ಸಾಲ ಪಡೆದು 439.7 ಕೋಟಿ ರೂಪಾಯಿ ವಂಚನೆ: ಎಫ್ಐಆರ್ ರದ್ದು ಕೋರಿ 'ಹೈ' ಮೆಟ್ಟಿಲೇರಿದ ರಮೇಶ್ ಜಾರಕಿಹೊಳಿ

ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಪಡೆದಿರುವ ಸಾಲ ಮತ್ತು ಬಡ್ಡಿಯ ಹಣ ಸೇರಿ ಭರ್ತಿ ರೂ.439 ಕೋಟಿ ರೂಪಾಯಿ ಪಾವತಿಸದೇ ವಂಚಿಸಿರುವ ಆರೋಪದ ಮೇಲೆ ತಮ್ಮ ವಿರುದ್ದ ದಾಖಲಾಗಿರುವ ದೂರು ಮತ್ತು ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ

ಬೆಂಗಳೂರು: ಸಕ್ಕರೆ ಕಾರ್ಖಾನೆಯ ಅಭಿವೃದ್ಧಿಗಾಗಿ ಪಡೆದಿರುವ ಸಾಲ ಮತ್ತು ಬಡ್ಡಿಯ ಹಣ ಸೇರಿ ಭರ್ತಿ ರೂ.439 ಕೋಟಿ ರೂಪಾಯಿ ಪಾವತಿಸದೇ ವಂಚಿಸಿರುವ ಆರೋಪದ ಮೇಲೆ ತಮ್ಮ ವಿರುದ್ದ ದಾಖಲಾಗಿರುವ ದೂರು ಮತ್ತು ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಲಿಮಿಟೆಡ್‌ಗೆ ರೂ.439 ಕೋಟಿ ಸಾಲ ಪಾವತಿಸದೇ ವಂಚಿಸಿರುವ ಆರೋಪಕ್ಕೆ ಗುರಿಯಾಗಿರುವ ಸೌಭಾಗ್ಯಲಕ್ಷ್ಮಿ ಶುಗರ್ಸ್‌ ಲಿಮಿಟೆಡ್‌ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಮೇಶ್‌ ಜಾರಕಿಹೊಳಿ ಹಾಗೂ ಮತ್ತಿಬ್ಬರು ನಿರ್ದೇಶಕರಾಗಿದ್ದ ವಸಂತ್‌ ಪಾಟೀಲ್‌ ಮತ್ತು ಶಂಕರ್‌ ಪವಾಡೆ ಅವರ ಪರ ವಕೀಲರು ಶುಕ್ರವಾರ ನ್ಯಾಯಮೂರ್ತಿ ಕೃಷ್ಣ ಎಸ್.‌ ದೀಕ್ಷಿತ್‌ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಪ್ರಕರಣ ಉಲ್ಲೇಖಿಸಿದರು. ಆದರೆ, ನ್ಯಾಯಮೂರ್ತಿಗಳು ಮುಂದಿನ ವಾರ ವಿಚಾರಣೆಗೆ ಪರಿಗಣಿಸುವುದಾಗಿ ಹೇಳಿದರು.

ಬೆಳಗಾವಿಯ ಗೋಕಾಕದಲ್ಲಿರುವ ಸೌಭಾಗ್ಯಲಕ್ಷ್ಮಿ ಶುಗರ್‌ ಲಿಮಿಟೆಡ್‌ನಲ್ಲಿ ಯಂತ್ರೋಪಕರಣ ಅಳವಡಿಕೆ, ವಿಸ್ತರಣೆ ಮತ್ತು ನಿರ್ವಹಣೆಗಾಗಿ ಅರ್ಜಿದಾರ/ಆರೋಪಿಗಳು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಲಿಮಿಟೆಡ್‌ ಮತ್ತು ಅದರ ಸಮೂಹದ ಬ್ಯಾಂಕ್‌ಗಳಲ್ಲಿ ಅವಧಿ ಸಾಲ, ದುಡಿಯುವ ಬಂಡವಾಳದ ರೂಪದಲ್ಲಿ 12.07.2013 ರಿಂದ 31.03.2017ರ ಅವಧಿಯಲ್ಲಿ ರೂ.232.88 ಕೋಟಿ ಸಾಲ ಪಡೆದಿದ್ದರು. ಇದು ರೂ.439.7 ಕೋಟಿಗೆ ಏರಿಕೆಯಾಗಿದ್ದರೂ ಅದನ್ನು ಪಾವತಿಸಿರಲಿಲ್ಲ.

