
ಮಂಗಳೂರು: ನಿನ್ನೆಯಷ್ಟೇ ಬಂಧನಕ್ಕೀಡಾಗಿದ್ದ ಖತರ್ನಾಕ್ ''ಚಡ್ಡಿ ಗ್ಯಾಂಗ್''ನ ದರೋಡೆಕೋರರನ್ನು ಸ್ಥಳಮಹಜರಿಗಾಗಿ ಕರೆದುಕೊಂಡು ಹೋಗಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.
ಮಂಗಳೂರು ನಗರದಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾದ ಖತರ್ನಾಕ್ ಚಡ್ಡಿಗ್ಯಾಂಗ್ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರು ಶೂಟ್ ಔಟ್ ಮಾಡಿರುವ ಘಟನೆ ಸಮೀಪದ ಪಡುಪಣಂಬೂರು ಮುಲ್ಕಿ ಎಂಬಲ್ಲಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ತಗಲಿ ಗಾಯವಾಗಿದ್ದು ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ.
ಮಂಗಳವಾರ ಮುಂಜಾನೆ ನಗರದ ಮನೆಯೊಂದಕ್ಕೆ ದರೋಡೆಕೋರರು ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಲೂಟಿ ಮಾಡಿ ಪರಾರಿಯಾಗಿದ್ದರು. ಘಟನೆ ನಡೆದ ಕೇವಲ 5 ಗಂಟೆಯೊಳಗೆ ಮಂಗಳೂರು ಮತ್ತು ಹಾಸನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಸಕಲೇಶಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಅದೇ ದಿನ ಅವರನ್ನು ಮಂಗಳೂರಿಗೆ ಕರೆತರಲಾಗಿತ್ತು.
ಬುಧವಾರ ಬೆಳಗ್ಗೆ ನಗರದ ಹೊರವಲಯದಲ್ಲಿರುವ ಪಡುಪಣಂಬೂರು ಎಂಬಲ್ಲಿ ಸ್ಥಳ ಮಹಜರು ಪಡಿಸುವ ವೇಳೆಗೆ ಎಎಸ್ಐ ಸೇರಿ ಇಬ್ಬರು ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾರೆ. ಪ್ರತಿಯಾಗಿ ಪೊಲೀಸರು ಗುಂಡು ಹಾರಿಸಿದ್ದು ಇಬ್ಬರ ಕಾಲಿಗೆ ಗುಂಡು ತಗಲಿದೆ.
ಕಾಲಿಗೆ ಗುಂಡು ತಗುಲಿರುವ ಇಬ್ಬರು ಆರೋಪಿಗಳನ್ನೂ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳೆಲ್ಲರೂ ಮಧ್ಯಪ್ರದೇಶದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 8 ರಂದು ಕೋಟೆಕಣಿ ಪ್ರದೇಶದಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ದೋಚಿ, ವೃದ್ಧ ದಂಪತಿಯನ್ನು ಗಾಯಗೊಳಿಸಿ ಬೆಂಗಳೂರು ಕಡೆಗೆ ಪರಾರಿಯಾಗಿದ್ದರು. ಸಕಲೇಶಪುರ ಪೊಲೀಸರು ಮತ್ತು ಕೆಎಸ್‌ಆರ್‌ಟಿಸಿ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಅಧಿಕಾರಿಗಳ ಸಹಾಯದಿಂದ ಮಂಗಳೂರು ಪೊಲೀಸರು ಅಪರಾಧ ನಡೆದ ಐದು ಗಂಟೆಗಳಲ್ಲಿ ಅವರನ್ನು ಬಂಧಿಸಿದ್ದರು.
Advertisement