'ಪಾಕಿಸ್ತಾನ್ ಜಿಂದಾಬಾದ್' ಘೋಷಣೆ: ತನಿಖೆಗೆ ಮೂರು ವಿಶೇಷ ತಂಡ ರಚನೆ; ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವಿಡಿಯೊ ರವಾನೆ

ಪೊಲೀಸರಿಂದ ವಿಡಿಯೊ ಸಂಗ್ರಹ, ಸತ್ಯಾಸತ್ಯತೆ ಪರಿಶೀಲನೆ
ಡಾ ಸೈಯದ್ ನಾಸಿರ್ ಹುಸೇನ್
ಡಾ ಸೈಯದ್ ನಾಸಿರ್ ಹುಸೇನ್(ಸಂಗ್ರಹ ಚಿತ್ರ)

ಬೆಂಗಳೂರು: ನಿನ್ನೆ ಮಂಗಳವಾರ ರಾಜ್ಯಸಭೆ ಚುನಾವಣೆಯ ಫಲಿತಾಂಶದ ನಂತರ ಸಂಭ್ರಮಾಚರಣೆ ನಡೆಸುತ್ತಿದ್ದ ವೇಳೆ ವಿಧಾನಸೌಧದ ಆವರಣದಲ್ಲಿ ಡಾ ಸೈಯದ್ ನಾಸಿರ್ ಹುಸೇನ್ ಅಭಿಮಾನಿಗಳು ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ತಿಳಿಸಿದ್ದಾರೆ.

ಮಂಗಳವಾರ ತಡರಾತ್ರಿವರೆಗೂ ಠಾಣೆಯಲ್ಲೇ ಉಳಿದುಕೊಂಡಿದ್ದ ಅವರು ಪೊಲೀಸ್ ಸಿಬ್ಬಂದಿಯ ಜೊತೆ ಚರ್ಚೆ ನಡೆಸಿ ಮಾಹಿತಿ ಕಲೆ ಹಾಕಿದ್ದರು. ಪ್ರಕರಣದ ಮುಂದಿನ ಆಯಾಮ ಹಾಗೂ ತನಿಖೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಿಸಿದ್ದರು.

ಡಾ ಸೈಯದ್ ನಾಸಿರ್ ಹುಸೇನ್
'ಪಾಕಿಸ್ತಾನ ಜಿಂದಾಬಾದ್ ಘೋಷಣೆ': ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್ ಹೇಳಿದ್ದೇನು?

ವಿಜೇತ ಅಭ್ಯರ್ಥಿ ನಾಸಿರ್ ಹುಸೇನ್ ಜೊತೆ ಬಂದವರ ಪಟ್ಟಿ ಸಂಗ್ರಹಿಸಲಾಗಿದ್ದು, ಟೆಕ್ನಿಕಲ್ ಅನಾಲಿಸಿಸ್ ಹಾಗೂ ವಿಡಿಯೋಗಳನ್ನು ಪರಿಗಣಿಸುವ ಕಾರ್ಯ ಮಾಡಲಾಗುತ್ತಿದೆ. ಸದ್ಯ ವಿಧಾನಸೌಧ ಪೊಲೀಸರು ಘೋಷಣೆ ಕೂಗಿದಾತನ ಶೋಧ ನಡೆಸುತ್ತಿದ್ದಾರೆ. ಘೋಷಣೆ ಕೂಗಿದ ಸಂದರ್ಭದಲ್ಲಿ ನಾಸೀರ್ ಹುಸೇನ್ ಬಳಿ ಇದ್ದ ವ್ಯಕ್ತಿಗಳನ್ನು ಕರೆಸಿ ಇಂದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಪೊಲೀಸರಿಂದ ವಿಡಿಯೋ ಸಂಗ್ರಹ: ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿನ ವಿಡಿಯೋ ತುಣುಕುಗಳನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ವಾಸ್ತವಾಂಶ ತಿಳಿಯುವುದಕ್ಕಾಗಿ ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ತಯಾರಿ ಮಾಡಲಾಗುತ್ತಿದ್ದು ಇಂದೇ ವರದಿ ಕೈಸೇರಲಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಗೃಹ ಸಚಿವರು ಹೇಳಿದ್ದಿಷ್ಟು: ವಿಧಾನಸೌಧ ಆವರಣದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ವಿಡಿಯೋದಲ್ಲಿ ಕೆಲವರು ನಾಸಿರ್ ಸಾಬ್ ಅಂತಾರೆ, ಕೆಲವರು ಪಾಕಿಸ್ತಾನ ಅಂತಾರೆ. ವೈಜ್ಞಾನಿಕವಾಗಿ ಸತ್ಯಾಸತ್ಯತೆ ತಿಳಿಯಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವಿಡಿಯೋ ಕಳುಹಿಸುತ್ತಿದ್ದೇವೆ. ಒಂದು ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಕಾನೂನು ಕ್ರಮ ಆಗೇ ಆಗುತ್ತೆ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಯಾರು ಮೊದಲು ಪ್ರಸಾರ ಮಾಡಿದ್ದಾರೆ ಅವರಿಂದ ವಿಡಿಯೋ ಪಡೆದು ತನಿಖೆ ಮಾಡುತ್ತೇವೆ. ಎಫ್​ಎಸ್​ಎಲ್​ಗೆ ಕಳುಹಿಸಿರುವ ಪ್ರಕಿಯೆಗಳು ಆರಂಭವಾಗಿವೆ. ಪೊಲೀಸರು ಮಾಡಿರುವ ವಿಡಿಯೋ ಚಿತ್ರೀಕರಣ, ವಿಧಾನಸೌಧ ಸಿಸಿ ಕ್ಯಾಮರಾ ಎಲ್ಲವನ್ನು ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ಈಗಾಗಲೇ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ. ಬಿಜೆಪಿಯವರು ಕೊಟ್ಟಿರುವ ದೂರನ್ನು ಕೂಡ ಸ್ವೀಕರಿಸಿದ್ದೇವೆ. ಸದನ ಒಳಗೆ ಹೊರಗೆ ಬಿಜೆಪಿ ಪ್ರತಿಭಟನೆ ಮಾಡುತ್ತಿದ್ದಾರೆ, ಮಾಡಲಿ. ನಾವು ತಪ್ಪು ಅಂತ ಹೇಳಲ್ಲ. ಕಾನೂನು ಚೌಕಟ್ಟಿನಲ್ಲಿ ಮಾಡಲಿ ಎಂದರು,

ನಾಸೀರ್ ಹುಸೇನ್ ಪತ್ರಕರ್ತರ ಮೇಲೆ ಗೂಂಡಾ ವರ್ತನೆ ತೋರಿರುವ ವಿಚಾರವಾಗಿ ಮಾತನಾಡಿದ ಪರಮೇಶ್ವರ್​, ಅವರು ಏನು ಹೇಳಿದ್ದಾರೆ ಅಂತ ನಾನು ನೋಡಿಲ್ಲ. ನೋಡಿ ಆಮೇಲೆ ಹೇಳುತ್ತೇನೆ ಎಂದರು.

ಬಿಜೆಪಿಯಿಂದ ರಾಜ್ಯಾದ್ಯಂತ ಪ್ರತಿಭಟನೆ: ಪಾಕಿಸ್ತಾನವರ ಘೋಷಣೆ ಖಂಡಿಸಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಮಂಗಳವಾರ ರಾತ್ರಿ ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com