ಗದಗ: ಬರಗಾಲದ ನಡುವೆ ವೀಳ್ಯದೆಲೆ ಕೃಷಿಯಲ್ಲಿ ಉತ್ತಮ ಆದಾಯ ಕಂಡುಕೊಳ್ಳುತ್ತಿರುವ ರೈತರು!

ಬರಗಾಲದಿಂದ ತತ್ತರಿಸಿರುವ ಗದಗದ ರೈತರಿಗೆ ವೀಳ್ಯದೆಲೆ ಕೃಷಿ ವರದಾನವಾಗಿದೆ. ಗದಗದ ಗೋಗೇರಿ ಗ್ರಾಮದ ಕೆಲ ರೈತರು ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ವೀಳ್ಯದೆಲೆ ಕೃಷಿಯಲ್ಲಿ ಮಹಿಳಾ ಕಾರ್ಮಿಕರು
ವೀಳ್ಯದೆಲೆ ಕೃಷಿಯಲ್ಲಿ ಮಹಿಳಾ ಕಾರ್ಮಿಕರು

ಗದಗ: ಬರಗಾಲದಿಂದ ತತ್ತರಿಸಿರುವ ಗದಗದ ರೈತರಿಗೆ ವೀಳ್ಯದೆಲೆ ಕೃಷಿ ವರದಾನವಾಗಿದೆ. ಗದಗದ ಗೋಗೇರಿ ಗ್ರಾಮದ ಕೆಲ ರೈತರು ವೀಳ್ಯದೆಲೆ ಕೃಷಿ ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ಈ ಹಿಂದೆ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೆಳೆ ಹಾನಿಯಾಗುವವರೆಗೂ ಜೋಳ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದ ಮಲ್ಲಿಕಾರ್ಜುನ ಬೋಸಲೆ ಎಂಬ ರೈತ ಇದೀಗ ವೀಳದ್ಯೆಲೆ ಕೃಷಿಯಿಂದ ವರ್ಷಕ್ಕೆ 10 ಲಕ್ಷ ರೂ. ಆದಾಯ ಪಡೆಯುತ್ತಿದ್ದಾರೆ.

ಗೋಗೇರಿಯ ಸುಮಾರು 10 ರೈತರು ತೋಟಗಾರಿಕೆ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿದಾಗ ವೀಳ್ಯದೆಲೆ ಕೃಷಿ  ಪರ್ಯಾಯ ಆಯ್ಕೆಯಾಗಿ ಹೊರಹೊಮ್ಮಿತು. ಇಲಾಖೆಯು ಅವರಿಗೆ ಮನ್ರೇಗಾ ಯೋಜನೆಯಡಿ ವೀಳ್ಯದೆಲೆ ಸಸಿಗಳನ್ನು ನೀಡಿತು. ನಂತರ ಈ ರೈತರು ಕ್ರಿಯಾ ಯೋಜನೆಯಲ್ಲಿ ಹೆಸರು ನೋಂದಾಯಿಸಿ ತಮ್ಮ ಜಮೀನಿನಲ್ಲಿ ವೀಳ್ಯದೆಲೆ ಬೆಳೆಯಲು ಆರಂಭಿಸಿದರು. ಅವರು ದಿನಗೂಲಿಯನ್ನೂ ಸಹ ಪಡೆಯುತ್ತಿದ್ದರು.

ಹಳ್ಳಿಗರು ಕೆಲಸಕ್ಕಾಗಿ ನಗರಗಳಿಗೆ ವಲಸೆ ಹೋಗುವುದನ್ನು ತಡೆಯಲು ಗ್ರಾಮ ಪಂಚಾಯತ್‌ಗಳು ಮನ್ರೇಗಾ ಯೋಜನೆಯಡಿಯಲ್ಲಿ ಮಾನವ ದಿನಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಬರ ಪರಿಸ್ಥಿತಿಯಲ್ಲಿ ಹೆಚ್ಚಿನ ದೈನಂದಿನ ಕೂಲಿಯನ್ನು ಖಾತ್ರಿಪಡಿಸಿದ್ದಾರೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳು ಸಹ ಮನ್ರೇಗಾ ಅಡಿಯಲ್ಲಿ ಮಾನವ ದಿನಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ದೈನಂದಿನ ಕೂಲಿ ಕಾರ್ಮಿಕರು ಮತ್ತು ರೈತರಿಗೆ ಸಹಾಯ ಮಾಡಲು ಮುಂದೆ ಬಂದಿವೆ.

