ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೇಂದ್ರದ ಮೂರು ಹೊಸ ಕಾನೂನುಗಳಿಗೆ ಕರ್ನಾಟಕ ಸರ್ಕಾರದ ವಿರೋಧ, ತಿದ್ದುಪಡಿಗೆ ಚಿಂತನೆ!

ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಬದಲಾವಣೆ ಮಾಡಿ ಹೊಸ ಕಾನೂನು ಜಾರಿಗೆ ತಂದಿದೆ.
Published on

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಹೊಸ ಕಾನೂನುಗಳನ್ನು ರಾಜ್ಯ ಸರ್ಕಾರ ವಿರೋಧಿಸಿದೆ. ಸುದ್ದಿಗೋಷ್ಠಿಯಲ್ಲಿಂದು ಈ ಕುರಿತು ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಎಚ್. ಕೆ. ಪಾಟೀಲ್, ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಅಧಿನಿಯಮ ಬದಲಾವಣೆ ಮಾಡಿ ಹೊಸ ಕಾನೂನು ಜಾರಿಗೆ ತಂದಿದೆ. ಯಾವ ಸರ್ಕಾರ ಕಾನೂನು ಮಾಡುತ್ತದೆ, ಅದನ್ನು ಅವರ ಅವಧಿಯಲ್ಲಿ ಜಾರಿ ಮಾಡುವ ನೈತಿಕ ಹಕ್ಕಿದೆ. ಆದರೆ, ಸರ್ಕಾರದ ಅವಧಿ ಮುಗಿದ ಮೇಲೆ ಜಾರಿ ಮಾಡುವುದು ಅನೈತಿಕ ಹಾಗೂ ರಾಜಕೀಯ ಅಸಂಬದ್ಧ ಕ್ರಮವಾಗಿದೆ ಎಂದರು.

ಈ ಮೂರು ತಾಯಿ ಕಾನೂನುಗಳು ಸಂವಿಧಾನದ ತಿದ್ದುಪಡಿ ಮಹತ್ವ ಇದಕ್ಕೆ ಕೊಡಲಾಗುತ್ತದೆ. ಈ ಕಾನೂನು ಜಾರಿಯ ಸಂದರ್ಭದಲ್ಲಿ ಎಲ್ಲಾ ಎಚ್ಚರಿಕೆ ಕೈಗೊಳ್ಳಬೇಕು. ಹಿಂದಿನ ಸರ್ಕಾರದ ಕ್ಯಾಬಿನೆಟ್ ನಲ್ಲಿ ಆದ ನಿರ್ಧಾರ ಇದೀಗ ಜಾರಿಗೊಳಿಸಿದ್ದು ಸರಿಯಲ್ಲ. ಅದನ್ನ ಆಗಲೇ ಜಾರಿ ಮಾಡುವ ಹಕ್ಕು ಅವರಿಗೆ ಇತ್ತು. ಈಗ ಹೊಸ ಸರ್ಕಾರ ಬಂದ ನಂತರ ಜಾರಿ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.

ಇನ್ನು 2023 ರಲ್ಲಿ ಅಮಿತ್ ಶಾ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದರು. ಈ ಕಾನೂನುಗಳ ಕುರಿತು ಪರಿಶೀಲನೆ, ಸಲಹೆ ಸೂಚನೆ ಕೇಳಿದ್ದರು. ಆಗ ಸಿಎ ಸಿದ್ದರಾಮಯ್ಯ ನಮಗೊಂದು ಪತ್ರ ಬರೆದು ಈ ಕಾನೂನುಗಳ ಕುರಿತು ತಜ್ಞರ ಸಮಿತಿ ರಚನೆ ಮಾಡಿ ವರದಿ ನೀಡಲು ಸೂಚಿಸಿದ್ದರು. ಹೀಗಾಗಿ ನಾವು ತಜ್ಞರ ಸಮಿತಿ ವರದಿ ಹಾಗೂ ನನ್ನ ಅಭಿಪ್ರಾಯ ತಿಳಿಸಿ ಸಿಎಂಗೆ ಪತ್ರ ಕಳಿಸಿದ್ದೆ.‌ ಇದನ್ನು ಉಲ್ಲೇಖಿಸಿ ಅಮಿತ್ ಶಾಗೆ ಸಿದ್ದರಾಮಯ್ಯ ಪತ್ರ ಬರೆದು, ವರದಿಯನ್ನು ನೀಡಿದ್ದರು. ನಾವು ಆ ಸುಧೀರ್ಘ ಪತ್ರದಲ್ಲಿ ಒಟ್ಟು 23 ಸಲಹೆಗಳನ್ನು ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ನಮ್ಮ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ನಮ್ಮ ಯಾವುದೇ ಅಭಿಪ್ರಾಯವನ್ನು ಅದರಲ್ಲಿ ಸೇರಿಸಿಲ್ಲ. ಈಗ ಮಂಡನೆ ಮಾಡಿದ ಮಸೂದೆಯನ್ನ ಯಥಾವತ್ತಾಗಿ ಜಾರಿ ಮಾಡಿದ್ದಾರೆ ಎಂದು ತಿಳಿಸಿದರು.

