ಹಲೋ.. ನಾನು ಮುಂಬೈ ಕ್ರೈಂ ಬ್ರಾಂಚ್‌ನಿಂದ ಡಿಸಿಪಿ ಮಾತಾಡ್ತಿರೋದು; ವಂಚಕರ ಜಾಲದ ಬಗ್ಗೆ ಪೊಲೀಸರ ಎಚ್ಚರಿಕೆ

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಅದೆಷ್ಟು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದರೆ ಎಂತವರಾದರೂ ಒಂದು ಕ್ಷಣ ನಿಜವೆಂದು ನಂಬುವಂತಿರುತ್ತದೆ. ಈಗಂತು ಪೊಲೀಸರ ಹೆಸರಿನಲ್ಲೇ ಹಲವು ರೀತಿಯಲ್ಲಿ ವಂಚನೆಯ ಬಲೆ ಬೀಸುತ್ತಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ. 
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ಅದೆಷ್ಟು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ ಎಂದರೆ ಎಂತವರಾದರೂ ಒಂದು ಕ್ಷಣ ನಿಜವೆಂದು ನಂಬುವಂತಿರುತ್ತದೆ. ಈಗಂತು ಪೊಲೀಸರ ಹೆಸರಿನಲ್ಲೇ ಹಲವು ರೀತಿಯಲ್ಲಿ ವಂಚನೆಯ ಬಲೆ ಬೀಸುತ್ತಿದ್ದಾರೆ. ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸರು ಎಚ್ಚರಿಕೆಯ ಸಂದೇಶವೊಂದನ್ನು ನೀಡಿದ್ದಾರೆ. 

'ಹಲೋ.. ನಾನು ಮುಂಬೈ ಕ್ರೈಂ ಬ್ರಾಂಚ್‌ನಿಂದ ಡಿಸಿಪಿ ಮಾತಾಡ್ತಿರೋದು'. 'ಈ 2 ನಿಮಿಷದ ಓದು ನಿಮ್ಮನ್ನು ಸೈಬರ್ ವಂಚನೆಯಿಂದ ಪಾರು ಮಾಡಬಲ್ಲದು'. ಮುಂಬೈ ಡಿಸಿಪಿ ನಮಗ್ಯಾಕೆ ಕರೆ ಮಾಡುತ್ತಿದ್ದಾರೆ ಎಂದುಕೊಂಡೇ ನೀವು ಕರೆ ಸ್ವೀಕರಿಸಿದರೆ ಅದರಿಂದ ನೀವು ಸೈಬರ್ ವಂಚನೆಗೆ ಒಳಗಾಗುವ ಸಾಧ್ಯತೆಯಿರುತ್ತದೆ. ಅದು ಹೇಗೆ ಅಂತೀರಾ? ಯಾಕಂದ್ರೆ ಅದು ನಕಲಿ ಡಿಸಿಪಿಯ ಕರೆಯಾಗಿದ್ದು, ಸೈಬರ್ ವಂಚಕರ ಜಾಲದ ಭಾಗವಾಗಿರುತ್ತದೆ. ಈ ವಂಚಕರ ಜಾಲ ಹೇಗೆ ಕೆಲಸ ಮಾಡುತ್ತದೆ ಎಂಬ ಕುರಿತು ಡೀಟೆಲ್ ಆಗಿ ತಿಳಿದುಕೊಳ್ಳೋಣ.

