ಟ್ಯೂಷನ್ ಹೋಗಿ ನಾಪತ್ತೆಯಾಗಿದ್ದ ಬಾಲಕ ಪರಿಣವ್: ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪತ್ತೆ

ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ 12 ವರ್ಷದ ಬಾಲಕ ಪರಿಣವ್ ಪ್ರಕರಣ ಕೊನೆಗೂ ಸುಖಾಂತ್ಯವಾಗಿದೆ. ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು  ಬಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದಾರೆ. 
ನಾಪತ್ತೆಯಾಗಿದ್ದ ಬಾಲಕ ಪರಿಣವ್ ಹೈದರಾಬಾದ್ ನಲ್ಲಿ ಪತ್ತೆಯಾಗಿರುವುದು
ನಾಪತ್ತೆಯಾಗಿದ್ದ ಬಾಲಕ ಪರಿಣವ್ ಹೈದರಾಬಾದ್ ನಲ್ಲಿ ಪತ್ತೆಯಾಗಿರುವುದು

ಬೆಂಗಳೂರು: ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೆಂಗಳೂರು ಮೂಲದ 12 ವರ್ಷದ ಬಾಲಕ ಪರಿಣವ್ ಪ್ರಕರಣ ಕೊನೆಗೂ ಸುಖಾಂತ್ಯವಾಗಿದೆ. ಹೈದರಾಬಾದ್ ನ ನಾಂಪಲ್ಲಿ ಮೆಟ್ರೋ ನಿಲ್ದಾಣದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದು  ಬಾಲಕ ಸುರಕ್ಷಿತವಾಗಿದ್ದಾನೆ ಎಂದು ತಿಳಿಸಿದ್ದಾರೆ. 

ಜನವರಿ 21ರ ಭಾನುವಾರ ವೈಟ್ ಫೀಲ್ಡ್ ನಲ್ಲಿ ಟ್ಯೂಷನ್ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಪರಿಣವ್ ನಾಪತ್ತೆಯಾಗಿದ್ದನು. ಮಾರತ್ತಹಳ್ಳಿ, ಯಮಲೂರು ಮತ್ತು ಮೆಜೆಸ್ಟಿಕ್ ನ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಆತನ ಚಲನವಲನಗಳು ಪತ್ತೆಯಾಗಿತ್ತು. ಹುಡುಗನ ಬಳಿ ಸ್ವಲ್ಪ ಹಣ ಮಾತ್ರ ಇತ್ತು, ಆದರೆ ಆತ ಹೈದರಾಬಾದ್ ನ್ನು ಹೇಗೆ ತಲುಪಿದನು ಎಂಬುದು ಇನ್ನೂ ತಿಳಿದಿಲ್ಲ. ಪೋಷಕರು ಹುಡುಗನೊಂದಿಗೆ ಮಾತನಾಡಿದ್ದು, ಅವನನ್ನು ಕರೆದುಕೊಂಡು ಬರಲು ಹೊರಟಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಬಾಲಕ ಪರಿಣವ್ ಅವರ ತಾಯಿ, ನಮ್ಮ ಮಗ ಹೈದರಾಬಾದ್‌ನ ನಾಂಪಲ್ಲಿ ಮೆಟ್ರೋ ನಿಲ್ದಾಣ ಬಳಿ ಪತ್ತೆಯಾಗಿದ್ದಾನೆ. ಆತ ಸುರಕ್ಷಿತವಾಗಿದ್ದಾನೆ. ಮಗನನ್ನು ಕರೆತರಲು ಕುಟುಂಬದವರು ಹೈದರಾಬಾದ್‌ಗೆ ಹೋಗಿದ್ದಾರೆ. ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ.

ಜನವರಿ 21ರ ಭಾನುವಾರ ಗುಂಜೂರಿನ ತಮ್ಮ ಮನೆಯಿಂದ ಬಾಲಕನನ್ನು ಪೋಷಕರು ಟ್ಯೂಷನ್‌ಗೆ ಬಿಟ್ಟು ಬಂದಿದ್ದರು. ಆದರೆ ಟ್ಯೂಷನ್ ಮುಗಿದ ಬಳಿಕ ಮಗನನ್ನು ಕರೆದುಕೊಂಡು ಬರುವುದು ಸ್ವಲ್ಪ ತಡವಾಗಿದ್ದು, ಸ್ಥಳಕ್ಕೆ ಬಂದು ನೋಡಿದಾಗ ಆತ ನಾಪತ್ತೆಯಾಗಿದ್ದ. ಹಳದಿ ಟೀ ಶರ್ಟ್ ಮತ್ತು ನೇವಿ ಬ್ಲೂ ಪ್ಯಾಂಟ್ ಧರಿಸಿದ್ದ ಬಾಲಕನ ಬಳಿ ಅಲೆನ್ ಎಂದು ಬರೆಯಲಾಗಿರುವ ಶಾಲಾ ಬ್ಯಾಗ್ ಇತ್ತು.

ನಾಪತ್ತೆಯಾಗಿದ್ದ ವಿದ್ಯಾರ್ಥಿಯ ತಂದೆ ಸುಕೇಶ್ ಅವರು ವೈಟ್‌ಫೀಲ್ಡ್ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದರು. ಭಾನುವಾರ ಮಧ್ಯಾಹ್ನ 2.30ಕ್ಕೆ ಕುಂದಲಹಳ್ಳಿ ಗೇಟ್ ಮತ್ತು ಮಾರತ್ತಹಳ್ಳಿ ಸೇತುವೆ ಸಮೀಪದ ಕಾವೇರಿ ಖಾಸಗಿ ಆಸ್ಪತ್ರೆ ಬಳಿ ಪ್ರಣವ್ ಕಾಣಿಸಿಕೊಂಡಿರುವುದು ಸಿಸಿಟಿವಿ ದೃಶ್ಯಗಳಿಂದಿ ಗೊತ್ತಾಗಿದೆ. ಸ್ವಲ್ಪ ಸಮಯದ ನಂತರ ಬಸ್ ಹತ್ತಿದ್ದಾನೆ. ಸಂಜೆ 4.30ಕ್ಕೆ ಮೆಜೆಸ್ಟಿಕ್‌ ಬಸ್ ನಿಲ್ದಾಣದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com