ಕೇಂದ್ರವು ವರ್ಷದಿಂದ ವರ್ಷಕ್ಕೆ ರಾಜ್ಯದ ತೆರಿಗೆ ಪಾಲು ಕಡಿಮೆ ಮಾಡುತ್ತಿದೆ ಎಂದ ಸಿದ್ದರಾಮಯ್ಯ; ಅಶ್ವತ್ಥ್ ನಾರಾಯಣ ಕಿಡಿ

ಕೇಂದ್ರ ಸರ್ಕಾರವು ವರ್ಷದಿಂದ ವರ್ಷಕ್ಕೆ ರಾಜ್ಯದ ತೆರಿಗೆ ಪಾಲನ್ನು 'ಕಡಿಮೆ' ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ ನಂತರ, ಬಿಜೆಪಿ ನಾಯಕ ಸಿಎನ್ ಅಶ್ವತ್ಥ್ ನಾರಾಯಣ್ ತಿರುಗೇಟು ನೀಡಿದ್ದಾರೆ.
ಡಾ ಸಿಎನ್ ಅಶ್ವತ್ಥ್ ನಾರಾಯಣ
ಡಾ ಸಿಎನ್ ಅಶ್ವತ್ಥ್ ನಾರಾಯಣ

ಬೆಂಗಳೂರು: ಕೇಂದ್ರ ಸರ್ಕಾರವು ವರ್ಷದಿಂದ ವರ್ಷಕ್ಕೆ ರಾಜ್ಯದ ತೆರಿಗೆ ಪಾಲನ್ನು 'ಕಡಿಮೆ' ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ ನಂತರ, ಬಿಜೆಪಿ ನಾಯಕ ಸಿಎನ್ ಅಶ್ವತ್ಥ್ ನಾರಾಯಣ ತಿರುಗೇಟು ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅಶ್ವತ್ಥ್ ನಾರಾಯಣ ಅವರು, '2014-24ರ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ₹2,82,791 ಕೋಟಿ ತೆರಿಗೆ ಹಂಚಿಕೆಯಾಗಿದೆ, 2004-14ರ ವರೆಗೆ ಆಡಳಿತ ನಡೆಸಿದ ನಿಮ್ಮದೇ ಯುಪಿಎ ಸರ್ಕಾರದ ಹಂಚಿಕೆಗೆ ಹೋಲಿಕೆ ಮಾಡಿದರೆ ಇದು 245.7% ರಷ್ಟು ಹೆಚ್ಚು!' ಎಂದಿದ್ದಾರೆ.

ಇದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸಿದ್ದರಾಮಯ್ಯ ಅವರು, ಕರ್ನಾಟಕದ ತೆರಿಗೆ ಪಾಲು ವರ್ಷದಿಂದ ವರ್ಷಕ್ಕೆ  ಇಳಿಕೆಯಾಗುತ್ತಿದೆ. ಕನ್ನಡಿಗರು ಬೆವರು ಸುರಿಸಿ ಕೇಂದ್ರಕ್ಕೆ ಕಟ್ಟುವ ತೆರಿಗೆ ಹಣದ ಬಹುಪಾಲು ಉತ್ತರ ಭಾರತದ ರಾಜ್ಯಗಳ ಪಾಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೇ, ಕರ್ನಾಟಕಕ್ಕೆ ಮಾತ್ರ ಯಾಕೆ ಈ ಅನ್ಯಾಯ?. ಆರೂವರೆ ಕೋಟಿ ಕನ್ನಡಿಗರ ಪ್ರಶ್ನೆಯಿದು. #AnswerMadiModi ಎಂದಿದ್ದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ 4.71ರಷ್ಟಿದ್ದ ಕರ್ನಾಟಕದ ತೆರಿಗೆ ಪಾಲು 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ 3.64ಕ್ಕೆ ಇಳಿಕೆಯಾಗಿದ್ದು, ಇದರಿಂದ ಕಳೆದ ಮೂರು ವರ್ಷಗಳಲ್ಲಿ ರಾಜ್ಯಕ್ಕೆ 26,140 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂಬುದನ್ನು ತೋರಿಸುವ ಚಿತ್ರವನ್ನೂ ಅವರು ಹಂಚಿಕೊಂಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ, ಕೇಂದ್ರದ ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಭಾರಿ ಅನ್ಯಾಯ, ಗುಜರಾತಿಗೆ ವಿಪರೀತ ಏರಿಕೆ. ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ ಕನ್ನಡಿಗರ ಪಾಲು ಎಂದಿರುವ ಅವರು, ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

ಇದಕ್ಕೆ ಉತ್ತರಿಸಿರುವ ಅಶ್ವತ್ಥ್ ನಾರಾಯಣ ಅವರು, 'ಪದೇ ಪದೆ ಸುಳ್ಳು ಹೇಳಿ ಸಿಕ್ಕಿಬೀಳುತ್ತಿರುವ ಮಹಾನ್‌ ಸುಳ್ಳುಗಾರ ಸಿಎಂ ಸಿದ್ದರಾಮಯ್ಯ ಅವರೇ, ಯುಪಿಎ ಅವಧಿಗಿಂತ ಮೂರೂವರೆ ಪಟ್ಟಿಗೂ ಅಧಿಕ ಅನುದಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 2014-23ರ ನಡುವೆ 2,08,832.02 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, 2004-14ರ ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಕೇವಲ 60,779.84 ಕೋಟಿ ರೂ.' ಎಂದಿದ್ದಾರೆ.

ರಾಜ್ಯದ ಜನತೆಗೆ ಉತ್ತಮ ಆಡಳಿತ ನೀಡಲು ವಿಫಲವಾಗಿರುವ ನೀವು ಇಂತಹ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವುದನ್ನು ನಾಡಿನ ಜನತೆ ಕ್ಷಮಿಸುವರೇ? ಎಂದು ಅಶ್ವತ್ಥ್ ನಾರಾಯಣ ಅವರು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com