1992ರ ಗಲಭೆ ಪ್ರಕರಣ: ಹುಬ್ಳಳಿಯಲ್ಲಿ ಶ್ರೀಕಾಂತ್ ಪೂಜಾರಿ ಬಂಧನ, ಹಿಂದೂಪರ ಸಂಘಟನೆಗಳ ಆಕ್ರೋಶ

ಹುಬ್ಬಳ್ಳಿ-ಧಾರವಾಡ ಪೊಲೀಸರು ಡಿಸೆಂಬರ್ 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಿದ್ದು, ಪೊಲೀಸರ ಕ್ರಮಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸರು ಡಿಸೆಂಬರ್ 1992 ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ಬಂಧಿಸಿದ್ದು, ಪೊಲೀಸರ ಕ್ರಮಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಳೇ ಹುಬ್ಬಳ್ಳಿಯ ನಿವಾಸಿ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿದ್ದಲ್ಲದೆ, ಆ ಅವಧಿಯಲ್ಲಿ ಹುಬ್ಬಳ್ಳಿಯಲ್ಲಿ ವರದಿಯಾದ ಹಿಂಸಾಚಾರದೊಂದಿಗೆ ಸಂಬಂಧ ಹೊಂದಿರುವ ಹಲವಾರು ಶಂಕಿತರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಬಂಧನವನ್ನು ಸಮರ್ಥಿಸಿಕೊಂಡಿರುವ ಪೊಲೀಸರು ಬಾಕಿ ಉಳಿದಿರುವ 34 ಪ್ರಕರಣಗಳಲ್ಲಿ ಬಂಧನವು ಕಾಲಕಾಲಕ್ಕೆ ಮಾಡಲಾಗುತ್ತದೆ ಎಂದು ಹೇಳಿದರು. 

ಆದರೆ, ಈ ತಿಂಗಳು ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ತೆರೆಯಲು ನಿರ್ಧರಿಸಲಾಗಿದ್ದು, ಬಂಧನದ ಸಮಯವನ್ನು ಹಿಂದೂ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಗಲಭೆಯ ಸಂದರ್ಭದಲ್ಲಿ, ಡಿಸೆಂಬರ್ 1992 ರಲ್ಲಿ ಪ್ರತಿಭಟನೆಯ ಸಂದರ್ಭದಲ್ಲಿ ಅಂಗಡಿಯನ್ನು ಸುಟ್ಟುಹಾಕಲಾಗಿತ್ತು. ಟೌನ್ ಪೊಲೀಸರು ಅನೇಕ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದರು. ಶುಕ್ರವಾರ ಪೊಲೀಸರು ಪೂಜಾರಿಯನ್ನು ಬಂಧಿಸಿದ್ದು, ಕೆಲವರಿಗೆ ನೋಟಿಸ್ ಕೂಡ ಜಾರಿ ಮಾಡಿದ್ದಾರೆ.

ಗಲಭೆಯ ಆರೋಪಿಗಳಲ್ಲಿ ಒಬ್ಬರಾದ ರಾಜು ಧರ್ಮದಾಸ್ ಈ ಕುರಿತು ಮಾತನಾಡಿದ್ದು, 'ನ್ಯಾಯಾಲಯವು ಬಹಳ ಹಿಂದೆಯೇ ಪ್ರಕರಣವನ್ನು ಮುಕ್ತಾಯಗೊಳಿಸಿದೆ ಮತ್ತು ಆದರೆ ಪೊಲೀಸರು ತಮ್ಮನ್ನು ವಿಚಾರಣೆಗೆ ಕರೆದಾಗ ಆಶ್ಚರ್ಯವಾಯಿತು ಎಂದು ಹೇಳಿದರು. "25 ವರ್ಷಗಳ ನಂತರ, ನನಗೆ 2017 ರಲ್ಲಿ ಪೊಲೀಸ್ ನೋಟಿಸ್ ಬಂದಿತು. ನಾನು ನಿರೀಕ್ಷಣಾ ಜಾಮೀನಿಗಾಗಿ ನ್ಯಾಯಾಲಯವನ್ನು ಸಂಪರ್ಕಿಸಿದೆ ಮತ್ತು ಅದು ಮಂಜೂರಾಯಿತು. ನಾನು ದಾಖಲೆಗಳನ್ನು ಸಲ್ಲಿಸಿದ ನಂತರ, ಪೊಲೀಸರು ನನಗೆ ಹೋಗಲು ಅವಕಾಶ ನೀಡಿದ್ದರು. ಈಗ ಬಹಳ ವರ್ಷಗಳ ನಂತರ, ಮತ್ತೆ ಅವರು ನನಗೆ ವಿಚಾರಣೆಗೆ ಹಾಜರಾಗಲು ಕರೆ ಮಾಡಿದ್ದಾರೆ. ನಾನು ನನ್ನ ವಕೀಲರೊಂದಿಗೆ ಹೋಗಿ ಮತ್ತೆ ನನ್ನ ಜಾಮೀನು ದಾಖಲೆಗಳನ್ನು ಸಲ್ಲಿಸಿದೆ" ಎಂದು ಹೇಳಿದರು.