ಸಾಂದರ್ಭಿಕ ಚಿತ್ರ
ಹೊಸ ಕ್ರಿಮಿನಲ್ ಕಾನೂನುಗಳು ಇಂದು ಜಾರಿಗೆ: ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ನಿರೀಕ್ಷೆ

ಈ ಹೊಸ ಕಾನೂನಿನಲ್ಲಿ ಅನುಕೂಲಗಳಿಗಿಂತ ಅನಾನುಕೂಲಗಳೇ ಹೆಚ್ಚು ಇವೆ. ಜೊತೆಗೆ ಗೊಂದಲ ಮೂಡಿಸುವ ತಿದ್ದುಪಡಿಗಳು ಇವಾಗಿವೆ. ಜನಾಭಿಪ್ರಾಯ ನಿರ್ಲಕ್ಷ್ಯ ಮಾಡಿ, ವಕೀಲರ ಅಭಿಪ್ರಾಯ ನಿರ್ಲಕ್ಷ್ಯ ಮಾಡಿ ಕಾನೂನು ಮಾಡಿದ್ದಾರೆ. ಹೀಗಾಗಿ ಈ ಮೂರು ಕಾನೂನುಗಳನ್ನು ರಾಜ್ಯ ಸರ್ಕಾರ ವಿರೋಧ ಮಾಡುತ್ತದೆ. ಇದರ ಜೊತೆಗೆ ಈ ಕಾನೂನುಗಳನ್ನು ತಿದ್ದುಪಡಿ ಮಾಡಬೇಕಾಗಿದೆ ಎಂದು ಹೇಳಿದರು.

ಕಾನೂನು ತಿದ್ದುಪಡಿ ಮಾಡಬಹುದಾ? ಹೊಸ ಕಾನೂನು ತಿದ್ದುಪಡಿ ಮಾಡಬಹುದಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾನೂನುಗಳನ್ನು ತಿದ್ದುಪಡಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ. ಸಂವಿಧಾನ ಅನುಚ್ಛೇದ 7, 3 ನೇ ಪಟ್ಟಿಯ ಅಧಿಕಾರ ಬಳಸಿ ತಿದ್ದುಪಡಿ ಮಾಡಲು ಅವಕಾಶ ಇದೆ ಎಂದರು.

ಸರ್ಕಾರದಿಂದ ಯಾವುದಕ್ಕೆಲ್ಲ ತಿದ್ದುಪಡಿ ಮಾಡಬಹುದು ಎಂಬುದರ ಕುರಿತು ವಿವರಣೆ ನೀಡಿದ ಅವರು, ಸರ್ಕಾರದ ಕ್ರಮಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಮಾಡುವುದು ಈ ಕಾನೂನಿನ ಪ್ರಕಾರ ಅಪರಾಧವಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧ ಅಲ್ಲ . ಇದು ದುರ್ದೈವದ ಸಂಗತಿಯಾಗಿದೆ. ಸ್ವಾತಂತ್ರ್ಯ ಹೋರಾಟಕ್ಕೆ, ಹೋರಾಟಗಾರರನ್ನು ತಿರಸ್ಕಾರ ಮಾಡಲಾಗಿದೆ. ಈ ನಿಟ್ಟಿನಲ್ಲಿ ಉಪವಾಸ ಸತ್ಯಾಗ್ರಹ ಅಪರಾಧ ಎಂಬುವುದಕ್ಕೆ ತಿದ್ದುಪಡಿ ಮಾಡುತ್ತೇವೆ. ರಾಷ್ಟ್ರ ಪಿತ, ರಾಷ್ಟ್ರೀಯ ಲಾಂಚನ, ಬಾವುಟಕ್ಕೆ ಅಗೌರವ ತೋರಿಸಿದವದ ವಿರುದ್ಧ ಕ್ರಮಕ್ಕೆ ತಿದ್ದುಪಡಿ ಮಾಡಲು ಸೂಚಿಸಿದ್ದೆವು. ಆದರೆ ಅದಕ್ಕೆ ಕೇಂದ್ರ ಸರ್ಕಾರ ಒಪ್ಪಿಲ್ಲ. ಈ ನಿಟ್ಟಿನಲ್ಲಿ ತಿದ್ದುಪಡಿಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಾಂದರ್ಭಿಕ ಚಿತ್ರ
ಹೊಸ ಕ್ರಿಮಿನಲ್ ಕಾನೂನು ಅಡಿಯಲ್ಲಿ ಶಿಕ್ಷೆಯ ಬದಲಿಗೆ ನ್ಯಾಯ ಸಿಗುವುದು: ಗೃಹ ಸಚಿವ ಅಮಿತ್ ಶಾ

