ದೇವಸ್ಥಾನದ ಹುಂಡಿ ಹಣದ ಮೇಲೆ ಕಾಂಗ್ರೆಸ್ ಕಣ್ಣು, ದರ್ಶನ್ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ. ಈ ದಿನದ ಸುದ್ದಿ ಮುಖ್ಯಾಂಶಗಳು: 22-02-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉತ್ತರ ಕರ್ನಾಟಕದಲ್ಲಿ 6,775 ಕೋಟಿ ಹೆದ್ದಾರಿ ಕಾಮಗಾರಿಗೆ ನಿತಿನ್ ಗಡ್ಕರಿ ಚಾಲನೆ

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಬಂಪರ್‌ ಉಡುಗೊರೆ ನೀಡಿದ್ದು, 6,975 ಕೋಟಿ ರೂ. ಮೌಲ್ಯದ 376 ಕಿ.ಮೀ. ಹೆದ್ದಾರಿ ಕಾಮಗಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಿದರು. ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ 8 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ವೇಳೆ ಮಾತನಾಡಿದ ನಿತಿನ್ ಗಡ್ಕರಿ ಅವರು, ಬೆಳಗಾವಿ ಮುಂದಿನ ದಿನಗಳಲ್ಲಿ ಎಥೆನಾಲ್‌ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ ಎಂದರು. ನಂತರ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸತೀಶ್ ಜಾರಕಿಹೊಳಿ, ಕೇಂದ್ರ ಸಚಿವ ನಿತೇನ್ ಗಡ್ಕರಿ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರನ್ನು ನೋಡಿದರೆ ಹೆಮ್ಮೆ ಆಗುತ್ತದೆ ಎಂದರು.

ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆ ಮೂರು ದಿನ ರಾಗಿ ಮಾಲ್ಟ್ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಸರ್ಕಾರಿ ಶಾಲಾ ಮಕ್ಕಳಿಗೆ ವಾರಕ್ಕೆ ಮೂರು ದಿನ ರಾಗಿ ಮಾಲ್ಟ್ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಸೌಧಗ ಬ್ಯಾಂಕ್ವೆಟ್ ಹಾಲ್ ನಲ್ಲಿ ಇಂದು ಚಾಲನೆ ನೀಡಿದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕೆಎಂಎಫ್ ಹಾಗೂ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದೊಂದಿಗೆ ಸರ್ಕಾರಿ ಶಾಲಾ ಮಕ್ಕಳಿಗಾಗಿ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಕಾರ್ಯಕ್ರಮ ಜಾರಿಗೆ ತರಲಾಗಿದೆ.

ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಕರ್ನಾಟಕ ಮೂಲದ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ

ಉದ್ಯೋಗಕ್ಕಾಗಿ ರಷ್ಯಾಕ್ಕೆ ತೆರಳಿದ್ದ ಕರ್ನಾಟಕ ಮೂಲದ ಯುವಕರನ್ನು ಯುದ್ಧಕ್ಕೆ ಬಳಸಿಕೊಂಡ ಆರೋಪ ಕೇಳಿಬಂದಿದೆ. ಕಲಬುರಗಿಯ ಮೂವರು ಯುವಕರು ಸೇರಿದಂತೆ ಭಾರತದ ಆರು ಯುವಕರನ್ನು ರಷ್ಯಾ ಸೇನೆ ಸೇರಿಕೊಂಡು ಉಕ್ರೇನ್ ಗಡಿಯಲ್ಲಿ ಯುದ್ಧಕ್ಕೆ ನಿಯೋಜಿಸಿದೆ. ತಮಗೆ ತರಬೇತಿ ನೀಡಲಾಗಿದೆ ಎಂದು ಹೇಳಿ ನಮ್ಮನ್ನು ಗಡಿಯಲ್ಲಿ ನಿಯೋಜನೆ ಮಾಡಿದ್ದಾರೆ ಎಂದು ಯುವಕರು ಅಳಲು ತೋಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ಕಲಬುರಯ ಮೂವರು ಯುವಕರು ರಷ್ಯಾಕ್ಕೆ ಹೋಗಿದ್ದ ಮಾಹಿತಿಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ. ಇದನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೆ ತಂದು ವಿದೇಶಾಂಗ ಸಚಿವರ ಬಳಿ ಮಾತನಾಡುವಂತೆ ಮನವಿ ಮಾಡಿದ್ದೇವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಖರ್ಗೆ ತಿಳಿಸಿದ್ದಾರೆ ಎಂದರು. ರಷ್ಯಾಕ್ಕೆ ಉದ್ಯೋಗಕ್ಕೆ ತೆರಳಿ ಯುದ್ಧದಲ್ಲಿ ಬಳಕೆಯಾಗಿರುವ ರಾಜ್ಯ ಹಾಗೂ ದೇಶದ ಯುವಕರನ್ನು ಕೇಂದ್ರ ಸರ್ಕಾರ ರಕ್ಷಣೆ ಮಾಡಬೇಕಿದೆ ಎಂದರು.

