ಸೇವೆ ಕಾಯಂಗೆ ಒತ್ತಾಯ: ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಅತಿಥಿ ಉಪನ್ಯಾಸಕರ ಪಾದಯಾತ್ರೆ

ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ತಮ್ಮ ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಸೋಮವಾರ ಇಲ್ಲಿನ ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಮೂರು ದಿನಗಳ ‘ಪಾದಯಾತ್ರೆ’ ಆರಂಭಿಸಿದರು.
ಅತಿಥಿ ಉಪನ್ಯಾಸಕರ ಪಾದಯಾತ್ರೆ
ಅತಿಥಿ ಉಪನ್ಯಾಸಕರ ಪಾದಯಾತ್ರೆ

ತುಮಕೂರು: ರಾಜ್ಯಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಅತಿಥಿ ಉಪನ್ಯಾಸಕರು ತಮ್ಮ ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಸೋಮವಾರ ಇಲ್ಲಿನ ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಮೂರು ದಿನಗಳ ‘ಪಾದಯಾತ್ರೆ’ ಆರಂಭಿಸಿದರು.

ಹೌದು.. ಹೋರಾಟ ಮುಂದುವರಿಸಿದರೆ ಕಠಿನ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ನೀಡಿದ್ದ ಎಚ್ಚರಿಕೆಗೂ ಬಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ತುಮಕೂರಿನ ಸಿದ್ಧಗಂಗಾ ಮಠ ದಿಂದ ಆರಂಭಿಸಿರುವ ಬೆಂಗಳೂರು ಚಲೋ ಪಾದಯಾತ್ರೆಯಲ್ಲಿ ಸಾವಿರಾರು ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿ ಭಾಗಿಯಾಗಿದ್ದಾರೆ.

80 ಕಿ.ಮೀ ಪಾದಯಾತ್ರೆ ಆರಂಭಿಸುವ ಮುನ್ನ ಅತಿಥಿ ಉಪನ್ಯಾಸಕರು ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ (ಪವಿತ್ರ ಸಮಾಧಿ)ಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ತಮ್ಮ ರಾಜ್ಯಾಧ್ಯಕ್ಷ ಹನ್ಮಂತಗೌಡ ಕಲ್ಮನಿ ಮತ್ತು ಜಿಲ್ಲಾಧ್ಯಕ್ಷ ಡಾ.ಧರ್ಮವೀರ ನೇತೃತ್ವದಲ್ಲಿ ಜನವರಿ 4 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಉಪನ್ಯಾಸಕರು ಸಮಾವೇಶ ನಡೆಸಲಿದ್ದಾರೆ.

ಸರ್ಕಾರದ ಎಚ್ಚರಿಕೆಗೂ ಕ್ಯಾರೆ ಎನ್ನದ ಉಪನ್ಯಾಸಕರು!
ಸರ್ಕಾರವೂ ಅತಿಥಿ ಉಪನ್ಯಾಸಕರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿದ್ದು, ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಇಕ್ಕಟ್ಟಿನಲ್ಲಿ ಸಿಲುಕಿದೆ. ಸೋಮವಾರ ಮಧ್ಯಾಹ್ನ 2 ಗಂಟೆಯೊಳಗೆ ತರಗತಿಗೆ ಹಾಜರಾದ ಅತಿಥಿ ಉಪನ್ಯಾಸಕರ ಮಾಹಿತಿಯನ್ನು ಸಲ್ಲಿಸುವಂತೆ ಸರ್ಕಾರಿ ಪದವಿ ಕಾಲೇಜುಗಳ ಉಪನ್ಯಾಸಕರಿಗೆ ಸೂಚನೆ ನೀಡಲಾಗಿತ್ತು. ಆದರೆ ಸರ್ಕಾರದ ಎಚ್ಚರಿಕೆಗೆ ಸೊಪ್ಪು ಹಾಕದೆ ಶೇ. 80ರಷ್ಟು ಅತಿಥಿ ಉಪನ್ಯಾಸಕರು ತರಗತಿಗೆ ಗೈರಾಗಿದ್ದಾರೆ. 