ಸಂಘಟಿತ ಅಪರಾಧ ಎಂದು ಆರೋಪಿಸಿ, ವ್ಯಕ್ತಿಗಳ ಮೇಲೆ ಮೊಕದ್ದಮೆ ಹೂಡಲು ತನಿಖಾ ಸಂಸ್ಥೆಗಳಿಗೆ ಏಕಪಕ್ಷೀಯ ಮತ್ತು ವಿವೇಚನಾಧಿಕಾರಗಳು ಹೊಸ ಕಾನೂನಿನಲ್ಲಿ ಅವಕಾಶ ಇದೆ. ರಾಷ್ಟ್ರೀಯ ಭಾವೈಕ್ಯತೆಗೆ ಧಕ್ಕೆ ತರುವ ಅಪರಾಧಗಳಿಗೆ 3 ವರ್ಷ ಜೈಲು ಹಾಗೂ ದಂಡಕ್ಕೆ ಅವಕಾಶ ಇದೆ. ಸೈಬರ್ ಅಪರಾಧ, ಹ್ಯಾಕಿಂಗ್, ಆರ್ಥಿಕ ಅಪರಾಧ, ಅಣ್ವಸ್ತ್ರ ಗೌಪ್ಯತೆ ಹಾಗೂ ತಂತ್ರಜ್ಞಾನ ಮೂಲಕ ವಿಧ್ವಂಸಕ ಕೃತ್ಯ ಎಸಗುವ ಅಪರಾಧಗಳಿಗೆ ಪ್ರತ್ಯೇಕ ಅಧ್ಯಾಯದ ಮೂಲಕ ಕ್ರಮಕ್ಕೆ ತಿದ್ದುಪಡಿ ಮಾಡಲಾಗುತ್ತದೆ. ಮೃತ ದೇಹದ ಮೇಲೆ ಅತ್ಯಾಚಾರವೆಸಗುವುದು ಅಕ್ಷ್ಮಮ್ಯ ಅಪರಾಧ ಇದರ ಅಪರಾಧಿಕರಣಗೊಳಿಸುವ ನಿಟ್ಟಿನಲ್ಲಿ ತಿದ್ದುಪಡಿ ಮಾಡುತ್ತೇವೆ ಎಂದರು.

ಹೊಸ ಕಾಯ್ದೆಯಡಿ ಪೊಲೀಸ್ ಕಸ್ಟಡಿ ಅವಧಿಗೆ 90 ದಿನಗಳವರೆಗೆ ಅವಕಾಶ ಇದೆ. ಇದು ಧೀರ್ಘಕಾಲದ ಅವಧಿಯಾಗುತ್ತದೆ. ಮೊದಲು 15 ದಿನ ಇತ್ತು. ಆದರೆ ಈಗ ಅದನ್ನು ಹೆಚ್ಚು ದಿನಗಳ ವರೆಗೆ ಮಾಡಿದ್ದಾರೆ ಇದನ್ನು ಕಡತಗೊಳಿಸಲು ತಿದ್ದುಪಡಿ ಮಾಡಬೇಕು. ಅಪರಾಧ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿ ಪಾಸ್ತಿ ಜಪ್ತಿ ಮಾಡಲು ಮೊದಲು ಕೋರ್ಟ್ ಅನುಮತಿ ಬೇಕಾಗಿತ್ತು. ಆದರೆ ಹೊಸ ಕಾನೂನಿನಲ್ಲಿ ಪೊಲೀಸರಿಗೆ ಅನುಮತಿ ನೀಡಲಾಗಿದೆ. ಇದನ್ನು ತಿದ್ದುಪಡಿ ಮಾಡಲಾಗುತ್ತದೆ ಎಂದರು.

ಹೊಸ ಕಾನೂನು ಜಾರಿ ಮಾಡ್ತೀವಿ: ಹೊಸ ಕಾನೂನು ಜಾರಿ ಮಾಡ್ತೀವಿ ಎಂಬ ಪೊಲೀಸ್ ಕಮಿಷನರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಎಚ್ ಕೆ ಪಾಟೀಲ್, ಸದ್ಯ ಈಗ ಹೊಸ ಕಾನೂನಿನ ಪ್ರಕಾರ ಎಫ್ ಐ ಆರ್ ಆಗುತ್ತಿವೆ. ತಿದ್ದುಪಡಿ ಆದ ಬಳಿಕ ಅದರಂತೆ ಪಾಲಿಸಬೇಕಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com