
ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಡೆಂಘಿ ಹೆಚ್ಚಳ ಹಿನ್ನೆಲೆಯಲ್ಲಿ ಇಲಾಖೆ ವ್ಯಾಪ್ತಿಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಡೆಂಘಿ ಜ್ವರಕ್ಕೆ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಒದಗಿಸಲಾಗುವುದು ಎಂದು ಕರ್ನಾಟಕ ಸರ್ಕಾರ ಗುರುವಾರ ಹೇಳಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ 'ಡೆಂಘಿ ವಾರ್ ರೂಮ್' ಸ್ಥಾಪಿಸಬೇಕು, ಜಿಲ್ಲಾ ಮಟ್ಟದ ಕಾರ್ಯ ಪಡೆ ರಚಿಸಿ, ಹಾಟ್ ಸ್ಪಾಟ್ ಗುರುತಿಸಬೇಕು, ಫೀವರ್ ಕ್ಲಿನಿಕ್ ಆರಂಭಿಸಿ, ಸೊಳ್ಳೆ ನಿವಾರಕ ವಿತರಿಸುವಂತೆ ಇಲಾಖೆಯು ಜಿಲ್ಲಾಡಳಿತಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ರಾಜ್ಯದಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿನ ಡೆಂಗ್ಯೂ ಪರಿಸ್ಥಿತಿಯನ್ನು ಪರಿಗಣಿಸಿ, ಡೆಂಗ್ಯೂ ಪ್ರಕರಣಗಳ ಚಿಕಿತ್ಸೆ ಮತ್ತು ನಿರ್ವಹಣೆಗೆ ಕ್ರಮ ಕೈಗೊಳ್ಳಬೇಕಾದದ್ದು ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ನಿಯಮಗಳನ್ನು ಸರಿಯಾಗಿ ಪಾಲಿಸುವಂತೆ ಸೂಚಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಈ ವರ್ಷದ ಜನವರಿಯಿಂದ ಈವರೆಗೂ 7,840 ಡೆಂಘಿ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿಹೆಚ್ಚು 2,291 ಪ್ರಕರಣ ಕಂಡುಬಂದಿದೆ. ಬುಧವಾರ ಬಿಬಿಎಂಪಿಯಲ್ಲಿ 118 ಸೇರಿದಂತೆ 293 ಹೊಸ ಪ್ರಕರಣಗಳು ವರದಿಯಾಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವ್ಯಾಪ್ತಿಯ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಬಿಪಿಎಲ್ ಅಥವಾ ಎಪಿಎಲ್ ಯಾವುದೇ ರೋಗಿಗೂ ಡೆಂಘಿ ಜ್ವರ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಯು ಸೇರಿದಂತೆ ಎಲ್ಲಾ ತಪಾಸಣೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ಒದಗಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ನಗರ ಪ್ರದೇಶದಲ್ಲಿ ಆಶಾ, ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು, ಪ್ರತಿದಿನಕ್ಕೆ ರೂ. 200 ರಂತೆ ನಗರ ಸ್ಥಳೀಯ ಸಂಸ್ಥೆಗಳು ಸ್ವಯಂ ಸೇವಕರನ್ನು ನೇಮಿಸಿಕೊಳ್ಳಬೇಕು. ಮನೆಯ ಒಳಗೆ ಹಾಗೂ ಹೊರಗೆ ನೀರಿನ ಸಂಗ್ರಹಣಾಗಳಲ್ಲಿ ನೀರು ನಿಲ್ಲದಂತೆ ಸ್ವಚ್ಛತೆ ಕುರಿತು ಅರಿವು ಮೂಡಿಸಲು ಚುನಾಯಿತಿ ಪ್ರತಿನಿಧಿಗಳು, ನಾಗರಿಕರು ಮತ್ತಿತರ ಸಂಬಂಧಿತ ಇಲಾಖೆಗಳೊಂದಿಗೆ ಡೆಂಘಿ ಜ್ವರ ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತು ಜಾಗೃತಿ ಮೂಡಿಸುವಂತೆ ತಿಳಿಸಲಾಗಿದೆ.
ಜಿಲ್ಲಾಡಳಿತ ಹಾಗೂ ಬಿಬಿಎಪಿ ಹಾಟ್ ಸ್ಪಾಟ್ ಗಳನ್ನು ಗುರುತಿಸಬೇಕು, ಸೊಳ್ಳೆ ಉತ್ಪತ್ತಿ ಪ್ರದೇಶಗಳಲ್ಲಿ ನಿವಾರಕಗಳನ್ನು ಸಿಂಪಡಿಸಬೇಕು, ಇಂತಹ ಪ್ರದೇಶಗಳಲ್ಲಿ ಫೀವರ್ ಕ್ಲಿನಿಕ್ ಆರಂಭಿಸುವುದೊಂದಿಗೆ ಕೈ, ಕಾಲುಗಳು, ಕುತ್ತಿಗೆ, ಮುಖ ಮತ್ತಿತರ ದೇಹದ ಅಂಗಗಳನ್ನು ಸೊಳ್ಳೆ ಕಡಿತದಿಂದ ಮುಚ್ಚಿಕೊಳ್ಳಲು ಜನರಲ್ಲಿ ಅರಿವು ಮೂಡಿಸಬೇಕು ಎಂದು ಸಂಬಂಧಿತ ಆಡಳಿತಕ್ಕೆ ಸೂಚಿಸಲಾಗಿದೆ.
ಡೆಂಘಿ ಪ್ರಕರಣಗಳಿಗಾಗಿ ತಾಲ್ಲೂಕ್ ಆಸ್ಪತ್ರೆಗಳಲ್ಲಿ ಕನಿಷ್ಠ 5 ಹಾಸಿಗೆ, ಜಿಲ್ಲಾ ಆಸ್ಪತ್ರೆಗಳಲ್ಲಿ 8-1 ಹಾಸಿಗೆ ವ್ಯವಸ್ಥೆ ಮಾಡಬೇಕು, ಆಸ್ಪತ್ರೆಗಳಲ್ಲಿ ಡೆಂಘಿ ಪ್ರಕರಣಗಳ ನಿರ್ವಹಣೆ ಮತ್ತು ಚಿಕಿತ್ಸೆಗಾಗಿ ಪರೀಕ್ಷಾ ಕಿಟ್ ಗಳು, ಅಗತ್ಯ ಔಷಧಿಗಳು ಮತ್ತು ಐವಿ ಪ್ಲೂಯಿಡ್ಸ್ ದಾಸ್ತಾನು ಇಡಬೇಕು, ಪ್ಲಾಟ್ ಲೇಟ್ ಮತ್ತಿತರ ರಕ್ತ ಸಂಬಂಧಿತ ಅಂಶಗಳು ಸರ್ಕಾರಿ ಮತ್ತು ಖಾಸಗಿ ರಕ್ತ ನಿಧಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿರುವಂತೆ ಖಾತ್ರಿಪಡಿಸಿಕೊಳ್ಳುವಂತೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Advertisement