

ಬೆಂಗಳೂರು: ಕೆಲ ಮಸೂದೆಗಳ ಅಂಗೀಕಾರ ಬಾಕಿ ಹಿನ್ನೆಲೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಕೆಲವು ಪ್ರಶ್ನೆಗಳಿಗೆ ಉತ್ತರ ನೀಡಲು ಬಾಕಿ ಇರುವುದರಿಂದ ವಿಧಾನಸಭೆ ಕಲಾಪವನ್ನು ಫೆಬ್ರವರಿ 26 ಸೋಮವಾರದವರೆಗೆ ಮುಂದೂಡಲಾಗಿದೆ.
ಪೂರ್ವ ನಿಗದಿ ಪ್ರಕಾರ ವಿಧಾನಸಭೆ ಕಲಾಪ ಇಂದಿಗೆ ಮುಕ್ತಾಯವಾಗಬೇಕಿತ್ತು. ಆದರೆ ಕೆಲವು ಪ್ರಮುಖ ಮಸೂದೆಗಳ ಮೇಲಿನ ಚರ್ಚೆ, ಅಂಗೀಕಾರ ಬಾಕಿಯಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅನಾರೋಗ್ಯವಿರುವುದರಿಂದ ಕಲಾಪದಲ್ಲಿ ಸರಿಯಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ನಾಳೆ ಮತ್ತು ನಾಡಿದ್ದು ವಿಶ್ರಾಂತಿ ತೆಗೆದುಕೊಂಡು ಸೋಮವಾರ ಸದನದಲ್ಲಿ ಕಲಾಪಕ್ಕೆ ಹಾಜರಾಗಲಿದ್ದಾರೆ.
ಇಂದು ನಡೆದ ವಿಧಾನಸಭೆ ಕಾರ್ಯಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.ಸಭಾಪತಿ ಯು.ಟಿ. ಖಾದರ್ ನೇತೃತ್ವದಲ್ಲಿ ಇಂದು ವಿಧಾನಸಭೆ ಕಾರ್ಯ ಕಲಾಪ ಸಲಹಾ ಸಮಿತಿ ಸಭೆ ನಡೆದಿದ್ದು, ಸಭೆಯಲ್ಲಿ ಸೋಮವಾರ ಒಂದು ದಿನಕ್ಕೆ ವಿಧಾನಸಭೆ ಕಲಾಪ ನಡೆಸುವ ಮತ್ತು ಮಂಗಳವಾರ ರಾಜ್ಯಸಭಾ ಚುನಾವಣೆ ನಡೆಸುವ ನಿರ್ಣಯ ಕೈಗೊಳ್ಳಲಾಗಿದೆ. ಹೀಗಾಗಿ ಅಂದು ಕಲಾಪ ನಡೆಯುವುದಿಲ್ಲ.
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫೆ.26 ರಂದು ಬೆಳಗ್ಗೆ 9:30ಕ್ಕೆ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಸೇರಿದಂತೆ ಇತರೆ ಬಿಎಸಿ ಸದಸ್ಯರು ಭಾಗಿಯಾಗಿದ್ದರು.
ಕರ್ನಾಟಕ ಬಜೆಟ್ ಮಂಡನೆ ಬಳಿಕ ನಿರಂತರವಾಗಿ ಜಿಲ್ಲಾ ಪ್ರವಾಸಗಳನ್ನು ಕೈಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಅಂದು ವಿಶ್ರಾಂತಿಗಾಗಿ ಸಿಎಂ ಸಿದ್ದರಾಮಯ್ಯ ವಿಧಾನಸೌಧದಿಂದ ಕಾವೇರಿ ನಿವಾಸಕ್ಕೆ ತೆರಳಿದ್ದರು. ಅಂದು ವಿಶ್ರಾಂತಿ ಪಡೆದು, ಮರುದಿನ ಮತ್ತೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು. ಆದರೆ ಇಂದು ಮತ್ತೆ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ.
Advertisement