2,200 ಪೊಲೀಸರಿಗೆ ಸಿಪಿಆರ್ ತರಬೇತಿ: ವಿಶ್ವ ದಾಖಲೆ ನಿರ್ಮಾಣ

ಏಕಕಾಲದಲ್ಲಿ 2,200 ಪೊಲೀಸರಿಗೆ ಸಿಪಿಆರ್ ತರಬೇತಿ ನೀಡುವ ಮೂಲಕ ಸರ್ಜಿಕಲ್‌ ಸೊಸೈಟಿ ಆಫ್ ಬೆಂಗಳೂರು ಸಂಸ್ಥೆ ವಿಶ್ವ ದಾಖಲೆ ನಿರ್ಮಾಣ ಮಾಡಿದೆ.
ಪೊಲೀಸರಿಗೆ ಸಿಪಿಆರ್ ತರಬೇತಿ
ಪೊಲೀಸರಿಗೆ ಸಿಪಿಆರ್ ತರಬೇತಿ

ಬೆಂಗಳೂರು: ಏಕಕಾಲದಲ್ಲಿ 2,200 ಪೊಲೀಸರಿಗೆ ಸಿಪಿಆರ್ ತರಬೇತಿ ನೀಡುವ ಮೂಲಕ ಸರ್ಜಿಕಲ್‌ ಸೊಸೈಟಿ ಆಫ್ ಬೆಂಗಳೂರು ಸಂಸ್ಥೆ ವಿಶ್ವ ದಾಖಲೆ ನಿರ್ಮಾಣ ಮಾಡಿದೆ.

ಹೌದು.. ಸರ್ಜಿಕಲ್‌ ಸೊಸೈಟಿ ಆಫ್ ಬೆಂಗಳೂರು ಸಂಸ್ಥೆ ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ 2,200ಕ್ಕೂ ಅಧಿಕ ಪೊಲೀಸರಿಗೆ ಹೃದಯ ಮತ್ತು ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ತರಬೇತಿ (ಸಿಪಿಆರ್) ಹಾಗೂ ಪ್ರಥಮ ಚಿಕಿತ್ಸೆ ಬಗ್ಗೆ ತರಬೇತಿ ನೀಡಲಾಯಿತು. ಆ ಮೂಲಕ ಒಂದೇ ಸ್ಥಳದಲ್ಲಿ ಅತೀ ಹೆಚ್ಚು ಮಂದಿಗೆ ತರಬೇತಿ ನೀಡಿದ ಸಂಸ್ಥೆಯ ಈ ಕಾರ್ಯಕ್ಕೆ ವರ್ಲ್ಡ್‌ ರೆಕಾರ್ಡ್‌ ಆಫ್‌ ಲಂಡನ್‌ ಸಂಸ್ಥೆಯು ‘ವಿಶ್ವ ದಾಖಲೆ’ಯ ಪ್ರಮಾಣ ಪತ್ರ ನೀಡಿತು. 

ಸಂಸ್ಥೆ ಹಮ್ಮಿಕೊಂಡಿದ್ದ ಈ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ‘ಈ ಪ್ರಥಮ ಚಿಕಿತ್ಸೆಯ ತರಬೇತಿಯನ್ನು ಪ್ರತಿಯೊಬ್ಬರೂ ಪಡೆಯಬೇಕು. ಇದರಿಂದ ತುರ್ತು ಸಂದರ್ಭದಲ್ಲಿ ವ್ಯಕ್ತಿಯ ಜೀವ ಉಳಿಸಲು ಸಾಧ್ಯ. ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಈ ಬಗ್ಗೆ ತರಬೇತಿ ನೀಡುವ ಅಗತ್ಯವಿದೆ. ಸಾರ್ವಜನಿಕ ಜೀವನದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಪೊಲೀಸರು ಪ್ರತಿನಿತ್ಯ ವಿವಿಧ ರೀತಿಯ ಘಟನೆಗಳನ್ನು ನೋಡುತ್ತಾರೆ. ಆದ್ದರಿಂದ ಪ್ರಥಮ ಚಿಕಿತ್ಸೆ ಬಗ್ಗೆ ಅವರಿಗೆ ತರಬೇತಿ ನೀಡುವುದು ಅತ್ಯಗತ್ಯ. ಬಸ್ ನಿಲ್ದಾಣ ಸೇರಿ ವಿವಿಧ ಸಾರ್ವಜನಿಕ ಸ್ಥಳದಲ್ಲಿ ಹೃದಯಾಘಾತ ಸಂಭವಿಸಿದಲ್ಲಿ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಾಗುತ್ತದೆ’ ಎಂದರು.

ಬೆಂಗಳೂರು ನಗರ ಪೊಲೀಸ್‌ ಕಮಿಷನರ್ ಬಿ. ದಯಾನಂದ್ ಅವರು ಮಾತನಾಡಿ, ‘ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ತರಬೇತಿಯು ಜೀವ ಉಳಿಸಲು ಸಹಕಾರಿಯಾಗಲಿದೆ. ನಮ್ಮ ಸಿಬ್ಬಂದಿಯನ್ನು ರಕ್ಷಿಸಲು ಸಹ ಇದರಿಂದ ಸಾಧ್ಯವಾಗಲಿದೆ. ಸಾಮಾನ್ಯ ನಾಗರಿಕರ ರಕ್ಷಣೆಗೂ ಇದು ಪ್ರಯೋಜನಕಾರಿ’ ಎಂದು ಹೇಳಿದರು.

ಸರ್ಜಿಕಲ್‌ ಸೊಸೈಟಿ ಆಫ್‌ ಬೆಂಗಳೂರು ಸಂಸ್ಥೆ ಅಧ್ಯಕ್ಷ ಡಾ. ರಾಜಶೇಖರ್‌ ಸಿ. ಜಕ್ಕಾ ಮಾತನಾಡಿ, ‘ಹಠಾತ್ ಹೃದಯಾಘಾತದ ಸಂದರ್ಭದಲ್ಲಿ ವ್ಯಕ್ತಿಯನ್ನು ಪ್ರಾಣಾ‍ಪಾಯದಿಂದ ಪಾರು ಮಾಡಲು ಸಿಪಿಆರ್ ಸಹಾಯಕ. ನಮ್ಮ ಸಂಸ್ಥೆಯ 50ನೇ ವರ್ಷಾಚರಣೆ ಪ್ರಯುಕ್ತ ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಸರ್ಜಿಕಲ್ ಸೊಸೈಟಿ ಆಫ್ ಬೆಂಗಳೂರು ಘಟಕವು ತನ್ನ 50 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ವರ್ಷದಲ್ಲಿ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com