ಕೋಮುಲ್ ನೇರ ನೇಮಕಾತಿ ಹಗರಣ: ತಪ್ಪು ಮಾಡಿಲ್ಲ, ಆರೋಪದಿಂದ ಹೊರಬರುವ ವಿಶ್ವಾಸವಿದೆ- ಶಾಸಕ ನಂಜೇಗೌಡ

ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ವಿರುದ್ಧ ಕೇಳಿಬಂದಿರುವ ಆರೋಪದಿಂದ ಹೊರಬರುವ ವಿಶ್ವಾಸವಿದೆ ಎಂದು ಮಾಲೂರು ಶಾಸಕ ನಂಜೇಗೌಡ ಅವರು ಗುರುವಾರ ಹೇಳಿದರು.
ಶಾಸಕ ನಂಜೇಗೌಡ
ಶಾಸಕ ನಂಜೇಗೌಡ

ಬೆಂಗಳೂರು: ನಾನು ಯಾವುದೇ ತಪ್ಪು ಮಾಡಿಲ್ಲ, ನನ್ನ ವಿರುದ್ಧ ಕೇಳಿಬಂದಿರುವ ಆರೋಪದಿಂದ ಹೊರಬರುವ ವಿಶ್ವಾಸವಿದೆ ಎಂದು ಮಾಲೂರು ಶಾಸಕ ನಂಜೇಗೌಡ ಅವರು ಗುರುವಾರ ಹೇಳಿದರು.

ಇಡಿ ಅಧಿಕಾರಿಗಳ ಶೋಧಾ ಕಾರ್ಯ ಅಂತ್ಯವಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ನಂಜೇಗೌಡ ಅವರು, ಸೋಮವಾರ ಬೆಳಗ್ಗೆ 5 ಗಂಟೆಗೆ ಇಡಿ ಅಧಿಕಾರಿಗಳು ಮನೆಗೆ ಪ್ರವೇಶ ಮಾಡಿ ಕೆಲ ಮಾಹಿತಿಗಳನ್ನು ಕೇಳಿದರು. ನಮ್ಮ ಕುಟುಂಬದವರು ಎಲ್ಲರೂ ಮಾಹಿತಿ ನೀಡಿದ್ದೇವೆ. ನನ್ನಂತ ಸಾಮಾನ್ಯದವನ ಮನೆಗೆ ಇಡಿ ಬಂದಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.

ಇಡಿ ಅಧಿಕಾರಿಗಳು ಮೂರು ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೋಮುಲ್ ನೇಮಕಾತಿ, ದರಖಾಸ್ತು ಕಮಿಟಿ ಹಾಗೂ ನನ್ನ ಬ್ಯುಸಿನೆಸ್ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ಮೂರು ವಿಷಯಗಳಿಗೂ ಸಮರ್ಪಕವಾದ ಉತ್ತರ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿಯೂ ವಿಚಾರಣೆಗೆ ಸಹಕರಿಸುವುದಾಗಿ ತಿಳಿಸಿದ್ದೇನೆ ಎಂದು ತಿಳಿಸಿದರು.

ನನ್ನ ಆಸ್ತಿಗೆ ಸಂಬಂಧಿಸಿದ ಕೆಲವು ದಾಖಲೆಗಳು ಹಾಗೂ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಡಿ ಅಧಿಕಾರಿಗಳು ತೆಗೆದುಕೊಂಡು ಹೋಗಿದ್ದಾರೆ. ನನ್ನ ತಮ್ಮನ ಮಗಳ ಮದುವೆ ಮಾರ್ಚ್ ಕೊನೆಯ ವಾರದಲ್ಲಿ ನಿಗದಿಯಾಗಿದೆ. ಮದುವೆಗೆ ಬಟ್ಟೆ ತರಲು ಇಟ್ಟಿದ್ದ 16 ಲಕ್ಷ ಹಣವನ್ನು ತೆಗದುಕೊಂಡು ಹೋಗಿದ್ದಾರೆ. ನಾಳೆ ಬಟ್ಟೆ ತೆಗೆಯಲು ಹೋಗಬೇಕು ಅಂತ ರಿಕ್ವೆಸ್ಟ್ ಮಾಡಿದೆ. ಆದರೆ, ಕಾನೂನಿನಲ್ಲಿ ಅವಕಾಶ ಇಲ್ಲ ಅಂತ ಹಣವನ್ನು ತೆಗದುಕೊಂಡು ಹೋಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ನೀಡಿ ಹಣವನ್ನು ವಾಪಸ್ ತರುವೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಬರಬೇಕೆಂದು ಹೇಳಿದ್ದಾರೆ. ಅದಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದೇನೆ. ನಾನು ಯಾವುದೇ ತಪ್ಪು ಮಾಡಿಲ್ಲ. ಕಾಂಗ್ರೆಸ್ ನಾಯಕರ ಮೇಲೆ ದಾಳಿ ಮಾಡಿಸುತ್ತಿದ್ದಾರೆ. ಈಗ ಈ ಬಗ್ಗೆ ಯಾವುದೇ ಮಾತಾಡುವುದಿಲ್ಲ. ಇಡಿ ದಾಳಿಯಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ನೋವಾಗಿದೆ ಎಂದರು.

ಇತ್ತೀಚೆಗೆ ಕೋಮುಲ್‌ನ ನೇಮಕಾತಿ ವಿಚಾರದಲ್ಲಿ ಸಾಕಷ್ಟು ಅವ್ಯವಹಾರದ ಸದ್ದು ಮಾಡಿತ್ತು. ನೇಮಕಾತಿ ವಿಚಾರದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರುವ ಅರೋಪ‌ ಹಿನ್ನೆಲೆಯಲ್ಲಿ ಮಾಲೂರು ತಾಲೂಕಿನ ಕೊಮ್ಮನಹಳ್ಳಿಯಲ್ಲಿರುವ ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ಸೋಮವಾರ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಕೋಲಾರ ತಾಲೂಕಿನ ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್ ಕಚೇರಿಯಲ್ಲೂ ಸಹ ದಾಖಲೆಗಳ ಪರಿಶೀಲನೆ ಕೈಗೊಂಡಿದ್ದರು. ಕೊಮ್ಮನಹಳ್ಳಿ ನಂಜುಂಡೇಶ್ವರ ಸ್ಟೋನ್ ಕ್ರಷರ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಶಾಸಕ ನಂಜೇಗೌಡ ಅವರ ಆಪ್ತ ಸಹಾಯಕ ಹರೀಶ್ ಮನೆ, ಎಂಡಿ ಗೋಪಾಲ್ ಮೂರ್ತಿ ಮನೆ, ಕೋಮುಲ್ ಅಡ್ಮಿನ್ ಮ್ಯಾನೇಜರ್ ನಾಗೇಶ್ ಅವರ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com