ರಾಜ್ಯದಲ್ಲಿ ಡೆಂಘಿ ತುರ್ತು ಪರಿಸ್ಥಿತಿ ಘೋಷಿಸಿ, ಉಚಿತವಾಗಿ ಪರೀಕ್ಷೆ ಮಾಡಿಸಿ- ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹ

ರಾಜ್ಯದಲ್ಲಿ ಕೂಡಲೇ ಡೆಂಘಿ ತುರ್ತು ಪರಿಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ಪರೀಕ್ಷೆ ಮಾಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಆಗ್ರಹಿಸಿದ್ದಾರೆ.
ಆರ್. ಅಶೋಕ್
ಆರ್. ಅಶೋಕ್
Updated on

ಬೆಂಗಳೂರು: ರಾಜ್ಯದಲ್ಲಿ ಕೂಡಲೇ ಡೆಂಘಿ ತುರ್ತು ಪರಿಸ್ಥಿತಿ ಘೋಷಿಸಿ, ಜನರಿಗೆ ಉಚಿತವಾಗಿ ಸರ್ಕಾರದಿಂದಲೇ ಪರೀಕ್ಷೆ ಮಾಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್ ಆಗ್ರಹಿಸಿದ್ದಾರೆ.

ಜಯನಗರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಡೆಂಘಿ ರೋಗಿಗಳನ್ನು ಭೇಟಿ ಮಾಡಿ, ಸೌಲಭ್ಯ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘಿ ರೋಗ ಹೆಚ್ಚಾಗಿ ಹರಡುವಾಗ ಸರ್ಕಾರ ಪ್ರತಿ ತಾಲೂಕಲ್ಲಿ ಟಾಸ್ಕ್‌ ಫೋರ್ಸ್‌ ರಚಿಸಿ ಔಷಧಿ ಪೂರೈಸುವ, ರೋಗ ನಿಯಂತ್ರಿಸುವ ಕ್ರಮಗಳನ್ನು ವಹಿಸಬೇಕಿತ್ತು. ಇವ್ಯಾವುದನ್ನೂ ಸರ್ಕಾರ ಮಾಡಿಲ್ಲ ಎಂದು ಆರೋಪಿಸಿದರು.

ಆರ್. ಅಶೋಕ್
ರಾಜ್ಯದಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ನಿರ್ದೇಶನ

ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಡೆಂಘಿಗೆ ಒಳಗಾಗಿದ್ದಾರೆ. ಇವರಿಗೆ ಪರೀಕ್ಷೆ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ತೈಲ ದರ ಏರಿಕೆ ಸೇರಿದಂತೆ ವಿವಿಧ ತೆರಿಗೆಗಳನ್ನು ಸರ್ಕಾರ ಹಾಕಿರುವಾಗ ಜನರಿಗೆ ಉಚಿತ ಪರೀಕ್ಷೆ ಮಾಡಿಸಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದರು. ಉಚಿತ ಪರೀಕ್ಷೆ ಮಾಡಿದರೆ ಸುಮಾರು 10 ಕೋಟಿ ರೂ. ಖರ್ಚಾಗಬಹುದು. ಅಷ್ಟು ಹಣವನ್ನು ಮಂಜೂರು ಮಾಡಲು ಸಾಧ್ಯವೇ ಇಲ್ಲವೇ? ಅದಕ್ಕೂ ತೆರಿಗೆ ಹಾಕಬೇಕೆ? ಕೆಲ ಆರೋಗ್ಯ ಕೇಂದ್ರಗಳು 1,000 ರೂ.ವರೆಗೂ ಪರೀಕ್ಷಾ ಶುಲ್ಕ ವಿಧಿಸುತ್ತಿವೆ. ಆದ್ದರಿಂದ ಸರ್ಕಾರ ಕೂಡಲೇ ವೆಚ್ಚವನ್ನು ಭರಿಸಬೇಕು ಎಂದು ಆಗ್ರಹಿಸಿದರು.

ಆರ್. ಅಶೋಕ್
ರಾಜ್ಯ ಸರ್ಕಾರ ಡೆಂಘಿ ಸಾವಿನ ಸಂಖ್ಯೆ ಮುಚ್ಚಿಡುತ್ತಿದೆ: ಬಸವರಾಜ ಬೊಮ್ಮಾಯಿ ಆರೋಪ

ರಾಜ್ಯದಲ್ಲಿ ಡೆಂಘಿ ರೋಗ ವೇಗವಾಗಿ ಹರಡುತ್ತಿದ್ದು, ಪ್ರತಿ ದಿನ ಮೂರರಿಂದ ನಾಲ್ಕು ಜನರು ಸಾವಿಗೀಡಾಗುತ್ತಿದ್ದಾರೆ. ಬೆಂಗಳೂರು ಸೇರಿದಂತೆ ಎಲ್ಲ ಭಾಗಗಳಲ್ಲಿ ಜನರು ಭಯಕ್ಕೊಳಗಾದರೂ ಸರ್ಕಾರಕ್ಕೆ ಇದರ ಭಯ ಬಂದಿಲ್ಲ. 100 ಮಾದರಿ ಪರೀಕ್ಷೆ ಮಾಡಿದರೆ 13-14 ರಲ್ಲಿ ಡೆಂಘಿ ಲಕ್ಷಣ ಕಂಡುಬರುತ್ತಿದೆ. ಬೇರೆ ರೋಗಗಳಿರುವ ವ್ಯಕ್ತಿಗಳಿಗೆ ಡೆಂಘಿ ಬಂದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಎಲ್ಲೆಡೆ ಕಸದ ರಾಶಿ ಇದೆ, ಮಳೆಯಿಂದಾಗಿ ಅಲ್ಲಲ್ಲಿ ನೀರು ಸಂಗ್ರಹವಾಗುತ್ತಿದೆ. ಆದರೂ ಸರ್ಕಾರ ಏನೂ ಕ್ರಮ ವಹಿಸಿಲ್ಲ ಎಂದು ದೂರಿದರು.

