'ನಡೆದಾಡುವ ಕಾಡಿನ ನಿಘಂಟು' ಖ್ಯಾತಿಯ ವನ್ಯಜೀವಿ ಸಂರಕ್ಷಕ ಕೆಎಂ ಚಿಣ್ಣಪ್ಪ ನಿಧನ

'ನಡೆದಾಡುವ ಕಾಡಿನ ನಿಘಂಟು' ಎಂದೇ ಖ್ಯಾತಿ ಗಳಿಸಿದ್ದ ಖ್ಯಾತ ವನ್ಯಜೀವಿ ಸಂರಕ್ಷಕ ಕೆಎಂ ಚಿಣ್ಣಪ್ಪ ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.
ವನ್ಯಜೀವಿ ಸಂರಕ್ಷಕ ಕೆಎಂ ಚಿಣ್ಣಪ್ಪ
ವನ್ಯಜೀವಿ ಸಂರಕ್ಷಕ ಕೆಎಂ ಚಿಣ್ಣಪ್ಪTNIE

ಬೆಂಗಳೂರು: 'ನಡೆದಾಡುವ ಕಾಡಿನ ನಿಘಂಟು' ಎಂದೇ ಖ್ಯಾತಿ ಗಳಿಸಿದ್ದ ಖ್ಯಾತ ವನ್ಯಜೀವಿ ಸಂರಕ್ಷಕ ಕೆಎಂ ಚಿಣ್ಣಪ್ಪ ಅವರು ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

84 ವರ್ಷದ ಚಿಣ್ಣಪ್ಪ ಅವರು ಅನಾರೋಗ್ಯದಿಂದ ಇಂದು ಬೆಳಗ್ಗೆ 11:20ರ ಗಂಟೆಗೆ ವಿಧಿವಶರಾಗಿದ್ದು, ಅವರ ಸ್ನೇಹಿತರು, ಸಂಬಂಧಿಗಳು ಮತ್ತು ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯ ಹಾಗೂ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಚಿಣ್ಣಪ್ಪ ಅವರಿಗೆ ಕೊಡಗು ಜಿಲ್ಲೆ ಶ್ರೀಮಂಗಲದ ಕುಮಟೂರು ಗ್ರಾಮದ ಮನೆಯಲ್ಲಿ ಸೋಮವಾರ ಬೆಳಗ್ಗೆ ಹೃದಯಾಘಾತವಾಗಿತ್ತು. ಮಂಗಳವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ಹೇಳಿದರು.

“ಚಿಣ್ಣಪ್ಪ ಅವರು 1995ರಿಂದ ಮೊದಲ ವನ್ಯಜೀವಿ ಅಧ್ಯಕ್ಷರು. ವನ್ಯಜೀವಿ ಸಂರಕ್ಷಣೆಗಾಗಿ ಭಾರತದ ಅತ್ಯಂತ ಗೌರವಾನ್ವಿತ ಮತ್ತು ಪ್ರಸಿದ್ಧ ಹೋರಾಟಗಾರರಲ್ಲಿ ಒಬ್ಬರಾಗಿದ್ದರು. ಖಡಕ್ ಅರಣ್ಯಾಧಿಕಾರಿಯೊಬ್ಬರು ಹುಲಿ ಸಂರಕ್ಷಣೆಗಾಗಿ ಅಪಾರ ಆಪತ್ತುಗಳ ವಿರುದ್ಧ ಹೇಗೆ ಹೋರಾಡಿದರು, ಈ ಪ್ರಕ್ರಿಯೆಯಲ್ಲಿ ಇತರರನ್ನು ಹೇಗೆ ಪ್ರೇರೇಪಿಸಿದರು ಎಂಬುದಕ್ಕೆ ಚಿಣ್ಣಪ್ಪ ಒಂದು ಉಜ್ವಲ ಉದಾಹರಣೆಯಾಗಿದ್ದಾರೆ. ಅವರ ಅಸಾಧಾರಣ ಫೀಲ್ಡ್ ಕ್ರಾಫ್ಟ್, ಗಟ್ಟಿತನ ಮತ್ತು ಶೌರ್ಯದಿಂದ ಅವರು ನಮ್ಮನ್ನು ಮುನ್ನಡೆಸಿದರು. ಅವರ ಕ್ರಮಗಳ ಪರಿಣಾಮವಾಗಿ, ವನ್ಯಜೀವಿಗಳ ಜನಸಂಖ್ಯೆಯು 1980 ರ ದಶಕದ ಮಧ್ಯಭಾಗದಲ್ಲಿ ಏಷ್ಯಾದಲ್ಲಿ ಎಲ್ಲಕ್ಕಿಂತ ಹೆಚ್ಚಿನ ಸಾಂದ್ರತೆಯೊಂದಿಗೆ ನಾಟಕೀಯವಾಗಿ ಚೇತರಿಸಿಕೊಂಡಿತ್ತು” ಎಂದು ವೈಲ್ಡ್‌ಲೈಫ್ ಫಸ್ಟ್‌ನ ಟ್ರಸ್ಟಿ ಪ್ರವೀಣ್ ಭಾರ್ಗವ್ ಹೇಳಿದರು.

