ಬೆಂಗಳೂರು: ಮಧ್ಯಂತರ ಆದೇಶವನ್ನು ಉಲ್ಲಂಘಿಸಿ 'ವೈಲ್ಡ್ ಕರ್ನಾಟಕ' ಅಥವಾ 'ಇಂಡಿಯಾಸ್ ವೈಲ್ಡ್ ಕರ್ನಾಟಕ' ಚಲನಚಿತ್ರವನ್ನು ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಬಿಬಿಸಿ (ಯುಕೆ), ಡಿಸ್ಕವರಿ ಮತ್ತು ನೆಟ್‌ಫ್ಲಿಕ್ಸ್ ಸೇರಿದಂತೆ 10 ಮಂದಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಶರತ್ ಚಂಪಾಟಿ, ಕಲ್ಯಾಣ್ ವರ್ಮ, ಅಮೋಘವರ್ಷ ಜೆ ಎಸ್, ವೈಲ್ಡ್ ಕರ್ನಾಟಕ, ಮಡ್‌ಸ್ಕಿಪ್ಪರ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಐಕಾನ್ ಫಿಲ್ಮ್ಸ್ ಲಿಮಿಟೆಡ್, ಐಟಿವಿ ಸ್ಟುಡಿಯೋಸ್ ಗ್ಲೋಬಲ್ ಡಿಸ್ಟ್ರಿಬ್ಯೂಷನ್ ಲಿಮಿಟೆಡ್, ಡಿಸ್ಕವರಿ ಕಮ್ಯುನಿಕೇಷನ್ಸ್ ಇಂಡಿಯಾ, ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ), ಯುನೈಟೆಡ್ ಕಿಂಗ್‌ಡಮ್ ಮತ್ತು ನೆಟ್‌ಫ್ಲಿಕ್ಸ್ ಎಂಟರ್‌ಟೈನ್‌ಮೆಂಟ್ ಸರ್ವೀಸ್ ಇಂಡಿಯಾ ಎಲ್ಎಲ್'ಪಿ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವೈಲ್ಡ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಉದ್ದೇಶಕ್ಕಾಗಿ ನಿರ್ಮಿಸಿಲ್ಲ. ವನ್ಯಜೀವಿ ಸಂಪತ್ತನ್ನು ಉತ್ತೇಜಿಸುವುದು, ಈ ಕುರಿತು ಅರಿವು ಮೂಡಿಸುವುದಕ್ಕೆ ನಿರ್ಮಿಸಲಾಗಿತ್ತು. ಈ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು.
ಇದರ ವಿಚಾರಣೆ ನಡೆಸಿದ್ದ ನ್ಯಾಯಾಲಯ ರಾಜ್ಯ ಅರಣ್ಯ ಇಲಾಖೆಯ ಒಪ್ಪಂದವನ್ನು ಉಲ್ಲಂಘಿಸಿ ಸಾಕ್ಷ್ಯಚಿತ್ರ ಪ್ರಸಾರ ಮಾಡುವುದು, ಹಂಚಿಕೆ ಮಾಡದಂತೆ ಚಿತ್ರದ ನಿರ್ಮಾಪಕರು, ಬೆಂಗಳೂರು ಮೂಲದ ಮಡ್ಸ್ಕಿಪ್ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್‌ಗೆ 2021ರ ಜೂನ್ 29ರಂದು ಹೈಕೋರ್ಟ್ ನಿರ್ಬಂಧ ವಿಧಿಸಿ ಮಧ್ಯಂತರ ಆದೇಶ ನೀಡಿತ್ತು.
ಈ ನಡುವೆ ಅರಣ್ಯ ಇಲಾಖೆಯೊಂದಿಗಿನ ಒಪ್ಪಂದವನ್ನು ಉಲ್ಲಂಘಿಸಿ, ಅರಣ್ಯ ಇಲಾಖೆಯ ಗಮನಕ್ಕೆ ಬಾರದೆ ನಿರ್ಮಾಪಕರು ಚಿತ್ರವನ್ನು ಮಾರಾಟ ಮಾಡಿಕೊಂಡಿದ್ದು, ಅಪರಾರ ಪ್ರಮಾಣದಲ್ಲಿ ಹಣ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಜೊತೆಗೆ, ಅರಣ್ಯ ಇಲಾಖೆಯ ಒಪ್ಪಂದಂತೆ ಹುಲಿ ಸಂರಕ್ಷಣಾ ಪ್ರತಿಷ್ಠಾನ(ಟಿಎಫ್‌ಸಿ)ಕ್ಕೆ ಯಾವುದೇ ಹಣ ಪಾವತಿ ಮಾಡದೆ ಸಾಕ್ಷ್ಯಚಿತ್ರವನ್ನು 100 ದೇಶಗಳಿಗೂ ಹೆಚ್ಚು ಭಾಗಗಳಲ್ಲಿ ಪ್ರಸಾರ ಮಾಡಲಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು.
ನ್ಯಾಯಾಲಯದ ಆದೇಶದ ನಡುವೆ ವೈಲ್ಡ್ ಕರ್ನಾಟಕ ಚಿತ್ರವನ್ನು ಡಿಸ್ಕವರಿ ಚಾನೆಲ್, ಬಿಬಿಸಿ ಮತ್ತು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರ ಮಾಡಲಾಗಿದೆ. 2023ರ ಪ್ರಾರಂಭದ ದಿನಗಳಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಚಿತ್ರದ ಕೆಲವು ತುಣುಕುಗಳು ಪ್ರಸಾರವಾಗಿದೆ. ನ್ಯಾಯಾಲಯದ ಆದೇಶ ತಿಳಿದಿದ್ದರೂ, ಬಿಬಿಸಿ-ಯುಕೆ, ಬಿಬಿಸಿ ಅಮೆರಿಕದಲ್ಲಿ ಚಿತ್ರದ ದೃಶ್ಯಾವಳಿಗಳನ್ನು ಪ್ರಸಾರ ಮಾಡಿದೆ ಎಂದು ಆರೋಪಿಸಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಐಕಾನ್ ಫಿಲ್ಮ್ಸ್ ಅವರು 1500 ಫೌಂಡ್ (1.20 ಲಕ್ಷ)ಗಳನ್ನು ಟಿಎಫ್‌ಸಿಗೆ ಪಾವತಿಸುವುದಾಗಿ ತಿಳಿಸಿದ್ದರು. ಆದರೆ, ಪ್ರಕರಣದ ಇತರೆ ಆರೋಪಿಗಳು ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ಆಧಾರದಲ್ಲಿ ಟಿಎಫ್‌ಸಿಗೆ ಹಣ ಪಾವತಿ ಮಾಡಿದಲ್ಲಿ ಪರಿಗಣಿಸಲಾಗುವುದು ಎಂದು ತಿಳಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಬಿಬಿಸಿ ಪ್ರತಿನಿಧಿಗಳನ್ನು ಹೊರತುಪಡಿಸಿ ಇತರೆ ಆರೋಪಿಗಳು ಟಿಎಫ್‌ಸಿಗೆ ದೇಣಿಗೆ ನೀಡುವುದಾಗಿ ತಿಳಿಸಿದ್ದರು. ಇದೀಗ ಆರೋಪ ನಿಗದಿಗೆ ಹೈಕೋರ್ಟ್ ನಿರ್ಧರಿಸಿದೆ.
Advertisement