ಕೋಮುಗಲಭೆಗೆ ಯತ್ನ ವಿಚಾರ: ಬಿಕೆ ಹರಿಪ್ರಸಾದ್‌ ವಿರುದ್ಧ ಪುನೀತ್ ಕೆರೆಹಳ್ಳಿ ದೂರು

ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಲು ತನ್ನ ಫೋನ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿರುವ ರಾಷ್ಟ್ರರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಅವರು ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪುನೀತ್ ಕೆರೆಹಳ್ಳಿ
ಪುನೀತ್ ಕೆರೆಹಳ್ಳಿ

ಬೆಂಗಳೂರು: ಸಮಾಜದಲ್ಲಿ ಕೋಮುಗಲಭೆ ಸೃಷ್ಟಿಸಲು ತನ್ನ ಫೋನ್ ನಂಬರ್ ಬಳಸಿ ನಕಲಿ ವಾಟ್ಸಾಪ್ ಸಂದೇಶಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿರುವ ರಾಷ್ಟ್ರರಕ್ಷಣಾ ಪಡೆ ಮುಖಂಡ ಪುನೀತ್ ಕೆರೆಹಳ್ಳಿ ಅವರು ಬಸವನಗುಡಿ ಪೊಲೀಸರಿಗೆ ದೂರು ನೀಡಿದ್ದಾರೆ.

‘ಹರಿಪ್ರಸಾದ್ ಅವರು ‘ಎಕ್ಸ್‌’ ಖಾತೆಯಲ್ಲಿ ನನ್ನ ಹೆಸರು ಹಾಕಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆಂದು ಆರೋಪಿಸಿದ್ದ ಪುನೀತ್ ಅವರು, ಬಸವನಗುಡಿ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದರು. ಆದರೆ ಬಸವನಗುಡಿ ಠಾಣೆಯ ಪೊಲೀಸರು ಮೊದಲಿಗೆ ದೂರು ಸ್ವೀಕರಿಸಲು ನಿರಾಕರಿಸಿದ್ದರು. ಇದರಿಂದ ಕೆಂಡಾಮಂಡಲಗೊಂಡ ಪುನೀತ್ ಅವರು, ಠಾಣೆ ಎದುರು ಧರಣಿ ನಡೆಸಿದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ನಂಬರ್​ನ ಸ್ಕ್ರೀನ್ ಶಾಟ್​ವೊಂದನ್ನ ಬಳಸಿ ಕೋಮು ಗಲಭೆ ಸೃಷ್ಟಿಸುವುದಕ್ಕೆ ಪುನೀತ್ ಕೆರೆಹಳ್ಳಿಯನ್ನ ಬಿಜೆಪಿ ಬಳಸುತ್ತಿದೆ ಎಂದು ಹಾಕಿದ್ದರು. ಆ ಸ್ಕ್ರೀನ್ ಶಾಟ್ ನಕಲಿ ಎಂದು ಹೇಳಿದರು.