ಮಂಗನ ಕಾಯಿಲೆ ಉತ್ತರ ಕನ್ನಡದಲ್ಲಿ ಮಹಿಳೆ ಸಾವು

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆಯ ಭೀತಿ ಹೆಚ್ಚುತ್ತಿದ್ದು, ಮಂಗನ ಕಾಯಿಲೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ 65 ವರ್ಷದ ಮಹಿಳೆಯೊಬ್ಬರು ಬಲಿಯಾಗಿದ್ದಾರೆ. ಜಿಲ್ಲೆಯಲ್ಲಿ ಮಂಗನ ಕಾಯಿಲೆಯಿಂದ ಉಂಟಾದ ಮೊದಲ ಸಾವಿನ ಪ್ರಕರಣ ಇದಾಗಿದ್ದು, ಪರಿಣಾಮಕಾರಿ ಲಸಿಕೆ ಇನ್ನೂ ಲಭ್ಯವಾಗದ ಕಾರಣ ಆರೋಗ್ಯ ಅಧಿಕಾರಿಗಳು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸಿದ್ದಾಪುರ ಸಮೀಪದ ಜಿಡ್ಡಿ ಗ್ರಾಮದ ಮಹಿಳೆಯ ಸ್ಥಿತಿ ಬುಧವಾರ ಗಂಭೀರವಾಗಿತ್ತು. ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 43 ಮಂಗನ ಕಾಯಿಲೆ ಪ್ರಕರಣಗಳು ದಾಖಲಾಗಿವೆ. ಎಲ್ಲಾ ಪ್ರಕರಣಗಳು ಸಿದ್ದಾಪುರ ತಾಲೂಕಿನಲ್ಲೇ ಪತ್ತೆಯಾಗಿವೆ.

ದರ್ಶನ್ ವಿರುದ್ಧ ಸಿಡಿದೆದ್ದ ಗೌಡತಿಯರ ಸೇನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರುದ್ಧ ಒಂದಿಲ್ಲೊಂದು ವಿವಾದಗಳು ಸುತ್ತಿಕೊಳ್ಳುತ್ತಲೇ ಇವೆ. ನಿರ್ಮಾಪಕ ಉಮಾಪತಿ ಗೌಡ ಹಾಗೂ ದರ್ಶನ್ ನಡುವಿನ ಕಾಟೇರ ಚಿತ್ರದ ಟೈಟಲ್ ಜಟಾಪಟಿ ನಡುವೆ ಇದೀಗ ದರ್ಶನ್ ವಿರುದ್ಧ ಗೌಡತಿಯರ ಸೇನೆ ಸಿಡಿದೆದ್ದಿದೆ. ದರ್ಶನ್ ರ 25 ವರ್ಷದ ಸಿನಿ ಪಯಣದ ಕುರಿತಂತೆ ನಡೆದ ಬೆಳ್ಳಿ ಪರ್ವ ಡಿ-25 ಸಮಾರಂಭದಲ್ಲಿ ನಟ ದರ್ಶನ್ ವೇದಿಕೆ ಮೇಲೆ ಮಹಿಳೆಯರ ಬಗ್ಗೆ ಆಡಿದ ಮಾತುಗಳಿಗೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ. ಇವತ್ತು ಇವಳು, ನಾಳೆ ಅವಳು ಎಂದು ಹೇಳಿದ್ದ ದರ್ಶನ್ ವಿರುದ್ಧ ಗೌಡತಿಯರ ಸೇನೆ ಆಕ್ರೋಶ ವ್ಯಕ್ತಪಡಿಸಿದ್ದು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ದರ್ಶನ್ ಅವರು ಈ ರೀತಿ ಉಡಾಫೆ ಆಗಿ ಮಾತನಾಡುವ ಅವಶ್ಯಕತೆ ಏನಿತ್ತು? ಈ ರೀತಿ ಮಾತುಗಳನ್ನು ನಾವು ಏಕೆ ಕೇಳಬೇಕು. ಈ ಬಗ್ಗೆ ಹೆಣ್ಣುಮಕ್ಕಳ ಬಳಿ ಕ್ಷಮೆ ಕೇಳಬೇಕು ಎಂದು ಗೌಡತಿಯರ ಸೇನೆ ಆಗ್ರಹಿಸಿದೆ.

