ದತ್ತ ಪೀಠ ಪ್ರಕರಣ ಮತ್ತೆ ಮುನ್ನೆಲೆಗೆ: ಗೋರಿಗಳಿಗೆ ಹಾನಿ ಮಾಡಿದ್ದ 14 ಮಂದಿಗೆ ಸಮನ್ಸ್ ಜಾರಿ!

2017ರಲ್ಲಿ ದತ್ತ ಜಯಂತಿ ಆಚರಣೆ ವೇಳೆ ದತ್ತಪೀಠ ಆವರಣದಲ್ಲಿದ್ದ ಗೋರಿಗಳ ಧ್ವಂಸ ಮಾಡಿದ ಆರೋಪ ಹೊತ್ತಿರುವ 14 ಮಂದಿ ಹಿಂದೂ ಕಾರ್ಯಕರ್ತರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಈ ಮೂಲಕ ದತ್ತಪೀಠ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ದತ್ತ ಪೀಠ
ದತ್ತ ಪೀಠ

ಚಿಕ್ಕಮಗಳೂರು: 2017ರಲ್ಲಿ ದತ್ತ ಜಯಂತಿ ಆಚರಣೆ ವೇಳೆ ದತ್ತಪೀಠ ಆವರಣದಲ್ಲಿದ್ದ ಗೋರಿಗಳ ಧ್ವಂಸ ಮಾಡಿದ ಆರೋಪ ಹೊತ್ತಿರುವ 14 ಮಂದಿ ಹಿಂದೂ ಕಾರ್ಯಕರ್ತರಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು, ಈ ಮೂಲಕ ದತ್ತಪೀಠ ವಿಚಾರ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

2017ರಲ್ಲಿ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರ ಮೇಲೆ ನಗರದ ಗ್ರಾಮಾಂತರ ಪೊಲೀಸ್ ಠಾಣೆಯಲಿ ದಾಖಲಾಗಿದ್ದ ದತ್ತಪೀಠ ಆವರಣದ ಗೋರಿಗಳಿಗೆ ಹಾನಿ ಮಾಡಿದ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು 6ವರ್ಷಗಳ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಇದರಂತೆ ಪ್ರಕರಣದ 14 ಮಂದಿ ಆರೋಪಿಗಳಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಪ್ರಕರಣದ ಎ1 ಆರೋಪಿಯಾಗಿರುವ ಸಂಘಪರಿವಾರದ ಕಾರ್ಯಕರ್ತ ತುಡುಕೂರು ಮಂಜು ಸೇರಿದಂತೆ 14 ಮಂದಿ ಆರೋಪಿಗಳು 2017ರ ದತ್ತ ಜಯಂತಿ ವೇಳೆ ಬಾಬಾ ಬುಡನ್ ದರ್ಗಾದ ಆವರಣದಲ್ಲಿದ್ದ ಗೋರಿಗಳಿರುವ ಸ್ಥಳಕ್ಕೆ ನುಗ್ಗಿ ಕೆಲ ಗೋರಿಗಳಿಗೆ ಹಾನಿ ಮಾಡಿದ್ದರು.

