ಬೆಳಗಾವಿಯಲ್ಲಿ ನೈತಿಕ ಪೊಲೀಸ್ ಗಿರಿ: ಪೊಲೀಸರಿಂದ ಸ್ಥಳ ಮಹಜರು, ಬಿಮ್ಸ್ ಆಸ್ಪತ್ರೆಗೆ ವಿಹೆಚ್ ಪಿ ಕಾರ್ಯಕರ್ತರ ಭೇಟಿ

ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದವರನ್ನು ಪ್ರೇಮಿಗಳು ಎಂದು ಭಾವಿಸಿ ಅನ್ಯಕೋಮಿನ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಭಾನುವಾರ ಸ್ಥಳ ಮಹಜರು ನಡೆಸಿದ್ದಾರೆ.
ಪೊಲೀಸರಿಂದ ಬಂಧನ
ಪೊಲೀಸರಿಂದ ಬಂಧನ

ಬೆಳಗಾವಿ: ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಬಂದವರನ್ನು ಪ್ರೇಮಿಗಳು ಎಂದು ಭಾವಿಸಿ ಅನ್ಯಕೋಮಿನ ಯುವಕರು ನೈತಿಕ ಪೊಲೀಸ್ ಗಿರಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಭಾನುವಾರ ಸ್ಥಳ ಮಹಜರು ನಡೆಸಿದ್ದಾರೆ.

ಬೆಳಗಾವಿ ಮಾರ್ಕೆಟ್ ಠಾಣೆ ಪೊಲೀಸರಿಂದ 17 ಜನರ ವಿರುದ್ಧ ಎಫ್​​ಐಆರ್ ದಾಖಲು ಮಾಡಲಾಗಿದ್ದು, 7 ಆರೋಪಿಗಳನ್ನು ಬಂಧಿಸಲಾಗಿದೆ. ಮೊಹಮ್ಮದ್​ ಇನಾಂದಾರ್, ಆತೀಫ್ ಅಹಮದ್‌ ಶೇಖ್, ಸೈಫ್​ ಅಲಿ ಮಗ್ದುಮ್, ಉಮರ್​ ಬಡೇಗರ್, ಅಜಾನ್ ಕಾಲಕುಂದ್ರಿ, ರಿಯಾನ್ ರೋಟವಾಲೆ ಬಂಧಿತರು. ಇಬ್ಬರು ಬಾಲಕರು ಕಾನೂನು ಸಂಘರ್ಷಕ್ಕೆ ಒಳಗಾಗಿದ್ದು, ಎಸ್​ಸಿ, ಎಸ್​ಟಿ ದೌರ್ಜನ್ಯ ಕಾಯ್ದೆ ಸೇರಿ 10ನೇ ಕಲಂ ಬಳಸಿ ಎಫ್​​ಐಆರ್ ದಾಖಲು ಮಾಡಲಾಗಿದೆ.

ಘಟನೆ ತಿಳಿದು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಭೇಟಿ ನೀಡಿ ಸಂತ್ರಸ್ತ ಯುವಕ, ಯುವತಿಯನ್ನು ಭೇಟಿ ಮಾಡಿ ಕುಟುಂಬಸ್ಥರ ಜೊತೆ ಮಾತನಾಡಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. 

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಕೆ.ಎಸ್​.ಈಶ್ವರಪ್ಪ, ಕೆಲವು ಮುಸಲ್ಮಾನ್ ಗೂಂಡಾಗಳು ಯವಕ ಸಚಿನ್ ಮೇಲೆ ದಾಳಿ ಮಾಡಿದ್ದಾರೆ. ಮುಸ್ಲಿಂ ಯುವತಿ ಜತೆ ಏನು ಮಾಡುತ್ತಿದ್ದೀಯ ಅಂತಾ ಹಲ್ಲೆಗೈದಿದ್ದಾರೆ. ಸಚಿನ್ ಲಮಾಣಿ ಸಂಬಂಧಿಕರು ಮುಸ್ಲಿಂಗೆ ಮತಾಂತರ ಆಗಿದ್ದಾರೆ. ಹಲ್ಲೆಗೊಳಗಾದ ಮುಸ್ಕಾನ್ ಸಚಿನ್​ಗೆ ತಂಗಿ ಆಗಬೇಕು. ಇಬ್ಬರು ಯುವನಿಧಿಗೆ ಅರ್ಜಿ ಹಾಕಲು ಬಂದಾಗ ಹಲ್ಲೆ ನಡೆಸಿದ್ದಾರೆ.

ಹಲ್ಲೆ ನಡೆಸಿರುವುದನ್ನು ಹಿಂದೂ ಸಂಘಟನೆಗಳು ವಿರೋಧ ಮಾಡಿದರೆ ಸಿಎಂ, ಸಚಿವರು ಕೋಮುಗಲಭೆ ಮಾಡಿಸುತ್ತಿದ್ದಾರೆಂದು ಆರೋಪಿಸುತ್ತಾರೆ. ಇದರ ಬಗ್ಗೆ ತಕ್ಷಣವೇ ಸಿಎಂ, ಗೃಹಸಚಿವರು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

7 ಆರೋಪಿಗಳ ಬಂಧನ: ಡಿಸಿಪಿ ರೋಹನ್​ ಜಗದೀಶ್​: ಡಿಸಿಪಿ ರೋಹನ್​ ಜಗದೀಶ್​ ಪ್ರತಿಕ್ರಿಯೆ ನೀಡಿದ್ದು, ಘಟನೆ ಸಂಬಂಧ ಮಾರ್ಕೆಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಂಬಂಧಿ ಮುಸ್ಕಾನ್ ಜತೆ ಸಚಿನ್ ಲಮಾಣಿ ಓಡಾಡುತ್ತಿದ್ದರು. ಈ ವೇಳೆ ಯುವಕರ ಗುಂಪು ಇಬ್ಬರ ಮೇಲೆ ಹಲ್ಲೆ‌ ನಡೆಸಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ 7 ಆರೋಪಿಗಳ ಬಂಧನ ಆಗಿದೆ ಎಂದು ಹೇಳಿದ್ದಾರೆ.

ಬಿಮ್ಸ್‌ ಆಸ್ಪತ್ರೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರ ಭೇಟಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ವಿಶ್ವ ಹಿಂದೂ ಪರಿಷತ್ ಪ್ರಾಂತ ಕೋಶಾಧ್ಯಕ್ಷ ಕೃಷ್ಣಭಟ್ ನೇತೃತ್ವದಲ್ಲಿ ಭೇಟಿ ಮಾಡಿದ್ದು, ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಕುಟುಂಬದವರಿಗೂ ಧೈರ್ಯ ತುಂಬಿ ಆರ್ಥಿಕ ಸಹಾಯ ಮಾಡುವ ಭರವಸೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com