ಬೆಳಗಾವಿ: ಅರೆಬೆತ್ತಲೆಗೊಳಿಸಿ ಹಲ್ಲೆ ಕುರಿತ ಮಹಿಳೆಯ ಆರೋಪಕ್ಕೆ ಸಾಕ್ಷ್ಯಾಧಾರಗಳಿಲ್ಲ; ಪೊಲೀಸರು

ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಮಹಿಳೆಯನ್ನು ಎಳೆದಾಡಿ ಬಟ್ಟೆ ಹರಿದು, ಥಳಿಸಿದ ಆರೋಪ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಹೀಗಾಗಿ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಅವರು ಬುಧವಾರ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಪಟ್ಟಂತೆ ಮಹಿಳೆಯನ್ನು ಎಳೆದಾಡಿ ಬಟ್ಟೆ ಹರಿದು, ಥಳಿಸಿದ ಆರೋಪ ಕುರಿತು ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ. ಹೀಗಾಗಿ ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಅವರು ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನವೆಂಬರ್ 21, 2023 ರಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಸೇರಿದಂತೆ ಗುಂಪೊಂದು ತನ್ನನ್ನು ವಿವಸ್ತ್ರಗೊಳಿಸಿ, ಥಳಿಸಿತು. ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದರು. ಅಲ್ಲದೆ, ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನನ್ನನ್ನು ಕೂಡಿ ಹಾಕಿ ಖಾಲಿ ಕಾಗದದ ಹಾಳೆಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು ಎಂದು ದೂರಿನಲ್ಲಿ ಹೇಳಿಕೊಂಡಿದ್ದರು. ಡಿಸೆಂಬರ್ 29 ರಂದು ದೂರು ದಾಖಲಾಗಿದ್ದು, ಎಲ್ಲಾ ಆಯಾಮದಿಂದಲೂ ತನಿಖೆ ನಡೆಸಲಾಗಿದೆ. ಆದರೆ ಇಲ್ಲಿಯವರೆಗೆ ಆರೋಪದ ಕುರಿತು ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ ಎಂದು ಹೇಳಿದ್ದಾರೆ.

ತನ್ನ ಮೊಬೈಲ್ ಫೋನ್‌ನಲ್ಲಿರುವ ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದೂ ಮಹಿಳೆ ಆರೋಪಿಸಿದ್ದಾರೆ, ಸಾಕ್ಷ್ಯವಾಗಿ ಅದನ್ನು ಪಡೆಯಲು ಕೇಳಲಾಗಿತ್ತು. ಆದರೆ, ಮಹಿಳೆ ಫೋನ್'ನ್ನು ನೀಡುತ್ತಿಲ್ಲ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ ಮಾಡಿರಬಹುದು. ಆದರೆ, ಆಕೆ ಸ್ವಯಂಪ್ರೇರಿತವಾಗಿ ಜಿಲ್ಲಾ ಪಂಚಾಯತ್ ಕಚೇರಿಗೆ ಹೋಗಿ, ಜಮೀನು ವಿವಾದ ಕುರಿತು ದೂರು ದಾಖಲಿಸಿರುವ ಕುರಿತು ಬಲವಾದ ಸಾಕ್ಷ್ಯಾಗಳು ದೊರೆತಿವೆ.

ಮಹಿಳೆ ಜಿಲ್ಲಾ ಪಂಚಾಯತ್ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಏನಾಯಿತು ಎಂಬುದನ್ನು ತಿಳಿಯಲು ತನಿಖೆ ಮುಂದುವರೆದಿದೆ. ಮಹಿಳೆ ಹಾಗೂ ಆರೋಪಿಗಳ ನಡುವೆ ನಡೆದ ಮಾತುಕತೆ ವೇಳೆ ಮಹಿಳಾ ಅಧಿಕಾರಿಯೊಬ್ಬರು ಸ್ಥಳದಲ್ಲಿದ್ದರು ಎಂಬುದು ತಿಳಿದುಬಂದಿದೆ. ಆ ಮಹಿಳಾ ಅಧಿಕಾರಿ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಹಾಗೂ ಥಳಿಸಿರುವ ಆರೋಪವನ್ನು ನಿರಾಕರಿಸಿದ್ದಾರೆ. ಹಗಲು ಹೊತ್ತಿನಲ್ಲಿ ಮಹಿಳಾ ಅಧಿಕಾರಿಯ ಎದುರೇ ಇಂತಹ ಘಟನೆ ನಡೆದಿದೆ ಎನ್ನುವುದನ್ನು ನಂಬುವುದು ಕಷ್ಟ. ಇನ್ನು ವೈದ್ಯರು ಕೂಡ ಮಹಿಳೆಯ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲ ಎಂದು ವರದಿ ನೀಡಿದ್ದಾರೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com