ಕೆಆರ್‌ಎಸ್ ಜಲಾಶಯ ಕಾಮಗಾರಿ ಪರಿಶೀಲಿಸಿದ ಕೇಂದ್ರದ ನಿಯೋಗ

ಕೃಷ್ಣರಾಜಸಾಗರ ಜಲಾಶಯದಲ್ಲಿ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿ ಬಗ್ಗೆ ತಿಳಿಯಲು ಕೇಂದ್ರದ ಸಂಸದೀಯ ಸ್ಥಾಯಿ ಸಮಿತಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೃಷ್ಣರಾಜಸಾಗರ ಜಲಾಶಯದಲ್ಲಿ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿ ಬಗ್ಗೆ ತಿಳಿಯಲು ಕೇಂದ್ರದ ಸಂಸದೀಯ ಸ್ಥಾಯಿ ಸಮಿತಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.

 ತಂಡದ ಅಧ್ಯಕ್ಷ ಪ್ರಭಾತ್‌ಬಾಯ್ ಸವಬಾಯಿ ಪಟೇಲ್ ನೇತೃತ್ವದಲ್ಲಿ ಆಗಮಿಸಿದ ಸದಸ್ಯರು, ಕಾಮಗಾರಿ ನಡೆಯುತ್ತಿರುವ ಅಣೆಕಟ್ಟೆಯ ವಿವಿಧ ಭಾಗಗಳಿಗೆ ತೆರಳಿ ವೀಕ್ಷಣೆ ಮಾಡಿತು. ಮಾತ್ರವಲ್ಲದೆ ಕಾಮಗಾರಿ ಕುರಿತು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಂದ ಮಾಹಿತಿ ಪಡೆಯಿತು.

ಬಳಿಕ ಆಯೋಜಿಸಿದ್ದ ಸಭೆಯಲ್ಲಿ ಅಣೆಕಟ್ಟೆಯ ಹಿಂದಿನ ಸ್ಥಿತಿ ಹಾಗೂ ಗೇಟುಗಳ ಬಗ್ಗೆ ಮಾಹಿತಿಯನ್ನು ವಿಡಿಯೋ ಮೂಲಕ ಸದಸ್ಯರು ವೀಕ್ಷಣೆ ಮಾಡಿದರು. ಅದೇ ರೀತಿ ಪ್ರಸ್ತುತ ಸ್ಥಿತಿಯ ಬಗ್ಗೆಯೂ ತಿಳಿದುಕೊಂಡರು.

ಇದೇ ವೇಳೆ ಜೆಡಿಎಸ್ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹಾಗೂ ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ಪ್ರಸ್ತುತ ಎದುರಾಗಿರುವ ನೀರಿನ ಅಭಾವದ ಬಗ್ಗೆ ತಂಡದ ಸದಸ್ಯರಿಗೆ ತಿಳಿಸಿ ಮನವಿ ಸಲ್ಲಿಸಿದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಭಾತ್‌ಬಾಯ್ ಸವಬಾಯಿ ಪಟೇಲ್, ಮೈಸೂರಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಂದಿದ್ದೇವೆ. ಕೆಆರ್‌ಎಸ್‌ನಲ್ಲೂ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ್ದೇವೆ. ಡ್ರೀಪ್ ಯೋಜನೆಯಡಿ ನಡೆಯುತ್ತಿರುವ ಅಣೆಕಟ್ಟು ಮತ್ತು ಗೇಟ್‌ಗಳ ಕಾಮಗಾರಿಯನ್ನು ಪರಿಶೀಲಿಸಲಾಗಿದ್ದು, ಗುಣಮಟ್ಟದಿಂದ ಕೂಡಿದೆ. ಡ್ಯಾಂನ ನೀರಿನ ಮಟ್ಟ ಕೂಡ ಕುಸಿದೆ. ಕಾಮಗಾರಿ ಮತ್ತು ಅಣೆಕಟ್ಟೆಯ ವಾಸ್ತವ ಸ್ಥಿತಿ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಲಾಗುವುದು. ಮಾಜಿ ಸಂಸದ ಸಿ.ಎಸ್.ಪುಟ್ಟರಾಜು ನೀರಿನ ಅಭಾವದ ಬಗ್ಗೆ ತಿಳಿಸಿ ಮನವಿ ಮಾಡಿದ್ದಾರೆ. ಅದನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಹೇಳಿದರು.

ಸಿ.ಎಸ್.ಪುಟ್ಟರಾಜು ಮಾತನಾಡಿ, ಕೇಂದ್ರದ ನಿಯೋಗಕ್ಕೆ ಡ್ಯಾಂನ ವಾಸ್ತವ ಸ್ಥಿತಿ ಹಾಗೂ ನೀರಿನ ಲಭ್ಯತೆ ಕುರಿತು ಮಾಹಿತಿ ನೀಡಲಾಗಿದೆ. ಮೇಕೆದಾಟು ಯೋಜನೆಗೆ ಅನುಮತಿ ನೀಡುವುದು ಸೇರಿದಂತೆ ರಾಜ್ಯದ ಪರ ವರದಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ನಿಯೋಗ ಕಳುಹಿಸಿಕೊಟ್ಟಿದೆ. ಅವರ ಸೂಚನೆ ಮೇರೆಗೆ ನಾವು ವಾಸ್ತವ ಸ್ಥಿತಿಯ ಮಾಹಿತಿ ಕೊಟ್ಟಿದ್ದೇವೆ. ಈ ನಿಯೋಗ ರಾಜ್ಯದ ಪರ ವರದಿ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com