ಅದು ಎಲ್ಲಿದೆ ಅದನ್ನ ತೋರಿಸಲಿ. ನನ್ನ ಮೊಬೈಲ್ ಪರಿಶೀಲನೆ ಮಾಡಿ. ಯಾರ ಮೊಬೈಲ್​ನಲ್ಲಿ ಆ ಸ್ಕ್ರೀನ್ ಶಾಟ್ ತೆಗೆದಿರಿ. ಯಾಕೆ ಸುಳ್ಳು ಸುದ್ದಿಯನ್ನ ಹಬ್ಬಿಸುತ್ತಿದ್ದಾರೆ. ಗೋಧ್ರಾ ಬಗ್ಗೆ ಹೇಳಿಕೆ ಕೊಟ್ಟ ಮೇಲೆ ಈ ರೀತಿ ಪೋಸ್ಟ್ ಮಾಡಿದ್ದಾರೆ. ರಾಮ ಮಂದಿರಕ್ಕೆ ಹೋಗುವವರು ಭಯ ಪಡಬೇಕು ಎಂದು ಈ ತರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಶ್ರೀಕಾಂತ್ ಪೂಜಾರಿ ಹಳೇ ಕೇಸ್ ಓಪನ್ ಆಗುತ್ತೆ. ದತ್ತಪೀಠ ಕೇಸ್​​ ರೀ ಓಪನ್ ಆಗುತ್ತೆ. ಈಗ ನನ್ನ ಮೇಲೆ ಆರೋಪ ಬರುತ್ತೆ. ಇದೆಲ್ಲವನ್ನೂ ಹಿಂದೂ ಕಾರ್ಯಕರ್ತರನ್ನ ಭಯ ಪಡಿಸುತ್ತಿದೆ. ದೂರು ಕೊಟ್ಟಿದ್ದೇವೆ. ಆದರೆ ಎಫ್ಐಆರ್ ಹಾಕುವುದಕ್ಕೆ ಮೀನಾಮೇಷವೆಣಿಸುತ್ತಿದ್ದಾರೆ. ಪ್ರತಿಯೊಂದಕ್ಕೂ ಕೋರ್ಟ್​​ಗೆ ಹೋಗುವುದಕ್ಕೆ ಆಗಲ್ಲ. ಎಫ್ಐಆರ್ ಹಾಕುವವರೆಗೂ ನಾನು ಬಿಡಲ್ಲ. ನನ್ನನ್ನ ಭಯೋತ್ಪಾದಕ ಅಂತೀರಾ ನಾಚಿಕೆ ಆಗಲ್ವಾ? ಡಿಜೆ ಹಳ್ಳಿಯಲ್ಲಿ ನಿಮ್ಮ ಅಣ್ಣ ತಮ್ಮಂದಿರು ಮಾಡಿರುವ ಕೆಲಸ. ನನ್ನನ್ನ ಯಾಕೆ ನೀವು ಮತಾಂಧ ಅಂತೀರಾ ಎಂದು ಪ್ರಶ್ನಿಸಿದರು. ಧರಣಿ ನಂತರ ಬಸವನಗುಡಿ ಪೊಲೀಸರು ಎನ್‌ಸಿಆರ್ ದಾಖಲಿಸಿದರು.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಹರಿಪ್ರಸಾದ್ ಅವರು, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕೋಮು ಗಲಭೆ ಸೃಷ್ಟಿಸಿ, ಧರ್ಮ ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸಕ್ಕೆ ಬಿಜೆಪಿ ಪಕ್ಷ ತನ್ನ ಸಹೋದರ ಸಂಘಟನೆಗಳಿಗೆ ಅಣಿಗೊಳಿಸುತ್ತಿರುವುದು ಬಹಿರಂಗವಾಗುತ್ತಿದೆ. ರೌಡಿ ಶೀಟರ್ ಆಗಿರುವ ಪುನೀತ್ ಕೆರೆಹಳ್ಳಿ ಎಂಬ ಮತಾಂಧನಿಗೆ ಬಿಜೆಪಿಯಿಂದ ಕೋಮು ಗಲಬೆ ನಡೆಸುವ ಫತ್ವಾ ಬಂದಿದೆ ಎಂದು ಸ್ವತಃ ತಾನೇ ಸೃಷ್ಟಿಸಿರುವ "ರಾಷ್ಟ್ರ ರಕ್ಷಣಾ ಪಡೆ" ಎಂಬ ವಾಟ್ಸಪ್ ಗ್ರೂಪಿನಲ್ಲಿ ಹೇಳಿಕೊಂಡಿದ್ದಾನೆ.ಕೋಮು ಗಲಭೆ ನಡೆಸಿ 2024ಕ್ಕೆ "ವಿಶ್ವಗುರುವನ್ನ" ಮತ್ತೆ ಪ್ರಧಾನಿಯಾಗಬೇಕೆಂದು ಈ ಭಯೋತ್ಪಾದಕರ ತಂಡ ಕೆಲಸ ಮಾಡಲಿದೆಯಂತೆ.

ರಾಜ್ಯದಲ್ಲಿ ಎಲ್ಲಿ?ಯಾವಾಗಾ?ಹೇಗಾದರೂ ಭಯೋತ್ಪಾದಕ ಕೃತ್ಯಗಳನ್ನ ನಡೆಸಲು ಸಂಚು ನಡೆಯುತ್ತಿರುವುದು ಸ್ಪಷ್ಟವಾಗುತ್ತಿದೆ. ಇಂತಹ ಸಮಾಜಘಾತುಕರಿಗೆ  ಇಡಿ ಬಿಜೆಪಿಯೇ ಬೆಂಬಲಕ್ಕೆ ನಿಂತಿರುವುದು ಜಗಜ್ಜಾಹೀರು. ಕೂಡಲೇ ಸರ್ಕಾರ ಇಂತಹ ಭಯೋತ್ಪಾದಕ ಶಕ್ತಿಗಳನ್ನ ಮಟ್ಟ ಹಾಕಬೇಕು. ರಾಜ್ಯದ ಆಂತರಿಕ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿರುವವರ ಮೇಲೆ ರಾಷ್ಟ್ರದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಿ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com