ಡೆಂಗ್ಯೂ ಕೇಸ್ ಏರಿಕೆ, 5 ಸಾವು; ಸಿಎಂ ವಿರುದ್ಧ 4 ಸಾವಿರ ಕೋಟಿ ರೂ ಭ್ರಷ್ಟಾಚಾರ ಆರೋಪ; ಬೆಳೆ ಮಾರಾಟದ ಹಣ ಸಿಗದೇ ರೈತರಿಂದ ಆತ್ಮಹತ್ಯೆ ಯತ್ನ; BBMP ಆಸ್ತಿ ತೆರಿಗೆ ಹೆಚ್ಚಳ ಸಾಧ್ಯತೆ; ಇಂದಿನ ಪ್ರಮುಖ ಸುದ್ದಿಗಳು 02-07-2024

File pic
ಸಂಗ್ರಹ ಚಿತ್ರonline desk

1. ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಳ; 5 ಸಾವು

ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದ್ದು, ಕಳೆದೊಂದು ತಿಂಗಳಲ್ಲಿ 2,300ಕ್ಕೂ ಅಧಿಕ ಮಂದಿಯಲ್ಲಿ ಡೆಂಗ್ಯೂ ದೃಢಪಟ್ಟಿದೆ. ಈ ವರೆಗೆ 5 ಮಂದಿ ಸಾವನ್ನಪ್ಪಿದ್ದಾರೆ. ನಗರದಲ್ಲಿ ಇಂದು ಡೆಂಗ್ಯು ಜ್ವರಕ್ಕೆ ಓರ್ವ ಯುವಕ ಸಾವನ್ನಪ್ಪಿದ್ದಾನೆ. ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯು ಜ್ವರದಿಂದ ಮೃತಪಟ್ಟಿದ್ದು, ನಗರದಲ್ಲಿ ಡೆಂಗ್ಯೂ ಜ್ವರದಿಂದ ಸಾವನ್ನಪ್ಪಿರುವವರ ಸಂಖ್ಯೆ 3 ಕ್ಕೆ ಏರಿಕೆಯಾಗಿದೆ. ಜೂ.27 ರಂದು ಬೆಂಗಳೂರಿನಲ್ಲಿ ವೃದ್ಧೆ ಸೇರಿ ಇಬ್ಬರು ಸಾವನ್ನಪ್ಪಿದ್ದರು. ಡೆಂಗ್ಯೂಗೆ ಬಲಿಯಾದವರ ಕುರಿತು ಡೆತ್ ಆಡಿಟ್ ನಡೆಸಲು ಆರೋಗ್ಯ ಇಲಾಖೆ ಮುಂದಾಗಿದೆ. ಖಾಸಗಿ ಆಸ್ಪತ್ರೆಯವರು ಕೂಡ ಡೆಂಗ್ಯೂ ಡೆತ್‌ ಗಳು ಹಾಗೂ ಪ್ರಕರಣಗಳನ್ನ ನೋಟಿಫೈ ಮಾಡಬೇಕು. ಆಸ್ಪತ್ರೆಗೆ ಬರುವ ಡೆಂಗ್ಯೂ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಜೊತೆಗೆ ವೆಬ್‌ ಸೈಟ್‌ ನಲ್ಲಿ ಅಪ್ಲೋಡ್‌ ಮಾಡಬೇಕು ಎಂದು ಇಲಾಖೆ ಸೂಚಿಸಿದೆ.

2. ಸಿಎಂ ವಿರುದ್ಧ 4 ಸಾವಿರ ಕೋಟಿ ರೂ ಭ್ರಷ್ಟಾಚಾರ ಆರೋಪ!