ಕೊಡಗಿನಲ್ಲಿ ಜನನ

ದಕ್ಷಿಣ ಕೊಡಗಿನ, ಈಗಿನ ಪೊನ್ನಂಪೇಟೆ ತಾಲ್ಲೂಕು ಕಾಕೂರು ಗ್ರಾಮದಲ್ಲಿ ಜನಿಸಿದ ಕೊಟ್ರಂಗಡ ಮೇದಪ್ಪ ಚಿಣ್ಣಪ್ಪ ಅವರು ಕೊಡಗಿನಲ್ಲಿಯೇ ಶಿಕ್ಷಣ ಪಡೆದಿದ್ದರು. ಮನೆಯ ಅಕ್ಕಪಕ್ಕದ ಪ್ರದೇಶವೇ ದಟ್ಟ ಕಾಡು. ಇತ್ತ ಕಡೆ ನಾಗರಹೊಳೆ, ಅತ್ತ ಕಡೆ ಕೇರಳದ ವಯನಾಡು, ಮತ್ತೊಂದು ಕಡೆ ಕೊಡಗಿನ ದಟ್ಟಾರಣ್ಯ. ಈ ಪರಿಸರದಲ್ಲಿ ಬೆಳೆದ ಅವರಿಗೆ ಕಾಡಿನ ಬಗ್ಗೆ ಅಪಾರ ಅಭಿಮಾನ, ಇದೇ ಕಾರಣದಿಂದಲೇ ಶಿಕ್ಷಣ ಮುಗಿಸುತ್ತಲೇ ಅವರು ಅರಣ್ಯ ಇಲಾಖೆಯನ್ನು ಸೇರಿಕೊಂಡರು. ಅರಣ್ಯಾಧಿಕಾರಿಯಾಗಿ ನಾಗರಹೊಳೆ, ಬಂಡೀಪುರ, ವೀರಾಜಪೇಟೆ, ಮಡಿಕೇರಿ, ಹುಣಸೂರು ಸೇರಿದಂತೆ ಹಲವು ಕಡೆ ಕೆಲಸ ಮಾಡಿದ್ದರು. ಎತ್ತರದ ನಿಲುವಿನ ಗಟ್ಟಿ ದನಿಯ ಚಿಣ್ಣಪ್ಪ ಅವರದ್ದು ಬರೀ ದೈಹಿಕವಾಗಿ ಮಾತ್ರವಲ್ಲ ಭೌತಿಕವಾಗಿಯೂ ಎತ್ತರದ ವ್ಯಕ್ತಿತ್ವ.

