
ದಾವಣಗೆರೆ: ಮಾಜಿ ಸಚಿವ, ಸಿನಿಮಾ ನಟ ಹಾಗೂ ಬಿಜೆಪಿ ನಾಯಕ ಬಿಸಿ ಪಾಟೀಲ್ ಅವರ ಅಳಿಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊನ್ನಾಳಿ ಪೊಲೀಸರು ಯುಡಿಆರ್ (ಅಸಹಜ ಸಾವು) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರತಾಪ್ ಕುಮಾರ್ ಅವರ ಸಹೋದರ ಪ್ರಭುದೇವ್ ಅವರು ನೀಡಿದ ದೂರಿನ ಆಧಾರದ ಮೇಲೆ ಯುಡಿಆರ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗದ ಕಾರಣ ಪ್ರತಾಪ್ ಖಿನ್ನತೆಗೆ ಒಳಗಾಗಿದ್ದ, ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಎಂದು ಪ್ರಭುದೇವ್ ದೂರಿನಲ್ಲಿ ತಿಳಿಸಿದ್ದಾರೆ.
ಮೃತ ಪ್ರತಾಪ್ ವನಜಾಕ್ಷಮ್ಮ ಅವರ (ಪಾಟೀಲ್ ಅವರ ಪತ್ನಿ) ಚಿಕ್ಕಪ್ಪನ ಮಗನಾಗಿದ್ದು, ಪಾಟೀಲ್ ಅವರ ಹಿರಿಯ ಮಗಳನ್ನು 2008 ರಲ್ಲಿ ಅವರಿಗೆ ವಿವಾಹವಾಗಿದ್ದರು.
ಪ್ರತಾಪ್ ಅವರು ತಮ್ಮ ಕಾರಿನಲ್ಲಿ ಶಿವಮೊಗ್ಗ-ಹರಿಹರ ರಸ್ತೆಯ ಅರಕೆರೆ ಗ್ರಾಮದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪ್ರತಾಪ್ ಕೀಟನಾಶಕ ಸೇವಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಕಂಡು ಬಂದಿದ್ದರು. ಕೂಡಲೇ ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಪ್ರತಾಪ್ ಕುಮಾರ್ ಅವರ ಅಂತಿಮ ಸಂಸ್ಕಾರವನ್ನು ಕತ್ತಲಗೆರೆ ಗ್ರಾಮದಲ್ಲಿ ಮಂಗಳವಾರ ನೆರವೇರಿಸಲಾಗಿದೆ.
ಈ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿ.ಪಾಟೀಲ್ ಅವರು, ನನ್ನ ವ್ಯವಹಾರ, ರಾಜಕೀಯ ಸೇರಿದಂತೆ ಎಲ್ಲವನ್ನು ಮನೆ ಮಗನ ರೀತಿಯಲ್ಲಿ ಪ್ರತಾಪ್ ನೋಡಿಕೊಳ್ಳುತ್ತಿದ್ದ. ಆತನಿಗೆ ಮದುವೆಯಾಗಿ 16 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ ಎಂಬ ಕೊರಗಿತ್ತು. ಜೊತೆಗೆ ಮದ್ಯಪಾನದ ವ್ಯಸನವೂ ಇತ್ತು, ಇಂದು ಆತ ತನ್ನ ಹುಟ್ಟೂರು ಚನ್ನಗಿರಿ ತಾಲೂಕಿನ ಕತ್ತಲಗೆರೆ ಗ್ರಾಮಕ್ಕೆ ಹೋಗಿದ್ದ. ಮಧ್ಯಾಹ್ನದ ವೇಳೆಗೆ ಮೆಕ್ಕೆಜೋಳಗಳಿಗೆ ಹಾಕುವ ಕ್ರಿಮಿನಾಶಕ ಮಾತ್ರೆಗಳನ್ನು ಸೇವಿಸಿದ್ದಾನೆ ಎಂದು ಆತನ ಸಹೋದರ ಪ್ರಭುದೇವ ನನಗೆ ಕರೆ ಮಾಡಿದ್ದ. ನಂತರ ಪ್ರತಾಪ್‌ಗಾಗಿ ಹುಡುಕಾಡುತ್ತಿದ್ದೆವು. ದಾವಣಗೆರೆ ಮತ್ತು ಶಿವಮೊಗ್ಗ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದೆವು. ಹೊನ್ನಾಳಿ ಸಮೀಪದ ಪ್ರದೇಶದಲ್ಲಿ ಅವರ ಮೊಬೈಲ್ ಲೊಕೇಷನ್ ಸಿಕ್ಕಿತ್ತು. ಕರೆ ಮಾಡಿದಾಗ ಹೊನ್ನಾಳಿ- ಮಲೆಬೆನ್ನೂರು ರಸ್ತೆಯಲ್ಲಿ ಇದ್ದೇನೆ. ವಿಷ ಸೇವಿಸಿದ್ದೇನೆ ಎಂದು ಪ್ರತಾಪ್ ಹೇಳಿದ್ದ. ಹುಡುಕಿದಾಗ ಹೊನ್ನಾಳಿ ಸಮೀಪ ಸಿಕ್ಕಿದ್ದರು. ಕೂಡಲೆ ಹೊನ್ನಾಳಿಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಶಿವಮೊಗ್ಗದ ಮೆಗ್ಗಾನ್‌ಗೆ ಕರೆತರುವಾಗ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
Advertisement