ಸಾಲ ಪಡೆಯುವ ಸಂದರ್ಭದಲ್ಲಿ ಶುಗರ್‌ ಕಂಪೆನಿಯಲ್ಲಿ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ವಸಂತ್‌ ಮತ್ತು ಶಂಕರ್‌ ಅವರು ನಿರ್ದೇಶಕರಾಗಿದ್ದರು. ಸಾಲ ಇರುವ ಸಂದರ್ಭದಲ್ಲಿ ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂಬ ಷರತ್ತು ವಿಧಿಸಲಾಗಿತ್ತು. ಆದರೆ, ಆರೋಪಿಗಳು/ಅರ್ಜಿದಾರರು ಕಂಪೆನಿಯಲ್ಲಿನ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದು, ಸಂಬಂಧಪಡದ ವ್ಯಕ್ತಿಗಳನ್ನು ಆ ಹುದ್ದೆಗಳಿಗೆ ನೇಮಿಸಲಾಗಿದೆ. ಈ ವಿಚಾರವನ್ನು ತಮ್ಮ ಗಮನಕ್ಕೆ ತಂದಿಲ್ಲ ಎಂದು ಕರ್ನಾಟಕ ರಾಜ್ಯ ಸಹಕಾರ ಅಪೆಕ್ಸ್‌ ಬ್ಯಾಂಕ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕರು ಜನವರಿ 5ರಂದು ನೀಡಿದ ದೂರಿನ ಅನ್ವಯ ವಿ ವಿ ಪುರಂ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 406, 420 & 34ರ ಅಡಿ ಪ್ರಕರಣ ದಾಖಲಾಗಿದೆ.

ಅರ್ಜಿದಾರರ ವಾದವೇನು?
ಆಡಳಿತದಲ್ಲಿ ವ್ಯತ್ಯಾಸ ಮತ್ತು ಕಬ್ಬು ಬೆಳೆಗಾರಿಗೆ ನೆರವಾಗುವ ನಿಟ್ಟಿನಲ್ಲಿ 2017 ರಿಂದ 2022ರ ಅವಧಿಯಲ್ಲಿ ಅರ್ಜಿದಾರರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಶುಗರ್‌ ಲಿಮಿಟೆಡ್‌ಗೆ ನಿರ್ದೇಶಕರನ್ನು ಬದಲಿಸುವುದನ್ನು ಸುರಕ್ಷಿತ ಸಾಲದಾತನಾದ (ಸೆಕ್ಯೂರ್ಡ್‌ ಕ್ರೆಡಿಟರ್‌) ಕರ್ನಾಟಕ ಅಪೆಕ್ಸ್‌ ಬ್ಯಾಂಕ್‌ ಅನುಮತಿ ಪಡೆದು ಮಾಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ತುರ್ತಿನ ಹಿನ್ನೆಲೆಯಲ್ಲಿ ಅರ್ಜಿದಾರರು ತಮ್ಮ ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಸುರಕ್ಷಿತ ಸಾಲದಾತ ಬ್ಯಾಂಕ್‌ ಅರಿವಿಗೆ ತಂದ ಬಳಿಕ ಅರ್ಜಿದಾರರ ರಾಜೀನಾಮೆ ಒಪ್ಪಿಕೊಳ್ಳಲಾಗಿದೆ. ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದ್ದುದು ಬ್ಯಾಂಕ್‌ಗೂ ತಿಳಿದಿತ್ತು ಎಂಬುದು ಅರ್ಜಿದಾರರ ವಾದವಾಗಿದೆ.

ಶುಗರ್‌ ಕಂಪೆನಿ ನಷ್ಟಕ್ಕೆ ಸಿಲುಕಿದ್ದು, ಬ್ಯಾಂಕ್‌ ಸಾಲ ವಸೂಲಾತಿ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ಪ್ರಕ್ರಿಯೆ ಆರಂಭಿಸದಂತೆ ಸುರಕ್ಷಿತ ಸಾಲದಾತ ಬ್ಯಾಂಕ್‌ಗೆ ಎನ್‌ಸಿಎಲ್‌ಟಿ ಆದೇಶಿಸಿತ್ತು. ಇದರ ಆಧಾರದಲ್ಲಿ ದೂರುದಾರ ಬ್ಯಾಂಕ್‌ ಅನುಮತಿ ಪಡೆಯದೇ ನೂತನ ನಿರ್ದೇಶಕರನ್ನು ನೇಮಕ ಮಾಡಲಾಗಿದೆ. ಅದಾಗ್ಯೂ, ಒಪ್ಪಿಗೆ ಉಲ್ಲಂಘಿಸಲಾಗಿದೆ ಎಂದು ತಮ್ಮ ವಿರುದ್ಧ ವಂಚನೆ ಮತ್ತು ಪಿತೂರಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

ಕರಾರು ಉಲ್ಲಂಘಿಸಿದ ಮಾತ್ರಕ್ಕೆ ಕ್ರಿಮಿನಲ್‌ ಪ್ರಕ್ರಿಯೆ ಆರಂಭಿಸಲಾಗದು, ಸಾಲ ಪಡೆದವರನ್ನು (ಸೌಭಾಗ್ಯಲಕ್ಷ್ಮಿ ಶುಗರ್‌ ಲಿಮಿಟೆಡ್‌) ಪಕ್ಷಕಾರರನ್ನಾಗಿ ಮಾಡದೇ ಕ್ರಿಮಿನಲ್‌ ಪ್ರಕ್ರಿಯೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದೆ ಎಂಬುದನ್ನು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆ. ಹೀಗಾಗಿ, ಇಡೀ ಕ್ರಿಮಿನಲ್‌ ಪ್ರಕ್ರಿಯೆ ವಜಾ ಮಾಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com