ಅರಣ್ಯ, ವನ್ಯಜೀವಿಗಳ ರಕ್ಷಣೆ, ಜನರೊಂದಿಗೆ ಒಡನಾಡುತ್ತಲೇ ಕಾಡಿನ ಮೇಲೆ ಒತ್ತಡ ತಗ್ಗಿಸುವುದು, ಕಾಡಿನ ಬೆಂಕಿ, ಬೇಟೆ ಸಹಿತ ಹತ್ತಾರು ಚಟುವಟಿಕೆಗಳ ಮೇಲೆ ಸದಾ ನಿಗಾ ಇಡುತ್ತಲೇ ಕೆಲಸ ಮಾಡಿದವರು ಚಿಣ್ಣಪ್ಪ. ನಾಗರಹೊಳೆ ರಕ್ಷಣೆಗೆ ತಮ್ಮನ್ನೇ ಮುಡುಪಾಗಿಸಿಟ್ಟುಕೊಂಡಿದ್ದರು. ನಾಗರಹೊಳೆ ಮಾತ್ರವಲ್ಲದೇ ದೇಶದ ಯಾವುದೇ ಅರಣ್ಯ, ವನ್ಯಜೀವಿಗಳು, ಪರಿಸರದ ಕುರಿತು ನಿಖರವಾಗಿ ಮಾತನಾಡಬಲ್ಲ ಜ್ಞಾನ ಅವರಲ್ಲಿತ್ತು. ಆಡಳಿತ ನಡೆಸುವವರು, ಇಲಾಖೆ ಹೆಸರಲ್ಲಿ ಮೋಜು ಮಾಡುವವರು, ದುಡ್ಡು ಮಾಡುವ ಅಧಿಕಾರಿಗಳು, ದಬ್ಬಾಳಿಕೆ ಮಾಡುವ ಸಂಸ್ಕೃತಿ ವಿರುದ್ದ ಅವರನ್ನು ಸದಾ ಎತ್ತರದ ಧ್ವನಿ. ಕಟು ಮಾತುಗಳಲ್ಲಿಯೇ ಅರಣ್ಯ ವಿರೋಧಿ ನೀತಿಗಳನ್ನು ಖಂಡಿಸುತ್ತಿದ್ದರು.

ಸೇವೆಯಲ್ಲಿದ್ದಾಗಲೇ ರಾಜೀನಾಮೆ

ನಾಗರಹೊಳೆ ಅರಣ್ಯಾಧಿಕಾರಿಯಾಗಿದ್ದಾಗ ಕೆಲವು ಅರಣ್ಯ ರಕ್ಷಣೆ ವಿಚಾರದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯ ಏರ್ಪಟ್ಟು ಇನ್ನೂ ಸೇವೆ ಇದ್ದಾಗಲೇ 1992ರಲ್ಲಿ ಇಲಾಖೆಗೆ ರಾಜೀನಾಮೆ ನೀಡಿದ್ದರು. ಹಾಗೆಂದು ಇಲಾಖೆ ಮೇಲಿನ ಅಭಿಮಾನ, ಕಾಡು ರಕ್ಷಣೆಯ ಧ್ಯೇಯ ಕಡಿಮೆಯಾಗಿರಲಿಲ್ಲ. ದಶಕದ ಹಿಂದೆ ನಾಗರಹೊಳೆಯ ಹೃದಯ ಭಾಗದಲ್ಲಿಯೇ ಬೆಂಕಿ ಬಿದ್ದು ಅರಣ್ಯ ನಾಶವಾಗಿತ್ತು. ಇಲಾಖೆ ಅಧಿಕಾರಿಗಳು ಸ್ಥಳೀಯರನ್ನು ನಿರ್ಲಕ್ಷಿಸಿ ಅರಣ್ಯ ನೀತಿಗಳನ್ನು ರೂಪಿಸಿದರೆ ಆಗುವ ಅನಾಹುತಗಳ ಬಗ್ಗೆ ಎಚ್ಚರಿಸಿದ್ದರು. ತಾವು ಜತನದಿಂದ ಕಾಪಾಡಿದ ಅರಣ್ಯ ಕಣ್ಣ ಮುಂದೆಯೇ ಸುಟ್ಟು ಹೋಗಿದ್ದಕ್ಕೆ ಚಿಣ್ಣಪ್ಪ ನೊಂದಿದ್ದರು.