ಡಾಬಸ್‌ ಪೇಟೆಯಲ್ಲಿ ವಾಸ್ತವ್ಯ
ಸಿದ್ದಗಂಗಾ ಮಠದಿಂದ ಆರಂಭವಾಗಿರುವ ಪಾದಯಾತ್ರೆ ರಾತ್ರಿ ಡಾಬಸ್‌ ಪೇಟೆಯಲ್ಲಿ ವಾಸ್ತವ್ಯ ಹೂಡಿದೆ. ಮಂಗಳವಾರ ನೆಲಮಂಗಲದ ಶ್ರೀಸಿದ್ಧಗಂಗಾ ಪದವಿ ಕಾಲೇಜಿನಲ್ಲಿ ವಾಸ್ತವ್ಯ ಹೂಡಲಿದ್ದು, ಬುಧವಾರ ಬೆಂಗಳೂರು ನಗರವನ್ನು ಪ್ರವೇಶಿಸಲಿದೆ. ಕರ್ನಾಟಕ ವಿಧಾನ ಪರಿಷತ್ತಿನ ಅಧ್ಯಕ್ಷ ಹಾಗೂ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಬಸವರಾಜ ಹೊರಟ್ಟಿ ಅವರು ಇಲ್ಲಿನ ಟೋಲ್‌ಗೇಟ್‌ನಲ್ಲಿ ಅತಿಥಿ ಉಪನ್ಯಾಸಕರನ್ನು ಭೇಟಿ ಮಾಡಿ, ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ಚರ್ಚಿಸಿ ನಿರ್ಧಾರ ಎಂದ ಸಚಿವರು
ಇನ್ನು ನ. 23ರಿಂದ ಅತಿಥಿ ಉಪನ್ಯಾಸಕರು ತರಗತಿ ಬಹಿಷ್ಕರಿಸಿದ್ದು, ಕಳೆದ 40 ದಿನಗಳಿಂದ ಪಠ್ಯ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಬಹುತೇಕ ಸರಕಾರಿ ಪದವಿ ಕಾಲೇಜುಗಳಲ್ಲಿ ಶೇ. 50ಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರೇ ಬೋಧನ ಚಟುವಟಿಕೆ ನಡೆಸುತ್ತಿದ್ದಾರೆ. ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಉನ್ನತ ಶಿಕ್ಷಣ ಸಚಿವ ಡಾಣ ಎಂ.ಸಿ. ಸುಧಾಕರ್‌ ತೀರ್ಮಾನಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಸೋಮವಾರ 3 ಸಾವಿರಕ್ಕಿಂತ ಹೆಚ್ಚು ಅತಿಥಿ ಉಪನ್ಯಾಸಕರು ತರಗತಿಗೆ ಹಾಜರಾಗಿದ್ದಾರೆ. ಮಂಗಳವಾರ ನಿಖರವಾದ ಮಾಹಿತಿ ಪಡೆದುಕೊಂಡು ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಶುಕ್ರವಾರ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅತಿಥಿ ಉಪನ್ಯಾಸಕರೊಂದಿಗೆ ಸಭೆ ನಡೆಸಿ, ಅವರ ಸಂಭಾವನೆಯಲ್ಲಿ 5 ಸಾವಿರ ರೂ.ಗಳ ಹೆಚ್ಚಳ, 5 ಲಕ್ಷ ರೂ.ಗಳ ಆರೋಗ್ಯ ವಿಮಾ ರಕ್ಷಣೆ, ತಿಂಗಳಿಗೆ ಒಂದು ವೇತನ ಸಹಿತ ರಜೆ ಮತ್ತು ನಿವೃತ್ತಿ ಪ್ರಯೋಜನವಾಗಿ ರೂ.5 ಲಕ್ಷ ಸೇರಿದಂತೆ ಹಲವು ಉಪಕ್ರಮಗಳನ್ನು ಘೋಷಿಸಿದರು. ಹತ್ತು ವರ್ಷ ಸೇವೆ ಸಲ್ಲಿಸಿದವರಿಗೆ. ಸೋಮವಾರದಿಂದ ತರಗತಿಗಳಿಗೆ ಹಾಜರಾಗುವಂತೆ ಉಪನ್ಯಾಸಕರಿಗೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಮನವರಿಕೆಯಾಗದ ಉಪನ್ಯಾಸಕರು ಧರಣಿ ಮುಂದುವರಿಸಿದರು. ಸೋಮವಾರ ಇಲಾಖೆಯ ಅಧಿಕಾರಿಗಳೊಂದಿಗೆ ಸಚಿವರು ಸಭೆ ನಡೆಸಿ ಮುಷ್ಕರದಿಂದ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದ್ದು, ಪರ್ಯಾಯ ಮಾರ್ಗೋಪಾಯಗಳ ಕುರಿತು ಚರ್ಚಿಸಿದರು. 

ಇದೇ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಜ್ಯ ಸರ್ಕಾರಿ ಪದವಿ ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಾ. ಹನುಮಂತ ಗೌಡ ಕಲ್ಮನಿ, 'ಪಾದಯಾತ್ರೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮಂಗಳವಾರದಿಂದ ಇನ್ನಷ್ಟು ಅತಿಥಿ ಉಪನ್ಯಾಸಕರು ಭಾಗಿಯಾಗಲಿದ್ದಾರೆ. ನಮ್ಮ ಹೋರಾಟಕ್ಕೆ ಸರಕಾರ ಮಣಿಯ ದಿದ್ದರೆ ಆ ಬಳಿಕ ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಹೇಳಿದರು. 

ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ 30,000 ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಸುಮಾರು 10,500 ಆಯ್ಕೆಯಾಗಿದೆ ಮತ್ತು ತರಗತಿಗಳು ತೊಂದರೆಯಿಲ್ಲದೆ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಕೌನ್ಸೆಲಿಂಗ್ ಸಮಯದಲ್ಲಿ ತಪ್ಪಿಸಿಕೊಂಡವರನ್ನು ನೇಮಿಸಿಕೊಳ್ಳಲು ಸರ್ಕಾರ ಯೋಜಿಸಿದೆ. ತರಗತಿಗಳಿಗೆ ಹಾಜರಾಗದ ಅತಿಥಿ ಉಪನ್ಯಾಸಕರ ಕುರಿತು ಸಂಬಂಧಿಸಿದ ಪ್ರಾಂಶುಪಾಲರು ತಮ್ಮ ವರದಿ ಸಲ್ಲಿಸಿದ್ದಾರೆ. 30 ರಷ್ಟು ಉಪನ್ಯಾಸಕರು ತಮ್ಮನ್ನು ತೆಗೆದುಹಾಕುತ್ತಾರೆ ಎಂಬ ಭಯದಿಂದ ಸೋಮವಾರ ತರಗತಿಗಳಿಗೆ ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com