ಮೊದಲಿಗೆ ಪಾರ್ಸೆಲ್ ಆರ್ಡರ್ 

ಮೊದಲಿಗೆ ನಿಮ್ಮ ಹೆಸರಿನಲ್ಲಿ ಬಟ್ಟೆ, ಪಾದರಕ್ಷೆ, ಲ್ಯಾಪ್ ಟಾಪ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನು ಒಳಗೊಂಡ ಪಾರ್ಸೆಲ್ ಅನ್ನು ನಿಮ್ಮ ಹೆಸರಿನಲ್ಲಿ ಬುಕ್ ಮಾಡಿದ್ದಾರೆಂದು ನಕಲಿ ಪಾರ್ಸೆಲ್ ಕಂಪನಿಯೊಂದರಿಂದ ಅಥವಾ ಡೆಲಿವರಿ ಬಾಯ್‌ನಿಂದ ನಿಮಗೆ ಕರೆ ಬರುತ್ತದೆ. ಅವರು ನಿಮ್ಮ ಮನೆ ವಿಳಾಸವನ್ನು ಕೂಡ ಸರಿಯಾಗಿಯೇ ಹೇಳುತ್ತಾರೆ. ನೀವು ಯಾವುದೇ ವಸ್ತುವನ್ನು ಆರ್ಡರ್ ಮಾಡಿಲ್ಲ ಎಂದಾಗ ಅವರು ಈ ಪಾರ್ಸೆಲ್‌ಗೆ ನಿಮ್ಮ ಆಧಾರ್ ಲಿಂಕ್ ಆಗಿದ್ದು, ಪಾರ್ಸೆಲ್ ಅನ್ನು ಕ್ಯಾನ್ಸಲ್ ಮಾಡಿದ್ದೇವೆ ಎನ್ನುತ್ತಾರೆ. ಆದರೆ, ನಿಮ್ಮ ಡೇಟಾ ಲೀಕ್ ಆಗಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೈಬರ್ ಕ್ರೈಂನಲ್ಲಿ ದೂರು ದಾಖಲಿಸಿ, ಹುಷಾರಾಗಿರಿ ಎಂದು ವಂಚಕರೇ ಸಲಹೆ ನೀಡುತ್ತಾರೆ.

ಟ್ರೂ ಕಾಲರ್‌ನಲ್ಲಿಯೂ ಕ್ರೈಂ ಬ್ರಾಂಚ್ ಡಿಸಿಪಿ

ನಂತರ ನಿಮಗೆ ವಿಡಿಯೋ ಅಥವಾ ಆಡಿಯೋ ಕರೆ ಬರುತ್ತದೆ. ಕರೆ ಸ್ವೀಕರಿಸಿದಾಗ ಆಕಡೆಯ ವ್ಯಕ್ತಿ 'ನಾನು ಮುಂಬೈ ಕ್ರೈಂ ಬ್ರಾಂಚ್ ಡಿಸಿಪಿ ಮಾತನಾಡುತ್ತಿದ್ದೇನೆ. 'ನಿಮ್ಮ ಆಧಾರ್ ಕಾರ್ಡ್ ಹವಾಲಾ ರಾಕೆಟ್‌ಗೆ ಲಿಂಕ್ ಆಗಿದೆ. ನಿಮ್ಮ ವಿರುದ್ಧ ದೂರು ದಾಖಲಿಸಲಾಗುತ್ತಿದೆ. ವಾರಂಟ್ ಜಾರಿ ಮಾಡಿ ನಿಮ್ಮನ್ನು ಬಂಧಿಸಲಾಗುತ್ತದೆ' ಎಂದು ಭಯಪಡಿಸುತ್ತಾರೆ. 

ಟ್ರೂ ಕಾಲರ್‌ಗಳಂತಹ ಅಪ್ಲಿಕೇಶನ್‌ಗಳಲ್ಲಿ ನಿಮಗೆ ಕರೆ ಬಂದಂತಹ ನಂಬರ್ ಅನ್ನು ಚೆಕ್ ಮಾಡಿದ್ರೆ ಅಲ್ಲಿಯೂ 'ಕ್ರೈಂ ಬ್ರಾಂಚ್ ಡಿಸಿಪಿ' ಅಂತಲೇ ಬರುತ್ತದೆ. ಅಂದರೆ ಅಲ್ಲಿಯೂ ಅದೇ ಹೆಸರಿನಿಂದ ಆ ನಂಬರ್ ಅನ್ನು ಸೇವ್ ಮಾಡಲಾಗಿರುತ್ತದೆ. 

