ರಾಜ್ಯದಲ್ಲಿ ಡೆಂಗ್ಯೂ ಅಬ್ಬರ: ಮಾರ್ಗಸೂಚಿ ಪ್ರಕಟ; ರಾಜ್ಯದಲ್ಲಿ ಧಾರಾಕಾರ ಮಳೆ: ರೆಡ್ ಅಲರ್ಟ್ ಘೋಷಣೆ; ಚಿರತೆ ಕೊಂದ ಗ್ರಾಮಸ್ಥರು! ಇವು ಇಂದಿನ ಪ್ರಮುಖ ಸುದ್ದಿಗಳು 07-07-24

ರಾಜ್ಯದಲ್ಲಿ ಡೆಂಗ್ಯೂ ಅಬ್ಬರ: ಮಾರ್ಗಸೂಚಿ ಪ್ರಕಟ; ರಾಜ್ಯದಲ್ಲಿ ಧಾರಾಕಾರ ಮಳೆ: ರೆಡ್ ಅಲರ್ಟ್ ಘೋಷಣೆ; ಚಿರತೆ ಕೊಂದ ಗ್ರಾಮಸ್ಥರು! ಇವು ಇಂದಿನ ಪ್ರಮುಖ ಸುದ್ದಿಗಳು 07-07-24

1. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರಣಾಂತಿಕ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಳ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಾರಣಾಂತಿಕ ಡೆಂಗ್ಯೂ ಜ್ವರದ ಹಾವಳಿ ಹೆಚ್ಚಾಗಿದೆ. ಹಾಸನ ಜಿಲ್ಲೆಯಲ್ಲಿ ಇದುವರೆಗೆ ಅತಿ ಹೆಚ್ಚು ಮಕ್ಕಳು ಬಲಿಯಾಗಿದ್ದರೆ ಇದೀಗ ಗದಗದಲ್ಲಿ 5 ವರ್ಷದ ಮಗು ಚಿರಾಯಿ ಹೊಸಮನಿ ಮೃತಪಟ್ಟಿದ್ದಾನೆ. ತೀವ್ರ ಜ್ವರದಿಂದ ಬಳಲುತ್ತಿದ್ದ ಚಿರಾಯಿ ಹೊಸಮನಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಧಾರವಾಡದ ಎಸ್​ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಚಿರಾಯಿ ಹೊಸಮನಿ‌ ಮೃತಪಟ್ಟಿದ್ದಾನೆ. ಅಲ್ಲದೆ ಹಾಸನದಲ್ಲೂ 23 ವರ್ಷದ ಯುವತಿ ಸುಪ್ರೀತಾ ಸಹ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಹೆಚ್ಚಿನ ಡೆಂಗ್ಯೂ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನಿರ್ದೇಶನ ನೀಡಿದ್ದಾರೆ. ಕುಡಿಯುವ ನೀರು ಸರಬರಾಜು ಟ್ಯಾಂಕ್ ಗಳು, ತೆರೆದ ತೊಟ್ಟಿಗಳು ಮತ್ತು ಸಾರ್ವಜನಿಕ ಶೌಚಾಲಯಗಳಲ್ಲಿ ನೀರು ಶೇಖರಣೆ ಮಾಡುವ ತೊಟ್ಟಿಗಳನ್ನು ವಾರಕ್ಕೊಮ್ಮೆ ಶುಚಿಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

2. ಮುಡಾದಲ್ಲಿ ನಿವೇಶನ ಪಡೆದವರ ಪಟ್ಟಿಯನ್ನು ಬಿಡುಗಡೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಹಗರಣ ಇದೀಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಇನ್ನು ಮುಡಾದಲ್ಲಿ ನಿವೇಶನ ಪಡೆದವರ ಪಟ್ಟಿಯನ್ನು ಬಿಡುಗಡೆ ಮಾಡುವುದಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್​​ಸಿ ಮಹಾದೇವಪ್ಪ ಹೇಳಿದ್ದಾರೆ. ಇನ್ನು ಈ ಮುಡಾ ಹಗರಣದ ಕುರಿತು ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮಾಜಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ, ಬಿಜೆಪಿ ಶಾಸಕ ಎಸ್​ಟಿ ಸೋಮಶೇಖರ್​, ಮುಡಾದ ಪ್ರತಿ ಮೀಟಿಂಗ್ ನಲ್ಲಿ ಶಾಸಕರ ಫೈಲ್ ಗಳೇ ಇರುತ್ತಿದ್ದವು ಎಂದು ಸ್ಫೊಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರು ವಾಸ ಸ್ಥಳವನ್ನ ಮೈಸೂರಿಗೆ ಕೊಡುತ್ತಿದ್ದರು. ಈ ಮಟ್ಟಕ್ಕೆ ಇಳಿದು ಶಾಸಕರಗಳು ಲಾಭಿ ಮಾಡುತ್ತಾರೆ. ಮುಡಾ ಇರುವುದು ಜನ ಸಾಮಾನ್ಯರ ಅಭಿವೃದ್ಧಿಗೋಸ್ಕರ ಆದರೆ ಇಲ್ಲಿ ಆಗುತ್ತಿರುವುದು ಏನು? ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೆ ತಮ್ಮ ಹೆಸರಿನ ಮೇಲೆ ಮುಡಾದಲ್ಲಿ ಒಂದೇ ಒಂದು ಸೈಟ್ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮಶೇಖರ್ ಸವಾಲು ಹಾಕಿದ್ದಾರೆ.