ಅಂತೆಯೇ ಪೊಲೀಸರ ಕ್ರಮವನ್ನು ಕಿರುಕುಳ ಎಂದು ಕರೆದ ಧರ್ಮದಾಸ್ "ಇದು ಪೊಲೀಸರಿಂದ ಬರಿಯ ಚಿತ್ರಹಿಂಸೆ. ಗಲಭೆಯಲ್ಲಿ ಹಲವು ಬಿಜೆಪಿ ನಾಯಕರೂ ಆರೋಪಿಗಳಾಗಿದ್ದರು. ಆಯ್ದ ಕೆಲವರನ್ನು ಮಾತ್ರ ಏಕೆ ಬಂಧಿಸಲಾಗುತ್ತಿದೆ?" ಪ್ರಶ್ನಿಸಿದ್ದಾರೆ.

ಪೊಲೀಸರ ಸ್ಪಷ್ಟನೆ
ಇನ್ನು ದೀರ್ಘ ಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳ ತನಿಖೆಯ ಭಾಗವಾಗಿ ಈ ಬಂಧನ ನಡೆದಿದೆ ಎಂದು ಎಚ್‌ಡಿ ಪೊಲೀಸ್ ಆಯುಕ್ತ ರೇಣುಕಾ ಸುಕುಮಾರ್ ಸ್ಪಷ್ಟನೆ ನೀಡಿದ್ದು, ಅಂತಹ ಪ್ರಕರಣಗಳನ್ನು ಪರಿಹರಿಸಲು ಪೊಲೀಸರು ವಾಡಿಕೆಯಂತೆ ಕೆಲಸ ಮಾಡುತ್ತಾರೆ. ಇದು ಬಾಹ್ಯ ಅಂಶಗಳಿಂದ ಪ್ರಭಾವಿತವಾಗಿಲ್ಲ. ಒಂಬತ್ತು ಆರೋಪಿಗಳ ಪೈಕಿ ಮೂವರು ಮೃತಪಟ್ಟಿದ್ದಾರೆ ಎಂದು ಆಯುಕ್ತರು ತಿಳಿಸಿದ್ದು, ಉಳಿದ ವ್ಯಕ್ತಿಗಳನ್ನು ಪೊಲೀಸರು ಹುಡುಕುತ್ತಿದ್ದಾರೆ. ನಾವು 45 ವರ್ಷಗಳಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಪರಿಹರಿಸಿದ್ದೇವೆ ಮತ್ತು ಇದು ಸಾಮಾನ್ಯ ಕೆಲಸದ ಭಾಗವಾಗಿದೆ. ನಾವು ಇತ್ತೀಚೆಗೆ ಹಲವಾರು ದೀರ್ಘಕಾಲದ ಬಾಕಿ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಿಂದ ಪ್ರತಿಭಟನೆ: ಅಶೋಕ್ ಎಚ್ಚರಿಕೆ
ಏತನ್ಮಧ್ಯೆ, ಹುಬ್ಬಳ್ಳಿಯಲ್ಲಿ ಹಿಂದೂಪರ ಸಂಘಟನೆಯ ಕಾರ್ಯಕರ್ತನ ಬಂಧನವನ್ನು ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಬೆಂಗಳೂರಿನಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. 30 ವರ್ಷಗಳ ಹಿಂದೆ ರಾಮಜನ್ಮಭೂಮಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಶ್ರೀಕಾಂತ್ ಪೂಜಾರಿ ಅವರನ್ನು ಶುಕ್ರವಾರ ಬಂಧಿಸಿದ ಘಟನೆಯನ್ನು ಅಶೋಕ್ ಉಲ್ಲೇಖಿಸಿ ಈ ಎಚ್ಚರಿಕೆ ನೀಡಿದ್ದು, "ಪೂಜಾರಿ ಹಾಗೂ ಕೆಲವರಿಗೆ ರಾಮಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ನಾನೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೆ, ನನ್ನನ್ನು ಬಂಧಿಸುತ್ತೀರಾ? ನನ್ನನ್ನು ಬಂಧಿಸಲು ಸರ್ಕಾರಕ್ಕೆ ಧೈರ್ಯವಿದೆಯೇ?" ಅವರ ಮೇಲಿನ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು" ಎಂದು ಅಶೋಕ್ ಒತ್ತಾಯಿಸಿದರು.

ಕಾಂಗ್ರೆಸ್ ದ್ವೇಷದ ರಾಜಕಾರಣ ಆರಂಭಿಸಿದೆ. ಸಿದ್ದರಾಮಯ್ಯನವರ ಹಿಂದಿನ ಆಡಳಿತದಲ್ಲಿಯೂ ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿತ್ತು. ಸಿಎಂ ಟಿಪ್ಪು ಜಯಂತಿ ಆಚರಿಸುತ್ತಾರೆ. ಆದರೆ ಶ್ರೀರಾಮನಿಗೆ ಪೂಜೆ ಸಲ್ಲಿಸುತ್ತಿಲ್ಲ. ಸಿದ್ದರಾಮಯ್ಯನವರಿಗೆ ನಾಮ ಹಾಕುವುದು ಅಲರ್ಜಿ, ಆದರೆ ಮತಕ್ಕಾಗಿ ಮಸೀದಿಗಳಲ್ಲಿ ಟೋಪಿ ಹಾಕಿಸಿಕೊಳ್ಳುತ್ತಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com