
ಬೆಂಗಳೂರು: 500 ಕೋಟಿಗೂ ಹೆಚ್ಚು ಮೌಲ್ಯದ ಎರಡು ಎಕರೆ ಭೂಮಿಯನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ನಿರ್ಧರಿಸಿದ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು 'ಭೂ ಜಿಹಾದ್'ನಲ್ಲಿ ತೊಡಗಿದೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ, ಖಾಲಿ ಜಾಗ ನೀಡಿದರೆ ನಮ್ಮ ಅಭ್ಯಂತರವಿಲ್ಲ. ಆದರೆ, ಪಶು ಸಂಗೋಪನಾ ಇಲಾಖೆಗೆ ಸೇರಿದ ಜಾಗವನ್ನು ಸರ್ಕಾರ ಹಸ್ತಾಂತರಿಸುತ್ತಿದೆ' ಎಂದು ದೂರಿದರು.
ಈ ಕುರಿತು ಟ್ವೀಟ್ ಮಾಡಿರುವ ಅವರು, ಪೋಸ್ಟ್‌ಗೆ 'ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್' ಎಂದು ಶೀರ್ಷಿಕೆ ನೀಡಿದ್ದಾರೆ.
ಬೆಂಗಳೂರು ನಗರದ ಹೃದಯ ಭಾಗದಲ್ಲಿರುವ ಬೆಲೆಬಾಳುವ ಪಶುಸಂಗೋಪನಾ ಇಲಾಖೆಗೆ ಸೇರಿದ ಎರಡು ಎಕರೆ ಜಾಗವನ್ನು ಮುಸ್ಲಿಮರಿಗೆ ನೀಡುವ ಹುನ್ನಾರ ಮಾಡುತ್ತಿದ್ದೀರಲ್ಲ ಸಿಎಂ ಸಿದ್ದರಾಮಯ್ಯನವರೇ, ಮುಸ್ಲಿಮರ ಓಲೈಕೆಗೆ ಒಂದು ಇತಿ ಮಿತಿ ಬೇಡವೇ? ಎಂದಿದ್ದಾರೆ.
ಮುಂದುವರಿದು, ದನ ಕರುಗಳಿಗೆ ಚಿಕಿತ್ಸೆ ನೀಡುವ ಸರ್ಕಾರಿ ಪಶು ಚಿಕಿತ್ಸಾಲಯವನ್ನು ಮುಚ್ಚಿಸಿ ಅದನ್ನು ಮುಸ್ಲಿಂರಿಗೆ ಕೊಡುವ ಅನಿವಾರ್ಯತೆ ಆದರೂ ಏನಿತ್ತು? ಜಾನುವಾರುಗಳಿಗೆ ಮಾತ್ರ ಆ ಚಿಕಿತ್ಸಾಲಯ ಸ್ಥಾಪಿಸಿಲ್ಲ. ಇತರೆ ಸಾಕು ಪ್ರಾಣಿಗಳ ಚಿಕಿತ್ಸೆಗೂ ಸ್ಥಾಪಿಸಲಾಗಿತ್ತು. ನಗರದ ಹೃದಯಭಾಗದಲ್ಲಿರುವ 500 ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ ಜಾಗವನ್ನು ಹಸ್ತಾಂತರ ಮಾಡಲು ನಾವು ಬಿಡುವುದಿಲ್ಲ. ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಕಾಂಗ್ರೆಸ್ ಸರ್ಕಾರದ ಲ್ಯಾಂಡ್ ಜಿಹಾದ್ ಎಂದು ಕರೆಯಬಹುದೇ? ಎಂದು ಪ್ರಶ್ನಿಸಿದ್ದಾರೆ.
ಮೌಲಾನಾ ಆಜಾದ್/ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಛಲವಾದಿಪಾಳ್ಯ ವಾರ್ಡ್‌ನಲ್ಲಿರುವ ಎರಡು ಎಕರೆ ಜಾಗವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಕರ್ನಾಟಕ ಸರ್ಕಾರ ಫೆಬ್ರುವರಿ 26 ರಂದು ಆದೇಶ ನೀಡಿದೆ ಎಂದು ಅಶೋಕ ಹೇಳಿದರು.
Advertisement