ಅತಿ ಸಣ್ಣ ವಯಸ್ಸಿನ ಮಕ್ಕಳಿಗೂ ಡೆಂಘಿ ರೋಗ ಬರುತ್ತಿದೆ. ಅಧಿಕಾರಿಗಳು ಕೊಠಡಿ ಬಿಟ್ಟು ಹೊರಗೆ ಬರುತ್ತಿಲ್ಲ. ಸರ್ಕಾರ ಡೆಂಘಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದರೆ ಮಾತ್ರ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯ. ಬೆಂಗಳೂರು ಸೇರಿದಂತೆ ಅನೇಕ ಕಡೆ ಕಸದ ರಾಶಿ ಬಿದ್ದಿದೆ. ಅದನ್ನು ಸ್ವಚ್ಛ ಮಾಡಲು ಸರ್ಕಾರ ಗಮನಹರಿಸಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕರನ್ನು ಬಳಸಿಕೊಂಡು ಮನೆ ಮನೆಗೆ ಹೋಗಿ ಪರೀಕ್ಷೆ ಮಾಡಬೇಕು. ಪ್ರತಿ ಆಸ್ಪತ್ರೆಯಲ್ಲಿ ಡೆಂಘೀಗೆ ಒಂದು ವಾರ್ಡ್‌ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಆರ್. ಅಶೋಕ್
ಮಂಗಳೂರು: ಡೆಂಘಿ ಜ್ವರ, ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸುವ ಜಾಗೃತಿ ಅಭಿಯಾನಕ್ಕೆ ಚಾಲನೆ

ಆತಂಕ ನಿವಾರಿಸಿ: ಜನರಲ್ಲಿ ಡೆಂಘಿ ಬಗ್ಗೆ ಉಂಟಾಗಿರುವ ಆತಂಕವನ್ನು ನಿವಾರಿಸಲು ಸರ್ಕಾರ ಜಾಗೃತಿ ಮೂಡಿಸಬೇಕು. ಉದ್ಯಾನ, ಸಾರ್ವಜನಿಕ ಸ್ಥಳ, ನೀರು ನಿಲ್ಲುವ ಸ್ಥಳ ಸೇರಿದಂತೆ ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ಮಾಡಿಸಬೇಕು. ಆರೋಗ್ಯ ಸಚಿವರು ಎಲ್ಲ ಜಿಲ್ಲೆಗಳಿಗೆ ಹೋಗಿ ಜನರನ್ನು ಭೇಟಿ ಮಾಡಬೇಕು. ಕಾಂಗ್ರೆಸ್‌ನ ಎಲ್ಲ ಸಚಿವರು, ಶಾಸಕರು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಜನರಿಗೆ ಧೈರ್ಯ ಹೇಳಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಡೆಂಘಿ ಜೊತೆಗೆ ಝೀಕಾ, ಕಾಲರಾ ಕೂಡ ಕಂಡುಬಂದಿದೆ. ಸಿಎಂ ಸಿದ್ದರಾಮಯ್ಯ ಅವರ ಜಿಲ್ಲೆಯಲ್ಲೇ ಜನರು ಕಲುಷಿತ ನೀರು ಕುಡಿದು ಸತ್ತಿದ್ದಾರೆ. ಈ ಮೂರು ರೋಗಗಳಿಂದ ಜನರನ್ನು ಕಾಪಾಡಲು ಸರ್ಕಾರ ಹೆಚ್ಚು ಗಮನಹರಿಸಬೇಕು. ಬಿಬಿಎಂಪಿ ಆಯುಕ್ತರಿಗೇ ಸೊಳ್ಳೆ ಕಚ್ಚಿ ಡೆಂಘಿ ಬಂದಿರುವುದಾಗ ಬಿಬಿಎಂಪಿ ಬೇರೆಯವರನ್ನು ಕಾಪಾಡಲು ಸಾಧ್ಯವಿಲ್ಲ ಎಂಬ ಆತಂಕ ಜನರಲ್ಲಿ ಮೂಡಿದೆ. ಸಭೆ ಮಾಡುವುದರಿಂದ ಏನೂ ಆಗುವುದಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಬಂದು ಕೆಲಸ ಮಾಡಬೇಕು. ನಗರದಲ್ಲಿ ಬಿದ್ದಿರುವ ರಾಶಿ ಕಸವನ್ನು ವಿಲೇವಾರಿ ಮಾಡಲು ಅಭಿಯಾನದ ಮಾದರಿಯಲ್ಲಿ ಕೆಲಸ ಮಾಡಬೇಕು. ಹೆಚ್ಚು ಹಣ ನೀಡಬೇಕು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com