3. ಮೈಶುಗರ್ ಕಾರ್ಖಾನೆ ವಿದ್ಯುತ್ ಬಿಲ್ ಮನ್ನಾ ಮಾಡುವ ಬಗ್ಗೆ ಪರಿಶೀಲಿಸಿ

ಮೈಶುಗರ್ ಕಾರ್ಖಾನೆ ವಿದ್ಯುತ್ ಬಿಲ್ ಮನ್ನಾ ಮಾಡುವ ಬಗ್ಗೆ ಪರಿಶೀಲಿಸಿ, ಕಡತ ಮಂಡನೆಗೆ ಹಣಕಾಸು ಇಲಾಖೆ ಅಪರ‌ ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಮೈಸೂರು ಸಕ್ಕರೆ ಕಾರ್ಖಾನೆ ವಿದ್ಯುತ್ ಬಿಲ್‌ ಮನ್ನಾಕ್ಕೆ ಸಚಿವ ಸಂಪುಟದ ಅನುಮೋದನೆ ಅಗತ್ಯ ಹೀಗಾಗಿ ಸಚಿವ ಸಂಪುಟ ಸಭೆಗೆ ಪ್ರಸ್ತಾಪ ಮಂಡಿಸಲು ಸಿಎಂ ಸೂಚಿಸಿದ್ದಾರೆ. ಮಂಡ್ಯ ಮೈ ಶುಗರ್ ಕಾರ್ಖಾನೆ ಕಳೆದ 25 ವರ್ಷಗಳಿಂದ ವಿದ್ಯುತ್ ಬಿಲ್ ಕಟ್ಟಿಲ್ಲ. ಹೀಗಾಗಿ 52.25 ಕೋಟಿ ರೂ. ಬಾಕಿ ಪಾವತಿಸುವಂತೆ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿಯು ಮೈಶುಗರ್ ಸಕ್ಕರೆ ಕಾರ್ಖಾನೆಗೆ ನೋಟಿಸ್ ನೀಡಿತ್ತು‌. ರೈತರ ಹಿತ ದೃಷ್ಟಿಯಿಂದ‌ ಕಾರ್ಖಾನೆ ಉಳಿಸಿಕೊಳ್ಳುವುದು ಅವಶ್ಯವಾಗಿದ್ದು, ವಿದ್ಯುತ್ ಬಿಲ್ ಮನ್ನಾ ಮಾಡಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

4. ರಾಯಚೂರಿನಲ್ಲಿ ಚಿರತೆ ಕೊಂದ ಗ್ರಾಮಸ್ಥರು

ರಾಯಚೂರಿನಲ್ಲಿ ಮೂವರ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಹಿಡಿದು ಗ್ರಾಮಸ್ಥರು ಹೊಡೆದು ಕೊಂದಿದ್ದಾರೆ. ರಾಯಚೂರಿನ ದೇವದುರ್ಗ ತಾಲ್ಲೂಕಿನ ಕಮದಾಳು ಗ್ರಾಮದಲ್ಲಿ ಮೂವರ ಮೇಲೆ ಚಿರತೆ ದಾಳಿ ಮಾಡಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಣ್ಯಾಧಿಕಾರಿಗಳ ಕಾರ್ಯಾಚರಣೆ ವೇಳೆ ಚಿರತೆ ಸೆರೆ ಸಿಗದ ಹಿನ್ನೆಲೆಯಲ್ಲೇ ಅಖಾಡಕ್ಕೆ ಇಳಿದ ಗ್ರಾಮಸ್ಥರೇ ಚಿರತೆ ಮೇಲೆ ದಾಳಿ ಮಾಡಿ ಅರಣ್ಯ ಅಧಿಕಾರಿಗಳ ಎದುರೇ ಚಿರತೆಯನ್ನು ಕೊಂದು ಹಾಕಿದ್ದರು. ಇತ್ತ ಸ್ಥಳದಲ್ಲಿ ಸೇರಿದ್ದ ಸಾವಿರಾರು ಜನರನ್ನು ನಿಯಂತ್ರಿಸಲು ಆಗದೆ ಪೊಲೀಸರು ಹರಸಾಹಸ ಪಟ್ಟಿದ್ದು ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿದರು.

5. ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷನೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಅರಬ್ಬೀ ಸಮುದ್ರದಲ್ಲಿನ ವೈಪರೀತ್ಯ ಕಾರಣ ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರೆದಿದ್ದು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಬೆಂಗಳೂರು, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಕೊಡಗಿನಲ್ಲೂ ಭಾರೀ ಮಳೆಯಾಗುತ್ತಿದೆ. ರಾಜ್ಯದ ಹಲವು ಪ್ರಸಿದ್ಧ ಜಲಪಾತಗಳು ದುಮ್ಮಿಕ್ಕಿ ಹರಿಯುತ್ತಿದ್ದು ಪ್ರವಾಸಿಗರ ಹುಚ್ಚಾಟವು ಹೆಚ್ಚಾಗಿದೆ. ಹೀಗಾಗಿ ಅಪಾಯಕಾರಿ ಜಲಪಾತಗಳಿಗೆ ಇಳಿಯದಂತೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com