![ಕೆಎಸ್ ಈಶ್ವರಪ್ಪ](http://media.assettype.com/kannadaprabha%2Fimport%2F2023%2F11%2F12%2Foriginal%2Feesha-new.jpg?w=480&auto=format%2Ccompress&fit=max)
ಶಿವಮೊಗ್ಗ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಗುಲಾಮಗಿರಿಯ ಪ್ರತೀಕವಾಗಿದ್ದ ಮಸೀದಿಯನ್ನು ಕೆಡವಲಾಯಿತು ಎಂದು ಬಿಜೆಪಿಯ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಮಂಗಳವಾರ ಹೇಳಿಕೆ ನೀಡಿದ್ದಾರೆ. ಅದೇ ರೀತಿ ನಾವು ಮಥುರಾದಲ್ಲಿಯೂ ಶ್ರೀಕೃಷ್ಣ ಮಂದಿರವನ್ನು ನಿರ್ಮಿಸುತ್ತೇವೆ ಎಂದು ಅವರು ಒತ್ತಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಾರು 496 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮಮಂದಿರ ಧ್ವಂಸವಾಗಿತ್ತು. ಮೊಘಲ್ ರಾಜ ಬಾಬರ್ ದೇವಾಲಯದ ಮೇಲೆ ಮಸೀದಿಯನ್ನು ನಿರ್ಮಿಸಿದ್ದ. ದೇವರ ಆಶೀರ್ವಾದದಿಂದ ನಮ್ಮ ಜೀವಿತಾವಧಿಯಲ್ಲಿಯೇ ರಾಮ್ ಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸುವ ಅದೃಷ್ಟವನ್ನು ನಾವು ಪಡೆದಿದ್ದೇವೆ' ಎಂದರು.
ಅಯೋಧ್ಯೆಯಲ್ಲಿ ಗುಲಾಮಗಿರಿಯ ಪ್ರತೀಕ ಕಳೆದು ಹಿಂದೂಗಳ ಸ್ವಾಭಿಮಾನದ ಪ್ರತಿಬಿಂಬವಾದ ರಾಮ ಮಂದಿರ ನಿರ್ಮಾಣವಾಗಿದೆ ಎಂದರು.
'ನಾವು ಪ್ರತಿ ಮನೆಗೆ ಮಂತ್ರಾಕ್ಷತೆಯನ್ನು ವಿತರಿಸುತ್ತಿದ್ದೇವೆ. ನಿಮ್ಮ ದೇವಸ್ಥಾನಗಳಲ್ಲಿ ಮಂತ್ರಾಕ್ಷತೆಯನ್ನು ಇಟ್ಟುಕೊಂಡು ಜನವರಿ 22 ರಂದು ದೀಪಾವಳಿ ಹಬ್ಬದಂತೆ ಆಚರಿಸಿ' ಎಂದು ಮನವಿ ಮಾಡಿದರು.
'ಇದು ಪವಿತ್ರ ಕ್ಷಣವಾಗಿದ್ದು, ನಾನು ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ. ಶ್ರೀರಾಮನ ಭಕ್ತರನ್ನು ಆಹ್ವಾನಿಸಲಾಗುತ್ತಿದೆ. ಅಯೋಧ್ಯೆಯಲ್ಲಿ ಬಿಜೆಪಿಯ ರಾಮನ ಪ್ರತಿಷ್ಠಾಪನೆ ಎಂದು ಹೇಳಿಕೆ ನೀಡುತ್ತಿರುವ ನಾಯಕರಿಗೆ ಪ್ರತಿಷ್ಠಾಪನೆಗೆ ಆಹ್ವಾನ ನೀಡಿಲ್ಲ. ರಾಮನನ್ನು ಪೂಜಿಸುವ ಮತ್ತು ಆ ಬಗ್ಗೆ ಹೆಮ್ಮೆ ಪಡುವವರು ಭಾಗವಹಿಸಲು ಸ್ವಾಗತ' ಎಂದು ಈಶ್ವರಪ್ಪ ಹೇಳಿದರು.
ರಾಮಮಂದಿರ ನಿರ್ಮಾಣದ ನಿರ್ಧಾರದ ಸಮಯದಲ್ಲಿ ಹಿಂದೂ ಯಾತ್ರಾ ಕೇಂದ್ರಗಳಾದ ಕಾಶಿ ಮತ್ತು ಮಥುರಾದಲ್ಲಿ ಸಮೀಕ್ಷೆ ನಡೆಸಲು ಅನುಮತಿ ನೀಡಲಾಗಿತ್ತು ಎಂದು ಅವರು ಹೇಳಿದರು.
'ಇಲ್ಲಿಯೂ ದೇವಾಲಯಗಳನ್ನು ನಿರ್ಮಿಸಲು ನಾವು ನ್ಯಾಯಾಲಯದಲ್ಲಿ ಅನುಕೂಲಕರ ತೀರ್ಪು ಪಡೆಯುತ್ತೇವೆ. ಕಾಶಿಯಲ್ಲಿರುವ ಮಸೀದಿಯನ್ನು ಕೆಡವಿ ಕಾಶಿ ಮಂದಿರ ನಿರ್ಮಿಸುತ್ತೇವೆ. ನಾವು ಮಥುರಾದಲ್ಲಿ ಶ್ರೀಕೃಷ್ಣ ದೇವಾಲಯವನ್ನು ನಿರ್ಮಿಸುತ್ತೇವೆ' ಎಂದರು.
Advertisement