
ಬೆಳಗಾವಿ: ಹೊಸ ವರ್ಷದ ಪಾರ್ಟಿಗೆ ಪೋಷಕರು ಹಣ ನೀಡಲು ನಿರಾಕರಿಸಿದ್ದರಿಂದ ಬೆಳಗಾವಿಯಲ್ಲಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳಗಾವಿ ತಾಲೂಕಿನ ಕಣಬರ್ಗಿ ಗ್ರಾಮದ ಸಿದ್ದರಾಯ ಅಡಿವೆಪ್ಪ ಶೀಗಿಹಳ್ಳಿ (24) ಆತ್ಮಹತ್ಯೆ ಮಾಡಿಕೊಂಡ ಯುವಕ. ಮೂಲಗಳ ಪ್ರಕಾರ, ಉದ್ಯೋಗವಿಲ್ಲದ ಸಿದ್ದಯ್ಯ ಭಾನುವಾರ ರಾತ್ರಿ ಹೊಸ ವರ್ಷದ ಪಾರ್ಟಿ ಆಚರಿಸಲು ಪೋಷಕರಿಂದ 10,000 ರೂ. ಕೇಳಿದ್ದಾನೆ. ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿರುವ ಪೋಷಕರು ಹಣ ನೀಡಲು ನಿರಾಕರಿಸಿದ್ದಾರೆ.
ಕೋಪ ಮತ್ತು ಹತಾಶೆಯಿಂದ ಸಿದ್ದಯ್ಯ ತನ್ನ ತಂದೆ-ತಾಯಿಗೆ ತೋಟಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದಾನೆ. ಬಳಿಕ ಆತನ ವರ್ತನೆಯಿಂದ ಅನುಮಾನಗೊಂಡ ಪೋಷಕರು ಜಮೀನಿಗೆ ತೆರಳಿ ಆತನನ್ನು ಹುಡುಕಿದ್ದಾರೆ.
ಜಮೀನಿನಲ್ಲಿದ್ದ ಮರಕ್ಕೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಆತನ ಮೃತದೇಹವನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮೃತನಾಗಿದ್ದಾನೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಸಂಬಂಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement