ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಪಕ್ಷ ಬಿಜೆಪಿ ನಾಯಕರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿ ಮತ್ತು ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಆದರೆ ದಾರಿ ಮಧ್ಯೆಯೇ ಬಿಜೆಪಿ ನಾಯಕರನ್ನು ತಡೆದ ಪೊಲೀಸರು, ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 180 ಕೋಟಿ ರೂ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಗಳು ನಡೆದಿದ್ದು, ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಬೇಕು,ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ನಾಯಕರು ಎಚ್ಚರಿಕೆ ನೀಡಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಸಿ ಟಿ ರವಿ ಸೇರಿದಂತೆ ಪಕ್ಷದ ಮುಖಂಡರು, ಹಲವು ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಮಂಗಳೂರಿನಲ್ಲಿ ಕಟ್ಟಡ ಕಾಮಗಾರಿ ವೇಳೆ ಭೂಕುಸಿತವಾಗಿದ್ದು, ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ಬುಧವಾರ ವರದಿಯಾಗಿದೆ. ನಗರದ ಬಲ್ಮಠ ಬಳಿ ಖಾಸಗಿ ಕಟ್ಟಡ ನಿರ್ಮಾಣ ಕಾಮಗಾರಿ ವೇಳೆ ಭೂಕುಸಿತವಾಗಿದೆ. ಈ ಹಿನ್ನಲೆ ಎಸ್.ಡಿ.ಆರ್.ಎಫ್, ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ರಕ್ಷಣಾ ಕಾರ್ಯಾಚರಣೆ ನಡೆಸಿದೆ. ಈಗಾಗಲೇ ಮಣ್ಣಿನಡಿಯಲ್ಲಿರುವ ಕಾರ್ಮಿಕರ ಜೊತೆ ರಕ್ಷಣಾ ತಂಡದ ಸಿಬ್ಬಂದಿಗಳು ಸಂಪರ್ಕ ಸಾಧಿಸಿದ್ದು, ಅವಶೇಷದಡಿ ಸಿಲುಕಿದ್ದ ಓರ್ವ ಕೂಲಿ ಕಾರ್ಮಿಕನನ್ನು ರಕ್ಷಣೆ ಮಾಡಲಾಗಿದೆ. ಮೂಲಗಳ ಪ್ರಕಾರ ಕಳೆದ ಮೂರು ದಿನದ ಹಿಂದೆ ಸುರಿದ ಮಳೆಯಿಂದ ಮಣ್ಣಿನ ದಿಬ್ಬ ಸಡಿಲಗೊಂಡಿದ್ದು, ರಿಟೇನಿಂಗ್ ವಾಲ್ ಹಾಗೂ ಹಾಕಲಾದ ಶೀಟ್‌ಗಳ ಮೇಲೆ ಮಣ್ಣು ಬಿದ್ದಿದೆ. ಇದರಿಂದ ರಿಟೇನಿಂಗ್ ವಾಲ್ ಹಾಗೂ ಶೀಟ್ ಮಧ್ಯೆ ಕಾರ್ಮಿಕರು ಸಿಲುಕಿದ್ದು, ಕೋರ್ ಕಟ್ಟಿಂಗ್ ಮೂಲಕ ರಕ್ಷಣ ಕಾರ್ಯ ನಡೆಸಲಾಗುತ್ತಿದೆ.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರ ಸಿಐಡಿ ಪೊಲೀಸ್ ಕಸ್ಟಡಿ ಅವಧಿ ಅಂತ್ಯಗೊಂಡಿದ್ದು, ಬುಧವಾರ ಕೋರ್ಟ್ ಮತ್ತೆ ಜುಲೈ 18ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸೂರಜ್ ರೇವಣ್ಣ ಅವರ ಪೊಲೀಸ್ ಕಸ್ಟಡಿ ಅವಧಿ ಇಂದು ಕೊನೆಗೊಂಡಿತ್ತು. ಹೀಗಾಗಿ ಪೊಲೀಸರು ಆರೋಪಿಯನ್ನು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಬೆಸ್ಕಾಂ ಮಾಜಿ ಇಂಜಿನಿಯರ್‌ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ 3 ವರ್ಷ ಜೈಲು, 1 ಕೋಟಿ ರೂಪಾಯಿ ದಂಡ ವಿಧಿಸಿದೆ. 2011ರಲ್ಲಿ ಪ್ರಕರಣ ದಾಖಲಾದಾಗ ಬೆಸ್ಕಾಂನಿಂದ ಲೋಕೋಪಯೋಗಿ ಇಲಾಖೆಗೆ ನಿಯೋಜಿಸಲಾಗಿದ್ದ ಸಿ ರಾಮಲಿಂಗಯ್ಯ ಅವರ ವಿರುದ್ದದ ಅಕ್ರಮ ಆಸ್ತಿ ಗಳಿಕೆ ಆರೋಪ ಸಾಬೀತಾಗಿದ್ದು, ಅವರಿಗೆ ಈ ಶಿಕ್ಷೆ ವಿಧಿಸಿ ನ್ಯಾಯಾಧೀಶ ಕೆ.ಎಂ.ರಾಧಾಕೃಷ್ಣ ಅವರು ತೀರ್ಪು ನೀಡಿದ್ದಾರೆ. ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ 2011ರ ಸೆಪ್ಟೆಂಬರ್ 30ರಂದು ಲೋಕಾಯುಕ್ತ ಪೊಲೀಸರು, ರಾಮಲಿಂಗಯ್ಯ ಅವರ ಮನೆ, ಕಚೇರಿ ಸಂಬಂಧಿಕರ ನಿವಾಸಗಳ ಮೇಲೆ ದಾಳಿ ನಡೆಸಿದ್ದರು. ದಾಳಿ ವೇಳೆ ಒಂದು ಕೆಜಿಗೂ ಅಧಿಕ ಚಿನ್ನಾಭರಣ, ಬೆಳ್ಳಿ, ಕೋಟ್ಯಾಂತರ ರೂ. ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಪತ್ತೆಯಾಗಿದ್ದು, ದಾಖಲೆ ಜಪ್ತಿ ಮಾಡಿದ್ದರು.
ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲಾಗಿರುವ ಘಟನೆ ನಡೆದಿದೆ. ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ 8 ಜನರ ಗುಂಪು ಪೊಲೀಸರನ್ನು ಕಂಡ ಕೂಡಲೇ ಭಯದಿಂದ ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದ್ದರು. ತೆಪ್ಪದಲ್ಲಿ ಹೋಗುತ್ತಿದ್ದಾಗ ಜೋರಾಗಿ ಗಾಳಿ ಬೀಸಿದ್ದು ಇದರಿಂದ ತೆಪ್ಪ ನದಿಯಲ್ಲಿ ಮುಳುಗಿದ್ದು ಆರು ಮಂದಿ ಮುಳುಗಿ ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಈಜುವ ಮೂಲಕ ದಡ ಸೇರಿದ್ದಾರೆ. ಆರು ಮಂದಿಯ ಪೈಕಿ ಇಬ್ಬರ ಮೃತದೇಹಗಳನ್ನು ಹೊರಗೆ ತರಲಾಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Advertisement