಕೋ? ಅಥವಾ ನಿಮ್ಮ ಸರ್ಕಾರದ ಪೆರ್ಸೆಂಟೇಜ್ (ಹೈಕಮಾಂಡ್ ತೆರಿಗೆ) ವ್ಯವಹಾರಕ್ಕೆ ಅನುಕೂಲವಾಗಲಿ ಎಂದೋ? ಎಂದು ವಾಗ್ದಾಳಿ ನಡೆಸಿದ್ದಾರೆ.

ತನ್ನ ವೈಫಲ್ಯಗಳಿಗೆ ಕೇಂದ್ರ ಸರ್ಕಾರವನ್ನು ಧೂಷಿಸುತ್ತಿರುವ ಅಸಮರ್ಥ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮದರಸಾಗಳಿಗೆ, ವಕ್ಫ್ ಆಸ್ತಿಗಳಿಗೆ ಮತ್ತು ಇಂತಹ ಎಡಬಿಡಂಗಿ ವಿಚಾರಗಳಿಗೆ ಖರ್ಚು ಮಾಡುವಲ್ಲಿ ಅಪಾರ ಹಾಗೂ ವಿಶೇಷ ಆಸಕ್ತಿ ಇರುವಂತೆ ಕಾಣುತ್ತದೆ. ತುಘಲಕ್ ದರ್ಬಾರ್ ಅನ್ನುವುದನ್ನು ಇತಿಹಾಸದಲ್ಲಿ ಓದಿದ್ದೆವು, ಕೇಳಿದ್ದೆವು. ಆದರೆ, ಈಗ ಸಿದ್ದರಾಮಯ್ಯ ಅವರ ರಾಜ್ಯಭಾರದಲ್ಲಿ ಜನವಿರೋಧಿ "ತುಘಲಕ್ ದರ್ಬಾರ್" ಅನುಭವಿಸಬೇಕಾಗಿ ಬಂದಿದ್ದು ಕನ್ನಡಿಗರ ಪಾಲಿನ ದುರ್ದೈವ ಎಂದಿದ್ದಾರೆ.

ಕೇರಳದ ವಯನಾಡಿನಲ್ಲಿ ಆನೆ ದಾಳಿಯಿಂದ ಮೃತಪಟ್ಟ ಅಜೀಶ್ ಅವರ ಕುಟುಂಬಕ್ಕೆ ಕರ್ನಾಟಕ ಅರಣ್ಯ ಸಚಿವ ಬಿ ಈಶ್ವರ್ ಖಂಡ್ರೆ ಸೋಮವಾರ 15 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ರಾಹುಲ್ ಗಾಂಧಿ ಅವರ ಸಲಹೆಯಂತೆ ಪರಿಹಾರ ನೀಡಲಾಗುತ್ತಿದೆ ಎಂದು ಸರ್ಕಾರದ ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಸೆರೆಹಿಡಿಯಲಾದ 'ಮಕ್ನಾ' ಹೆಸರಿನ ಆನೆಯನ್ನು 2023 ರ ನವೆಂಬರ್‌ನಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಯಿತು. ಇದಕ್ಕೆ ಕಳೆದ ವರ್ಷ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಅದಾದ ಎರಡು ತಿಂಗಳ ನಂತರ ಇದೇ ಆನೆ ರಾಹುಲ್ ಗಾಂಧಿಯವರ ಕ್ಷೇತ್ರವಾದ ಕೇರಳದ ವಯನಾಡ್ ಪ್ರದೇಶದಲ್ಲಿ ಕಾಣಿಸಿಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com