ಇದರಿಂದ ಭಯಗೊಂಡ ನೀವು, ಇದರಲ್ಲಿ ನನ್ನ ಪಾತ್ರವಿಲ್ಲ. ನನಗೆ ಈ ಬಗ್ಗೆ ಗೊತ್ತಿಲ್ಲ ಎಂದ ಕೂಡಲೇ, ನೀವು ಇದರಿಂದ ಪಾರಾಗಲು ಮತ್ತು ನಿಮ್ಮ ಪಾತ್ರವಿಲ್ಲ ಎಂದು ಸಾಬೀತುಪಡಿಸಲು ಆಧಾರ್ ಕಾರ್ಡ್ ಲಿಂಕ್ ಇರುವ ನಿಮ್ಮ ಬ್ಯಾಂಕ್ ಅಕೌಂಟ್ ಅನ್ನು ವೆರಿಫೈ ಮಾಡಿ. ಇದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಇಲ್ಲದಿದ್ದರೆ ನೀವು ದೊಡ್ಡ ತೊಂದರೆಗೆ ಸಿಲುಕುತ್ತೀರಿ ಎನ್ನುತ್ತಾರೆ.

ಒಟಿಪಿ ಕೇಳುತ್ತಾರೆ

ವಂಚಕರ ಮಾತನ್ನು ನಂಬಿದರೆ, 'ನಿಮ್ಮಿಂದಲೇ ನಿಮ್ಮ ಬ್ಯಾಂಕ್ ಅಕೌಂಟ್ ವಿವರಗಳನ್ನು ಪಡೆದುಕೊಳ್ಳುವ ಅವರು ನಂತರ ಓಟಿಪಿ ಕೇಳುತ್ತಾರೆ. ಒಟಿಪಿಯನ್ನು ಪಡೆದುಕೊಂಡ ನಂತರ, 'ಇನ್ನು ನಿಮಗೆ  ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿ ಕರೆಯನ್ನು ಕಟ್ ಮಾಡುತ್ತಾರೆ'. ಇದೊಂದು ವಂಚನೆಯ ಜಾಲ ಎಂದು ತಿಳಿಯುವ ಹೊತ್ತಿಗೆ ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲಾ ಖದೀಮರು ದೋಚಿರುತ್ತಾರೆ. 

ಹೀಗೆ  ವಿವಿಧ ಕಾರಣ ಅಥವಾ ನೆಪಗಳನ್ನು ಹೇಳಿ 'ಮುಂಬೈ ಪೊಲೀಸ್, ದೆಹಲಿ ಪೊಲೀಸ್, ಸೈಬರ್ ಕ್ರೈಂ ಬ್ರಾಂಚ್ ಎಂದು ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿಯೇ ಕರೆ ಮಾಡುವ ವಂಚಕರು ನಿಮ್ಮ ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ. ನಿಮ್ಮಿಂದ ಹಣವನ್ನು ದೋಚುತ್ತಾರೆ.

ಈ ರೀತಿಯ ಅಪರಿಚಿತ ಕರೆಗಳು ಬಂದರೆ ಯಾವುದೇ ರೀತಿಯ ಬ್ಯಾಂಕ್ ಅಕೌಂಟ್ ಮಾಹಿತಿಗಳನ್ನು ಓಟಿಪಿ ಹಾಗೂ ನಿಮ್ಮ ವೈಯಕ್ತಿಕ ವಿವರಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ ಹಾಗೂ ಇಂತಹ ವಂಚನೆ ಸಂಭವಿಸಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ನೀಡಿ ಮತ್ತು 1930 ಸಹಾಯವಾಣಿಗೆ ಕರೆ ಮಾಡಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬದ ಸದಸ್ಯರಿಗೆ ತಿಳಿಸಿ ಜಾಗೃತಿ ಮೂಡಿಸಿ ಎಂದು ಪೊಲೀಸರು ಸರಣಿ ಟ್ವೀಟ್ ಮೂಲಕ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com