
ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಬಂದ ಸುಳ್ ಸುದ್ದಿಯನ್ನು ನಂಬಿ ಕೇಂದ್ರ ಸಚಿವ ವಿ ಸೋಮಣ್ಣ, ಸಂಸದ ಡಾ. ಸಿಎನ್ ಮಂಜುನಾಥ್ ಮಾಜಿ ಉಪ ಪ್ರಧಾನಿ, ಮಾಜಿ ಗೃಹ ಸಚಿವ, ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿರುವ ಘಟನೆ ನಡೆದಿದೆ.
ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಈ ಯಡವಟ್ಟು ನಡೆದಿದ್ದು, ಬಳಿಕ ಈ ಮಾಹಿತಿ ಸಮಾಜಿಕ ಜಾಲತಾಣದಲ್ಲಿ ಬಂದ ಸುಳ್ಳು ಸುದ್ದಿ ಎಂಬುದನ್ನು ಅರಿತ ಬಳಿಕ ಇಬ್ಬರೂ ನಾಯಕರು ತಮ್ಮಿಂದ ಆದ ಅಚಾತುರ್ಯಕ್ಕೆ ಕ್ಷಮೆ ಕೋರಿದ್ದಾರೆ.
ಗುಬ್ಬಿಯಲ್ಲಿ ನಡೆದ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಭಾಷಣ ಮಾಡಿದ ಕೇಂದ್ರ ಸಚಿವ ಸೋಮಣ್ಣ, ತಮಗೆ ಬಂದ ಮಾಹಿತಿಯ ಆಧಾರದಲ್ಲಿ ವೇದಿಕೆಯ ಮೇಲೆ ಮಾತನಾಡುತ್ತಾ, ನಮ್ಮ ನಾಯಕ ಅಡ್ವಾಣಿ ಈಗ ತಾನೇ ನಿಧನರಾದರು ಎಂದು ಘೋಷಿಸಿದರು. ಅಷ್ಟೇ ಅಲ್ಲದೇ ಅಗಲಿದ ನಾಯಕನಿಗೆ 2 ನಿಮಿಷ ಮೌನ ಆಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸೋಣ ಎಂದು ಮನವಿ ಮಾಡಿದರು. ಅಷ್ಟೇ ಅಲ್ಲದೇ ದೆಹಲಿಗೆ ಹೊರಡಬೇಕಿರುವುದರಿಂದ ಕಾರ್ಯಕ್ರಮ ಮುಂದೂಡುತ್ತಿರುವುದಾಗಿ ಹೇಳಿದರು. ಆದರೆ ಅಡ್ವಾನಿ ನಿಧನದ ಸುದ್ದಿ ಸುಳ್ಳು ಸುದ್ದಿ ಎಂದು ತಿಳಿದ ಕೂಡಲೇ ತಮ್ಮಿಂದ ಆದ ಅಚಾತುರ್ಯಕ್ಕೆ ಕ್ಷಮೆ ಕೋರಿ ಸಭೆಯಿಂದ ನಿರ್ಗಮಿಸಿದರು.
ಇನ್ನು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿಎನ್ ಮಂಜುನಾಥ್ ಅವರೂ ಇದೇ ರೀತಿಯ ಯಡವಟ್ಟು ಮಾಡಿಕೊಂಡರು. ಕುಣಿಗಲ್ ನಲ್ಲಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಎಲ್ ಕೆ ಅಡ್ವಾನಿ ನಿಧನಕ್ಕೆ ಸಂತಾಪ ಸೂಚಿಸಿದರು. ಆದರೆ ಸತ್ಯ ಸಂಗತಿ ತಿಳಿದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿನ ಸುಳ್ಳು ಸುದ್ದಿಯಿಂದ ಈ ಅಚಾತುರ್ಯವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
Advertisement