ವೀಳ್ಯದೆಲೆ ಸಸಿಗಳನ್ನು ಪಡೆದು ಅಧಿಕಾರಿಗಳ ಸೂಚನೆಯನ್ನು ಪಾಲಿಸಿದ ರೈತರಲ್ಲಿ ಬೋಸಲೆ ಒಬ್ಬರು. ಕೊಯ್ಲು ಅವರಿಗೆ ಉತ್ತಮ ಆದಾಯವನ್ನು ತಂದುಕೊಟ್ಟಿತು. ಈ ಬಾರಿ ಇಡೀ ಗದಗ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಬರದಿಂದ ತತ್ತರಿಸಿದ್ದು, ಹಲವು ರೈತರು ರಬಿ ಹಾಗೂ ಖಾರಿಫ್ ಎರಡೂ ಬೆಳೆಗಳನ್ನು ಕಳೆದುಕೊಂಡಿದ್ದಾರೆ. ಇಲಾಖೆಯಲ್ಲಿ ಹೆಸರು ನೋಂದಾಯಿಸಿದ ಬೋಸಲೆ ತಮ್ಮ ಜಮೀನಿನಲ್ಲಿ ವೀಳ್ಯದೆಲೆ ಬೆಳೆದು ವಾರ್ಷಿಕ 10 ಲಕ್ಷ ರೂ. ಆದಾಯ ಪಡೆದಿದ್ದಾರೆ. ಇವರ ಯಶಸ್ಸಿನಿಂದ ಉತ್ತೇಜಿತರಾಗಿರುವ ಅನೇಕ ರೈತರು ಇದೀಗ ಗೋಗೇರಿ ಗ್ರಾಮದ ಬೀಟೆ ತೋಟಗಳಿಗೆ ಭೇಟಿ ನೀಡುತ್ತಿದ್ದಾರೆ.

ಗೋಗೇರಿಯ ಮತ್ತೊಬ್ಬ ರೈತ ಶಾಂತಾ ಬೋಸಲೆ ವೀಳ್ಯದೆಲೆ ಬೆಳೆದು ತಿಂಗಳಿಗೆ 80-90 ಸಾವಿರ ರೂ. ಪಡೆಯುತ್ತಿದ್ದಾರೆ. ಶಾಂತಾ ಮಾತನಾಡಿ, ಹಿಂದೆ ಶೇಂಗಾ, ಜೋಳ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದೆ. ಅಧಿಕಾರಿಗಳು ವೀಳ್ಯದೆಲೆ ಕೃಷಿ ಮಾಡುವಂತೆ  ಹೇಳಿದರು. ಈಗ ವಾರಕ್ಕೊಮ್ಮೆ ಎಲೆಗಳನ್ನು ಕತ್ತರಿಸಿ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತೇವೆ. ಇದು ನಮಗೆ ಉತ್ತಮ ಪರ್ಯಾಯ ಆದಾಯದ ಮೂಲವಾಗಿದೆ ಎಂದು ಸಾಬೀತಾಗಿದೆ. ಸ್ಥಿರ ಆದಾಯ ಪಡೆಯಲು ಇತರ ಬೆಳೆಗಳೊಂದಿಗೆ ವೀಳ್ಯದೆಲೆ ಕೃಷಿ ಬೆಳೆಯುವಂತೆ ಇತರ ರೈತರಿಗೂ ಹೇಳುತ್ತಿದ್ದೇವೆ ಎಂದು ಅವರು ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com