ಈ ಘಟನೆ ಸಂಬಂಧ 14 ಮಂದಿ ಆರೋಪಿಗಳ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದ ಗ್ರಾಮಾಂತರ ಠಾಣೆ ಪೊಲೀಸರು ತನಿಖೆಯನ್ನೂ ಕೈಗೊಂಡಿದ್ದರು. ಆದರೆ, ತನಿಖೆ ಸಂಬಂಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಅಂದು ಸಲ್ಲಿಸಿರಲಿಲ್ಲ. ಇದೀಗ, 6 ವರ್ಷಗಳು ಕಳೆದ ಬಳಿಕ ಹಾಲಿ ರಾಜ್ಯ ಸರಕಾರ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಡಿ.6ರಂದು ಈ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಸದ್ಯ ಈ ಪಕ್ರರಣ ಸಂಬಂಧ ಎ1 ಆರೋಪಿ ತುಡುಕೂರು ಮಂಜು ಹಾಗೂ ಶಿವರಾಜ್, ಸಂದೇಶ್, ಸುಮಂತ್, ನಾಗೇಂದ್ರ ಪೂಜಾರಿ, ಮೋಹನ್, ಅಶೋಕ್, ತೇಜು, ಶ್ರೀನಾಥ್, ಲೋಕೇಶ್, ಮಹೇಂದ್ರ, ಸಂದೀಪ್, ರಾಮು ಸೇರಿದಂತೆ 14 ಮಂದಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದ್ದು, ಜ.8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನೋಟಿಸ್‍ನಲ್ಲಿ ಸೂಚನೆ ನೀಡಲಾಗಿದೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಂಘಪರಿವಾರದವರ ಮೇಲಿದ್ದ ಅನೇಕ ಪ್ರಕರಣಗಳನ್ನು ರಾಜ್ಯ ಸರಕಾರ ಹಿಂಪಡೆದಿದ್ದು, ಬಾಬಾ ಬುಡನ್ ದರ್ಗಾ ಆವರಣದಲ್ಲಿದ್ದ ಗೋರಿಗಳಿಗೆ ಹಾನಿ ಪ್ರಕರಣವನ್ನೂ ಸರಕಾರ ಹಿಂಪಡೆಯಲು ಮುಂದಾಗಿತ್ತು, ಆದರೆ, ಪೊಲೀಸರು ಈ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದ ಕಾರಣದಿಂದ ಪ್ರಕರಣ ರದ್ದಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಬಾರ್ ಕೌನ್ಸಿಲ್ ಅಧ್ಯಕ್ಷ ಸುಧಾಕರ್ ಮಾತನಾಡಿ, ಅಂದಿನ ಬಿಜೆಪಿ ಸರಕಾರ ಪ್ರಕರಣವನ್ನು ಹಿಂಪಡೆದಿದ್ದರೂ ಆರೋಪಪಟ್ಟಿ ಸಲ್ಲಿಸದ ಕಾರಣ ಪ್ರಕರಣ ರದ್ದಾಗಿರಲಿಲ್ಲ. ಚಾರ್ಜ್‌ಶೀಟ್ ಅನ್ನು ಪೊಲೀಸರು ಒಂದು ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಇರಿಸಿಕೊಳ್ಳಬಾರದು, ಆದರೆ ಗ್ರಾಮಾಂತರ ಪೊಲೀಸರು 6 ವರ್ಷಗಳ ನಂತರ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಇದು ಪೊಲೀಸರಿಂದಾಗಿರುವ ತಪ್ಪಾಗಿದೆ. ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ ದತ್ತಪೀಠ ಪ್ರಕರಣವನ್ನು ರೀಓಪನ್ ಮಾಡಿರುವ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿಟಿ ರವಿಯವರು ಕಿಡಿಕಾರಿದ್ದು ಪಿಎಫ್‌ಐಗೆ ಸಂಬಂಧಿಸಿದ ಪ್ರಕರಣಗಳನ್ನು ಮರು ತೆರೆಯಲಿ ಎಂದು ಸವಾಲು ಹಾಕಿದ್ದಾರೆ.

ಈ ಹಿಂದೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 2017ರಲ್ಲಿ ದತ್ತಪೀಠದ ಆವರಣದಲ್ಲಿ ನಡೆದ ಗೋರಿ ಹಾನಿ ಪ್ರಕರಣದ ಮರುತನಿಖೆ ಆದೇಶ ಸುಳ್ಳು ಎಂದು ಹೇಳಿದ್ದರು.

2017 ರಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 2020 ರ ಮಾರ್ಚ್ 19 ರಂದು ವಿಚಾರಣೆಗೆ ಅನುಮತಿಗಾಗಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಅದರ ಆಧಾರದಲ್ಲಿ 2023 ರ ಸೆಪ್ಟೆಂಬರ್ 7ರಂದು ಸರ್ಕಾರ ಅನುಮತಿ ನೀಡಿತ್ತು. 2023ರ ಅಕ್ಟೋಬರ್ 24 ರಂದು ಆರೋಪಿಗಳ ವಿರುದ್ಧ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಬಳಿಕ ಕಾನೂನು ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಜನವರಿ 8ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ನ್ಯಾಯಾಲಯದಿಂದಲೇ ಸಮನ್ಸ್ ಜಾರಿಯಾಗಿದೆ. ಇದು ಸಹಜ ಕಾನೂನು ಪ್ರಕ್ರಿಯೆಯಾಗಿದೆ ಎಂದು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com