ಚಿಣ್ಣಪ್ಪ ಅವರ ಸಾವಿಗೆ ಹಲವು ಗಣ್ಯರು ಕಂಬನಿ ಮಿಡಿದಿದ್ದು, ವಿಪಕ್ಷ ನಾಯಕ ಆರ್ ಅಶೋಕ್ ಚಿಣ್ಣಪ್ಪ ಅವರನ್ನು 'ವಾಕಿಂಗ್ ಫಾರೆಸ್ಟ್ ಎನ್‌ಸೈಕ್ಲೋಪೀಡಿಯಾ' ಎಂದು ಬಣ್ಣಿಸಿದ್ದಾರೆ. ನಡೆದಾಡುವ ಕಾಡಿನ ನಿಘಂಟು ಎಂದೇ ಹೆಸರಾಗಿದ್ದ ಕೊಡಗಿನ ಕೆ.ಎಂ. ಚಿಣ್ಣಪ್ಪ (84) ಅವರು ನಿಧನರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಘಾತವಾಯಿತು. ಬಂಡೀಪುರ ಮತ್ತು ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ ಚಿಣ್ಣಪ್ಪ ಅವರ ಕಾರ್ಯವೈಖರಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮಾದರಿ.

ಅನೇಕ ಸಲ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕಾಡು ಮತ್ತು ವನ್ಯಜೀವಿಗಳ ರಕ್ಷಣೆಯಲ್ಲಿ ತೊಡಗಿಸಿಕೊಂಡ ಚಿಣ್ಣಪ್ಪ ಅವರ ಹೆಸರು ಗಂಧದನಾಡಿನಲ್ಲಿ ಆದರ್ಶ ಪ್ರಾಯವಾಗಿರುತ್ತದೆ. ಅವರ ನಿಧನದಿಂದ ಅವರ ಕುಟುಂಬಕ್ಕೆ, ಪ್ರಕೃತಿ ಪ್ರಿಯರಿಗೆ ಹಾಗೂ ಅಭಿಮಾನಿಗಳಿಗೆ ಆಗಿರುವ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಸಂತಾಪ ಸೂಚಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಹಲವು ಪ್ರಶಸ್ತಿಗಳು, ಪ್ರಶಸ್ತಿ ಹಣವೂ ಅರಣ್ಯಕ್ಕೆ

ಅರಣ್ಯದಂಚಿನಲ್ಲಿಯೇ ಕಡೆಯವರೂ ಬದುಕಿದ ಚಿಣ್ಣಪ್ಪ ಅವರಿಗೆ ಹತ್ತು ಹಲವು ಪ್ರಶಸ್ತಿಗಳೂ ಬಂದಿದ್ದವು. 1985 ರಲ್ಲಿ ಕರ್ನಾಟಕ ಮುಖ್ಯಮಂತ್ರಿಗಳ ಚಿನ್ನದ ಪದಕ, ವೈಲ್ಡ್‌ಲೈಫ್‌ ಕನ್ಸರ್‌ವೇಷನ್‌ ಸೊಸೈಟಿ ಮೆಚ್ಚುಗೆ ಪ್ರಮಾಣಪತ್ರದ ಮೂಲಕ 1988 ಮತ್ತು 1996 ರಲ್ಲಿ ಟೈಗರ್ ಲಿಂಕ್ ಬಾಗ್ ಸೇವಕ್ ಪ್ರಶಸ್ತಿ ದೊರೆತಿತ್ತು. ಅನುಕ್ರಮವಾಗಿ 2000 ಮತ್ತು 2006 ರಲ್ಲಿ ಅಭಯಾರಣ್ಯದ ಜೀವಮಾನದ ಸಾಧನೆ ಪ್ರಶಸ್ತಿಗಳು ಅವರಿಗೆ ಲಭಿಸಿದ್ದವು. 2009 ಅವರಿಗೆ ಪ್ರತಿಷ್ಠಿತ ಸಿಎನ್‌ಎನ್‌ ಐಬಿಎನ್‌ ರಿಯಲ್ ಹೀರೋಸ್ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿಯೊಂದಿಗೆ ನೀಡಿದ್ದ ಸಂಪೂರ್ಣ ಬಹುಮಾನದ ಮೊತ್ತದ 7.5 ಲಕ್ಷ ರೂ.ಗನ್ನು ಅರಣ್ಯ ರಕ್ಷಣೆಗೆ ನೀಡಿದ್ದರು. ವೈಲ್ಡ್‌ ಲೈಫ್‌ ಫಸ್ಟ್‌ ಸಂಸ್ಥೆಯನ್ನು ಹುಟ್ಟು ಹಾಕಿ ಅಧ್ಯಕ್ಷರೂ ಆಗಿದ್ದರು.

