ಬೆಂಗಳೂರು: ಎಲ್ಲಾ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್ ಪಿ) ನಿಗದಿ, ತಾರತಮ್ಯ ಮಾಡದೇ ಆರ್ಥಿಕ ಸಂಪನ್ಮೂಲಗಳ ಸಮಾನ ಹಂಚಿಕೆಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಿರ್ಣಯದಲ್ಲಿ ರಾಜ್ಯಕ್ಕೆ ತೆರಿಗೆ ಪಾಲು ಹಾಗೂ ವಿಶೇಷ ಅನುದಾನ ಸಮರ್ಪಕವಾಗಿ ಸಿಗದೇ ಇರುವುದನ್ನು ಖಂಡಿಸಲಾಗಿದೆ. ನಿರ್ಣಯದ ವಿಷಯವಾಗಿ ಬಿಜೆಪಿ ನೇತೃತ್ವದ ವಿಪಕ್ಷಗಳು ಗದ್ದಲ ಉಂಟುಮಾಡಿದವು.
ರೈತರ ಎಲ್ಲಾ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವ ಬಗ್ಗೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಈ ಸದನವು ಸರ್ವಾನುಮತದಿಂದ ನಿರ್ಣಯಿಸುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ರೈತರ ಬೆಂಬಲಕ್ಕಾಗಿ ನಿರ್ಣಯವನ್ನು ಮಂಡಿಸಿದರು.
ರೈತರು, ಬೆಳೆಗಳ ಮೇಲಿನ MSP ಗಾಗಿ ತಮ್ಮ ಬೇಡಿಕೆಗಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಪಂಜಾಬ್ ಮತ್ತು ಹರಿಯಾಣದಿಂದ ದೆಹಲಿಯ ಕಡೆಗೆ ಪ್ರತಿಭಟನಾ ಮೆರವಣಿಗೆ ಕೈಗೊಂಡಿರುವ ಸಂದರ್ಭದಲ್ಲಿ ಈ ನಿರ್ಣಯವನ್ನು ಅಂಗೀಕರಿಸಲಾಗಿದೆ. ರೈತರೊಂದಿಗೆ ಸಂಘರ್ಷಕ್ಕೆ ಆಸ್ಪದ ನೀಡದೆ ಅವರ ಅತ್ಯಂತ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಈ ಸದನ ಒತ್ತಾಯಿಸುತ್ತದೆ ಎಂದು ಹೆಚ್ ಕೆ ಪಾಟೀಲ್ ಹೇಳಿದ್ದಾರೆ.
ತಾವು ಬೆಳೆದ ಬೆಳೆಗೆ ಲಾಭದಾಯಕ ಬೆಲೆ ನಿಗದಿಯಾಗಬೇಕು ಎಂಬುದು ಪ್ರತಿಯೊಬ್ಬ ಭಾರತೀಯ ರೈತರ ಆಶಯವಾಗಿದೆ. ಎಲ್ಲಾ ಜನಪರ ಪ್ರಜಾಸತ್ತಾತ್ಮಕ ನಾಗರಿಕ ಸರ್ಕಾರಗಳು ಈ ಉತ್ತಮ ಆದರ್ಶವನ್ನು ಜಾರಿಗೆ ತರಲು ಮತ್ತು ಕೃಷಿಯನ್ನು ಲಾಭದಾಯಕವಾಗಿಸಲು ಒತ್ತಾಯಿಸುತ್ತವೆ ಎಂದು ಸರ್ಕಾರ ತನ್ನ ನಿರ್ಣಯದಲ್ಲಿ ತಿಳಿಸಿದೆ.
ಕೇಂದ್ರದ ಬಿಜೆಪಿ ಸರ್ಕಾರ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ನೀಡಿ ಗೌರವಿಸುತ್ತಿರುವ ಕೃಷಿ ವಿಜ್ಞಾನಿ ಮತ್ತು ನೀತಿ ಸಲಹೆಗಾರ ದಿವಂಗತ ಡಾ ಎಂ ಎಸ್ ಸ್ವಾಮಿನಾಥನ್ ಅವರನ್ನು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ. ರೈತನ ಸಾಗುವಳಿ ವೆಚ್ಚದ ಶೇ.50 ರಷ್ಟು ಕನಿಷ್ಠ ಬೆಂಬಲ ಬೆಲೆ ಘೋಷಿಸುವ ಮೂಲಕ ‘ಹಸಿರು ಕ್ರಾಂತಿ’ಯನ್ನು ಸಾಧಿಸುವಲ್ಲಿ ಸರಕಾರಗಳು ನಿರೀಕ್ಷಿತ ಮಟ್ಟದಲ್ಲಿ ಯಾವುದೇ ಪ್ರಗತಿಯನ್ನೂ ಮಾಡಿಲ್ಲ, ಯಾವುದೇ ಬದಲಾವಣೆಯನ್ನೂ ತಂದಿಲ್ಲ ಎಂದು ಸ್ವಾಮಿನಾಥನ್ ವರದಿಯಲ್ಲಿ ಹೇಳಿದ್ದರು.
Advertisement