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ 4 ಸಾವಿರ ಕೋಟಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ಗಂಭಿರ ಆರೋಪ ಮಾಡಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅಶೋಕ್, ಸಿಎಂ ಸಿದ್ದರಾಮಯ್ಯ ತಮ್ಮ ಧರ್ಮ ಪತ್ನಿ ಹೆಸರಿನಲ್ಲೂ ನಿಯಮ ಬಾಹಿರವಾಗಿ ನಿವೇಶನ ವರ್ಗಾವಣೆಯಾಗಿರುವುದು ಬಹಿರಂಗವಾಗಿದೆ. ಇದನ್ನು ಹೇಗೆ ಸಮರ್ಥನೆ ಮಾಡಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದ್ದಾರೆ. 4 ಸಾವಿರ ಕೋಟಿ ರೂ ಭ್ರಷ್ಟಾಚಾರವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಶೋಕ್ ಆಗ್ರಹಿಸಿದ್ದಾರೆ. ಸಿಎಂ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದು, ಇದು ಬಿಜೆಪಿಯವರ ಕಾಲದಲ್ಲಿ ಆಗಿದ್ದು. 1 ಎಕರೆ 15 ಗುಂಟೆ ಜಮೀನು ನನ್ನ ಹೆಂಡತಿ ಹೆಸರಿನಲ್ಲಿದೆ. ಈ ಜಮೀನನ್ನು ಪತ್ನಿಯ ಸೋದರ ತೆಗೆದುಕೊಂಡು ಅರಿಶಿನ-ಕುಂಕಮ ರೀತಿಯಲ್ಲಿ ಉಡುಗೊರೆಯಾಗಿ ನನ್ನ ಪತ್ನಿಗೆ ಕೊಟ್ಟಿದ್ದಾನೆ. ನಾನು ಅಧಿಕಾರದಲ್ಲಿದ್ದಾಗ ಜಮೀನು ಖರೀದಿಸಿದ್ದಲ್ಲ ಎಂದು ಹೇಳಿದ್ದಾರೆ. ಕಾನೂನು ಪ್ರಕಾರ 50:50 ಜಮೀನು ಅನುಪಾತದಲ್ಲಿ ಜಮೀನು ಕೊಡುವುದಾಗಿ ಮುಡಾ ಹೇಳಿದೆ. ಆದರೆ ಮುಡಾದವರು ಜಮೀನನ್ನು ಸೈಟ್ ಮಾಡಿ ಹಂಚಿಬಿಟ್ಟರು. ಹಂಚಿದ ಮೇಲೆ ನಮಗೆ ಜಮೀನು ಇಲ್ಲದೆ ಹಾಗೆ ಆಯ್ತು. ಅದಕ್ಕೆ ಮುಡಾದವರು ಬೇರೆ ಕಡೆ ಜಮೀನು ಕೊಟ್ಟರು, ಇದು ತಪ್ಪಾ, ಕಾನೂನಿನ ಪ್ರಕಾರವೇ ನಮಗೆ ಜಮೀನು ಹಂಚಿದ್ದಾರೆ ಎಂದು ಸಿಎಂ ಹೇಳಿದ್ದಾರೆ.

3. BBMP ಆಸ್ತಿ ತೆರಿಗೆ ಹೆಚ್ಚಳ ಸಾಧ್ಯತೆ

ಪೆಟ್ರೋಲ್, ಡೀಸೆಲ್ ಮತ್ತು ಮದ್ಯದ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಮ್ಮೆ ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ಹೆಚ್ಚಳದ ಬಗ್ಗೆ ಚರ್ಚೆ ನಡೆಸುತ್ತಿದೆ. ಆಸ್ತಿ ತೆರಿಗೆ ಹೆಚ್ಚಳದ ಕುರಿತು ಚರ್ಚೆಗಳು ಪುನರಾರಂಭಗೊಂಡಿವೆ. ಆದರೆ ಎಷ್ಟು ಪ್ರಮಾಣ ಹೆಚ್ಚಿಸಬೇಕು ಎಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ. ಆರಂಭದಲ್ಲಿ ವಾರ್ಷಿಕವಾಗಿ ಶೇ. 5ರಷ್ಟು ತೆರಿಗೆ ಹೆಚ್ಚಿಸುವ ಪ್ರಸ್ತಾವನೆ ಬಂದಿತ್ತು. ಆದರೆ ಅದನ್ನು ತಡೆಹಿಡಿಯಲಾಗಿತ್ತು. ಉತ್ತಮ ಆಡಳಿತ ಮತ್ತು ತೆರಿಗೆ ಸಂಗ್ರಹಕ್ಕಾಗಿ ಬಿಬಿಎಂಪಿಯನ್ನು ವಿಭಜಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