ಒನ್ ಮ್ಯಾನ್ ಆರ್ಮಿ

ಚಿಣ್ಣಪ್ಪ ಅವರು 1967ರಲ್ಲಿ ರೇಂಜ್ ಫಾರೆಸ್ಟ್ ಆಫೀಸರ್ ಆಗಿ ಅರಣ್ಯ ಸೇವೆಗೆ ಸೇರಿದರು. ಅವರ ವೃತ್ತಿಜೀವನದಲ್ಲಿ, ಅವರು ಹಲವಾರು ಸವಾಲುಗಳನ್ನು ಎದುರಿಸಿದರು. ಕಳ್ಳಬೇಟೆ, ಭತ್ತದ ಬೇಸಾಯ, ಅತಿಕ್ರಮಣ, ಮರದ ಲಾಬಿಯಿಂದ ಬೆದರಿಕೆಗೆ ಒಳಗಾಗಿದ್ದ ನಾಗರಹೊಳೆ ಅರಣ್ಯವನ್ನು ಪುನರುಜ್ಜೀವನಗೊಳಿಸಲು ಏಕವ್ಯಕ್ತಿ ಸೇನೆ ಅಥವಾ ಒನ್ ಮ್ಯಾನ್ ಆರ್ಮಿಯಾದರು. ಆಗಿನ ಪ್ರಧಾನಿ ಇಂದಿರಾಗಾಂಧಿಯವರು ಆರಂಭಿಸಿದ ಕ್ರಮಗಳನ್ನು ಕಾರ್ಯಗತಗೊಳಿಸುವಾಗ, ಚಿಣ್ಣಪ್ಪ ಭಾರೀ ವೈಯಕ್ತಿಕ ಬೆಲೆ ತೆತ್ತಿದ್ದರು. ಅವರನ್ನು ಬಂಧಿಸಲಾಯಿತು, ಜೈಲಿನಲ್ಲಿಡಲಾಯಿತು ಮತ್ತು ವರ್ಗಾಯಿಸಲಾಯಿತು. ಅವರ ಮನೆಯನ್ನು ಸುಟ್ಟು ಹಾಕಲಾಯಿತು.

ವನ್ಯಜೀವಿ ಸಂರಕ್ಷಕ ಕೆಎಂ ಚಿಣ್ಣಪ್ಪ
ಕರ್ನಾಟಕದಲ್ಲಿ ಕೃಷಿ ಅರಣ್ಯ ಪ್ರದೇಶಗಳ ಹೆಚ್ಚಳ: ತಜ್ಞರ ಅಭಿಮತ