ದೇವಾಲಯದ ಆದಾಯದ ಮೇಲೆ ರಾಜ್ಯ ಸರ್ಕಾರದ ಕಣ್ಣು: BJP ಆರೋಪ

ರಾಜ್ಯದಲ್ಲಿ ಹತ್ತು ಲಕ್ಷ ರೂಪಾಯಿಗಳ ಒಟ್ಟು ಆದಾಯವಿರುವ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸುವ ರಾಜ್ಯ ಸರ್ಕಾರದ ಕ್ರಮವನ್ನು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಗುರುವಾರ ಸಮರ್ಥಿಸಿಕೊಂಡಿದ್ದಾರೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ (ತಿದ್ದುಪಡಿ) ಮಸೂದೆಯನ್ನು ಮಂಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿತ್ತು ದೇವಸ್ಥಾನದ ಹಣದಿಂದ ತನ್ನ 'ಖಾಲಿ ಬೊಕ್ಕಸ' ತುಂಬಲು ಕಾಂಗ್ರೆಸ್ ಸರ್ಕಾರ ಬಯಸಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತಂತೆ ಸಾರಿಗೆ ಮತ್ತು ಹಿಂದೂ ಧಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿದ್ದು ಬಿಎಸ್​ ಯಡಿಯೂರಪ್ಪ ನೇತೃತ್ವದ ಸರ್ಕಾರ ಇದ್ದಾಗಲೇ ಹಣ ತೆಗೆದುಕೊಳ್ಳಲಾಗಿತ್ತು. 10 ಲಕ್ಷದೊಳಗಿನ ಆದಾಯ ದೇವಸ್ಥಾನಗಳು ಹಣ ಕೊಡುವಂತಿಲ್ಲ. 10 ಲಕ್ಷದಿಂದ 1 ಕೋಟಿ ಆದಾಯ ಇರುವ ದೇವಸ್ಥಾನಗಳು ಮಾತ್ರ 5% ಹಣ ಕೊಡಬೇಕು. ಬಿಜೆಪಿ ತಂದಿರುವ ಕಾಯ್ದೆಗಳಿಗೆ ನಾವು ತಿದ್ದುಪಡಿ ತಂದಿದ್ದೇವೆ ಅಷ್ಟೆ. ಹಿಂದೂ ದೇಗುಲಗಳ ಹಣ ಬೇರೆಯಾವುದಕ್ಕೂ ಬಳಕೆ ಆಗುವುದಿಲ್ಲ. ಈ ಹಣ ಮುಜರಾಯಿ ಇಲಾಖೆಗೂ ಬರಲ್ಲ, ಧಾರ್ಮಿಕ ಪರಿಷತ್​ನ ಅಕೌಂಟ್​​ನಲ್ಲೇ ಇರುತ್ತದೆ. ಬರುವ 30 ಕೋಟಿ ಹಣದಲ್ಲಿ ಸಿ ವರ್ಗದ ದೇವಸ್ಥಾನಕ್ಕೆ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com