MUDA ಹಗರಣ: ಜಮೀನಿನ ಬದಲು ನಿವೇಶನ ಕೊಡಲು ಕಷ್ಟವಿದ್ದರೆ 60 ಕೋಟಿ ರೂ. ಹಣ ಕೊಟ್ಟುಬಿಡಲಿ- ಸಿಎಂ

ನಮಗೆ ಇಂಥಾ ಕಡೆಯೇ ಬದಲಿ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಕುರಿತು BJP Karnataka ಮಾಡುತ್ತಿರುವ ಆರೋಪಗಳು ರಾಜಕೀಯ ಪ್ರೇರಿತ ಆರೋಪಗಳೇ ಹೊರತು ಅಂಕಿಅಂಶಗಳ ಮೇಲೆ ಮಾಡಿರುವ ಆರೋಪಗಳಲ್ಲ. ಬಿಜೆಪಿಯವರಿಗೆ ಬೇರೇನೂ ವಿಷಯವಿಲ್ಲ. ಆರ್.ಎಸ್.ಎಸ್ ಹೇಳಿದಂತೆ ಮಾಡುತ್ತಾರೆ.

ನಿವೇಶನ ಹಂಚಿಕೆಯಾಗಿದ್ದು ಬಿಜೆಪಿ ಕಾಲದಲ್ಲಿ, ಈಗ ಭ್ರಷ್ಟಾಚಾರ ನಡೆದಿದೆ ಎನ್ನುತ್ತಿರುವವರು ಬಿಜೆಪಿಯವರೇ. ಹಾಗಾದರೆ ಬಿಜೆಪಿ ಆರೋಪ ಮಾಡುತ್ತಿರುವುದು ಯಾರ ವಿರುದ್ಧ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

MUDA ನಿವೇಶನ ಹಗರಣ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಮ್ಮ 3.16 ಎಕರೆ ಜಮೀನನ್ನು ಅಕ್ರಮ ಒತ್ತುವರಿ ಮಾಡಿಕೊಂಡು ನಿವೇಶನಗಳನ್ನು ಮಾಡಿ ಹಂಚಿದರೆ ನಾವು ಕೇಳಬಾರದೇ? ಜಮೀನಿನ ಬದಲು ನಿವೇಶನ ಕೊಡಲು ಕಷ್ಟವಿದ್ದರೆ ಜಮೀನಿನ ಮೌಲ್ಯ 60 ಕೋಟಿ.ರೂ.ಗಳನ್ನು ಕೊಟ್ಟುಬಿಡಲಿ. ನಮ್ಮ ಜಮೀನು ಒತ್ತುವರಿ ಮಾಡಿಕೊಂಡಿರುವುದನ್ನು ಅವರೇ ಮುಡಾ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ ನಿವೇಶನಗಳನ್ನು 50:50 ಅನುಪಾತದಲ್ಲಿ ನೀಡಿದ್ದಾರೆ. ಅದಕ್ಕೆ ನಾವು ಒಪ್ಪಿದ್ದೇವೆ. ಇಂಥ ಕಡೆಯೇ ನಿವೇಶನ ಕೊಡಿ ಎಂದು ನಾವು ಕೇಳಿರಲಿಲ್ಲ.

2021ರಲ್ಲಿ ನಿವೇಶನ ನೀಡಿದಾಗ ಬಿಜೆಪಿ ಅಧಿಕಾರದಲ್ಲಿತ್ತು. ಅವರೇ ನಿವೇಶನಗಳನ್ನು ಹಂಚಿ ಈಗ ಕಾನೂನುಬಾಹಿರ ಎಂದರೆ ಹೇಗೆ? ವಿಜಯನಗರ 3ನೇ ಅಥವಾ 4ನೇ ಹಂತದಲ್ಲೇ ನಿವೇಶನ ಕೊಡಿ ಎಂದು ನಾವೇನು ಕೇಳಲಿಲ್ಲ. ನಮಗೆ ಪರ್ಯಾಯವಾಗಿ 50:50 ಅನುಪಾತದಲ್ಲಿ ನಿವೇಶನ ಕೊಡಲು ಅವರೇ ನಿಯಮ ಮಾಡಿದ್ದು, ಅದಕ್ಕೆ ನಾವು ಸರಿ ಅದನ್ನೇ ಕೊಡಿಯಪ್ಪ ಎಂದು ಹೇಳಿದ್ದೇವೆ. ಇದರಲ್ಲಿ ನಮ್ಮ ತಪ್ಪೇನಿದೆ?

ನಮಗೆ ಇಂಥಾ ಕಡೆಯೇ ಬದಲಿ ನಿವೇಶನ ಕೊಡಿ ಎಂದು ನಾವು ಕೇಳಿಲ್ಲ. ಜಾಗ ಕೊಟ್ಟಿರುವುದು ತಪ್ಪು ಎನ್ನುವುದಾದರೆ ನಮಗೆ ಪರಿಹಾರ ಕೊಡಲಿ. ಅಕ್ಟೋಬರ್ 2023 ರಲ್ಲಿ ಸಚಿವರು 50:50 ಅನುಪಾತದಲ್ಲಿ ಜಮೀನು ಕೊಡುವುದನ್ನು ರದ್ದು ಮಾಡಿ ಎಂದು ಬರೆದಿದ್ದಾರೆ. ಬರೆಯದೇ ಹೋದರೂ ಕೂಡ 62 ಕೋಟಿ ರೂ.ಗಳನ್ನು ಕಾನೂನಿನ ಪ್ರಕಾರ ಕೊಟ್ಟುಬಿಡಲಿ. ನಮಗೆ ಕೊಟ್ಟಿರುವ 14 ನಿವೇಶನಗಳ ಬೆಲೆ ಇದಕ್ಕಿಂತಲೂ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನನಗೆ ಕೊಟ್ಟಿರುವುದು 38.264 ಚದರ ಅಡಿ. ಒಂದು ಎಕರೆಗಿಂತ ಕಡಿಮೆಯಾಗಿದೆ. ಪರಿಹಾರವಾಗಿ ಕೊಟ್ಟಿರುವ ಜಮೀನಿನ ಬೆಲೆ ಎಷ್ಟಿದೆ ಎಂದು ನನಗೆ ತಿಳಿದಿಲ್ಲ. ನನಗೆ 62 ಕೋಟಿ ರೂ. ಕೊಟ್ಟುಬಿಡಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com