1988 ರಲ್ಲಿ, ಚಿನ್ನಪ್ಪ ಅವರ ಕಾವಲುಗಾರರೊಬ್ಬರು ಸಾಂಬಾರ್ ಜಿಂಕೆಯನ್ನು ಕೊಂದು ತಿಂದಿದ್ದ ಸ್ಥಳೀಯ ಕಾಫಿ ಪ್ಲಾಂಟರ್‌ಗೆ ಗುಂಡು ಹಾರಿಸಿದ್ದರು. ಈ ಪ್ರಕರಣದಲ್ಲಿ ಚಿಣ್ಣಪ್ಪ ಅವರೇ ಈ ಕೊಲೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿತ್ತು. ಅವರನ್ನು ಬಂಧಿಸಿ 12 ದಿನಗಳ ಕಾಲ ಜೈಲಿನಲ್ಲಿಡಲಾಗಿತ್ತು. ನಂತರ ಅವರನ್ನು ಆರೋಪದಿಂದ ಮುಕ್ತಗೊಳಿಸಲಾಯಿತು ಮತ್ತು ಮರುಸೇರ್ಪಡೆಗೊಳಿಸಲಾಯಿತು. 1992 ರಲ್ಲಿ, ಬೇಟೆಗಾರನ ಹತ್ಯೆಯಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಉದ್ರಿಕ್ತ ಗುಂಪು ಅರಣ್ಯ ಇಲಾಖೆಯ ಕಟ್ಟಡಗಳನ್ನು ಧ್ವಂಸಗೊಳಿಸಿತ್ತು. ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿತು ಮತ್ತು ವಾಹನಗಳನ್ನು ಸುಟ್ಟುಹಾಕಿತು ಮತ್ತು ಅರಣ್ಯ ಭೂಮಿ ಮತ್ತು ಚಿಣ್ಣಪ್ಪ ಅವರ ಪೂರ್ವಜರ ಮನೆಯನ್ನು ಸುಟ್ಟು ಹಾಕಿದರು. ಈ ಘಟನೆಯಿಂದ ಮಾನಸಿಕವಾಗಿ ಜರ್ಜಿರತರಾಗಿದ್ದ ಚಿಣ್ಣಪ್ಪ ಆರೋಪದಿಂದ ಮುಕ್ತರಾಗಿದ್ದರೂ ಸೇವೆ ತೊರೆಯಲು ನಿರ್ಧರಿಸಿದ್ದರು. ಆದಾಗ್ಯೂ, ನಿವೃತ್ತಿಯ ನಂತರವೂ, ಯುವ ಕಾವಲುಗಾರರು ಮತ್ತು ಯುವ ಸಂರಕ್ಷಣಾಕಾರರಿಗೆ ತರಬೇತಿ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ನಿಯಮಿತವಾಗಿ ಅವರ ಸೇವೆಯನ್ನು ಕೋರಿದರು.

ನಿವೃತ್ತಿಯ ನಂತರ, ಚಿನ್ನಪ್ಪ 2,500 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗೆ ಕಳ್ಳಬೇಟೆಯ ವಿರುದ್ಧ ಕಾರ್ಯಾಚರಣೆ ಮತ್ತು ಅಗ್ನಿಶಾಮಕ ರಕ್ಷಣೆಯಲ್ಲಿ ತರಬೇತಿ ನೀಡಿದರು. ಚಿನ್ನಪ್ಪ ಅವರು ಪ್ರಕೃತಿ ಶಿಬಿರಗಳು, ಸ್ಲೈಡ್ ಶೋಗಳು, ಮಾತುಕತೆಗಳು, ರ್ಯಾಲಿಗಳು ಮತ್ತು ಸಂವಾದಗಳ ಮೂಲಕ 1,50,000 ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು, ಗ್ರಾಮೀಣ ಯುವಕರು ಮತ್ತು ಗ್ರಾಮಸ್ಥರನ್ನು ತಲುಪಿ ಅವರಿಗೆ ಅರಣ್ಯ ಶಿಕ್ಷಣ ನೀಡಿದರು. ಅಂತಹ ಒಂದು ತರಬೇತಿಯಲ್ಲಿ, ಗಸ್ತು ತಿರುಗುವ ಸಮಯದಲ್ಲಿ, ಒಬ್ಬ ಯುವಕ ಆನೆಯನ್ನು ಎದುರಿಸಿದಾಗ ಏನು ಮಾಡಬೇಕು ಎಂದು ಕೇಳಿದನು. ಇದಕ್ಕೆ ಚಿಣ್ಣಪ್ಪ "ನೀನೇನೂ ಮಾಡಬೇಕಾಗಿಲ್ಲ, ಏನು ಮಾಡಬೇಕೋ ಅದನ್ನು ಆನೆ ಮಾಡುತ್ತದೆ ಎಂದು ಸರಳವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com