4. ಮೆಣಸಿನಕಾಯಿ ಮಾರಾಟದ ಹಣ ಸಿಗದೇ ರೈತರಿಂದ ಆತ್ಮಹತ್ಯೆ ಯತ್ನ

ತಮ್ಮ ಉತ್ಪನ್ನಗಳನ್ನು ಖರೀದಿಸಿದ ಖಾಸಗಿ ಕಂಪನಿ ಒಂದೂವರೆ ವರ್ಷಗಳಿಂದ ಹಣ ಪಾವತಿಸದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದ 4 ರೈತರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಣ ಪಾವತಿ ಮಾಡಲು ವಿಳಂಬ ಮಾಡಿದ್ದನ್ನು ವಿರೋಧಿಸಿ ಇತರ ರೈತರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದ ವೇಳೆ ರೈತರು ವಿಷ ಸೇವಿಸಿದ್ದರು. ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರ ಸ್ಥಿತಿ ಸ್ಥಿರವಾಗಿದೆ. ಬೆಂಗಳೂರು ಮೂಲದ ಅಗ್ರಿಗ್ರೀಡ್ ಪ್ರೈವೇಟ್ ಲಿಮಿಟೆಡ್ 100 ರೈತರಿಂದ 1.9 ಕೋಟಿ ರೂಪಾಯಿ ಮೌಲ್ಯದ ಮೆಣಸಿನಕಾಯಿ ಖರೀದಿಸಿತ್ತು. 54 ರೈತರ ಬಿಲ್ ಇತ್ಯರ್ಥವಾಗಿದ್ದು, 46 ರೈತರಿಗೆ ಇನ್ನೂ ಹಣ ಬಂದಿಲ್ಲ ಎಂದು ರೈತರು ಹೇಳಿದ್ದಾರೆ.

5. ದಿನಕ್ಕೆ 1 ಕೋಟಿ ಲೀಟರ್ ದಾಟಿದ KMF ಹಾಲು ಸಂಗ್ರಹ

'ನಂದಿನಿ' ಬ್ರಾಂಡ್‌ನ ಡೈರಿ ಉತ್ಪನ್ನಗಳಿಗೆ ಹೆಸರಾಗಿರುವ ಕರ್ನಾಟಕ ಹಾಲು ಒಕ್ಕೂಟ ರೈತರಿಂದ ದಿನಕ್ಕೆ ಒಂದು ಕೋಟಿ ಲೀಟರ್ ಹಾಲು ಸಂಗ್ರಹಿಸುವ ಮೈಲಿಗಲ್ಲನ್ನು ಸಾಧಿಸಿರುವ ಮಾಹಿತಿಯನ್ನು ಸಿಎಂ ಸಿದ್ದರಾಮಯ್ಯ ಇಂದು ಹಂಚಿಕೊಂದಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಹಾಲು ಉತ್ಪಾದನೆ ದಿನಕ್ಕೆ 90 ಲಕ್ಷ ಲೀಟರ್ ಆಗಿತ್ತು. ಈಗ ಕೆಎಂಎಫ್‌ಗೆ ದಿನಕ್ಕೆ 1 ಕೋಟಿ ಲೀಟರ್ ಹಾಲು ಸಿಗುತ್ತಿದೆ. ಕೆಎಂಎಫ್ ಇತಿಹಾಸದಲ್ಲಿ ಇದೊಂದು ಮೈಲಿಗಲ್ಲು ಎಂದು ಸಿಎಂ ಶ್ಲಾಘಿಸಿದ್ದಾರೆ. ಹಾಲಿನ ಸಂಗ್ರಹದಿಂದಾಗಿ ಅರ್ಧ ಮತ್ತು ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್‌ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂಎಲ್ ಹೆಚ್ಚಿಸಲಾಗಿದೆ ಮತ್ತು ಪ್ರಮಾಣಾನುಗುಣವಾಗಿ ಇತ್ತೀಚೆಗೆ ಎರಡು ರೂಪಾಯಿಗಳಷ್ಟು ಬೆಲೆಯನ್ನು ಹೆಚ್ಚಿಸಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com