ಮುಡಾ ಹಗರಣ: 50:50 ಹಂಚಿಕೆ ರದ್ದು; ಸಿಬಿಐ ತನಿಖೆಗೆ ವಹಿಸಲ್ಲ ಎಂದ ಸರ್ಕಾರ

ಮುಡಾ ನಿವೇಶನ ಹಂಚಿಕೆ ಸಂಬಂಧ ಜು. 15ರಿಂದ ಆರಂಭವಾಗುವ ಅಧಿವೇಶನದಲ್ಲಿಯೇ ಉತ್ತರ ಕೊಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ಅಧಿಕಾರಿಗಳು 50:50 ಮಾದರಿಯಲ್ಲಿ ನಿವೇಶನ ಹಂಚಿಕೆ ಮಾಡಿರುವುದನ್ನು ಸರ್ಕಾರ ರದ್ದುಗೊಳಿಸಿದ್ದು, ಇದೇ ವಳೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಲ್ಲ ಎಂದು ಸ್ಪಷ್ಟಪಡಿಸಿದೆ.

ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಮುಡಾದ 50:50 ಅನುಪಾತದ ನಿವೇಶನ ಹಂಚಿಕೆ ಬಗ್ಗೆ ತನಿಖೆ ಪ್ರಗತಿಯಲ್ಲಿದ್ದು, ಇಬ್ಬರು ಐಎಎಸ್‌ ಅಧಿಕಾರಿಗಳ ತಂಡದಿಂದ ತನಿಖೆ ನಡೆಯುತ್ತಿದೆ. ವರದಿ ಬಂದ ನಂತರ ಕ್ರಮ ವಹಿಸುತ್ತೇವೆಂದು ಹೇಳಿದರು.

ಇದೇ ವೇಳೆಪ್ರತಿಪಕ್ಷ ನಾಯಕರು ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಿರುವ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ''ಏಕೆ ನಮ್ಮ ಪೊಲೀಸರು ಸಮರ್ಥರಿಲ್ಲವೇ?,'' ಎಂದು ಪ್ರಶ್ನಿಸಿದರು.

ಎಲ್ಲದಕ್ಕೂ ಸಿಬಿಐ ಎನ್ನುವ ಬಿಜೆಪಿಯವರು ತಮ್ಮ ಅವಧಿಯಲ್ಲಿ ಎಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದಾರೆ? ಸಿಬಿಐ ಅನ್ನು ಚೋರ್‌ ಬಚಾವ್‌ ಸಂಸ್ಥೆ ಎನ್ನುತ್ತಿದ್ದರು. ಈಗ ಸಿಬಿಐಗೆ ಕೊಡುವಂತೆ ಒತ್ತಾಯಿಸುತ್ತಿದ್ದಾರೆ. ಈಗಿನ ಸಿಬಿಐ ಮುಖ್ಯಸ್ಥ ಕೂಡ ಕರ್ನಾಟಕದಲ್ಲಿ ಕೆಲಸ ಮಾಡಿದವರು. ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆಂದು ತಿಳಿಸಿದರು.

ನನ್ನ ಪತ್ನಿ ಮುಡಾದಲ್ಲಿ ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದಾರೆ. ಕೆಸರೆಯಲ್ಲಿದ್ದ ಜಮೀನು ವಶ ಪಡಿಸಿಕೊಂಡ ಬಳಿಕ ಪರಿಹಾರ ಕೊಡುವಂತೆ ಮುಡಾಗೆ ನನ್ನ ಪತ್ನಿ ಪತ್ರ ಬರೆದಿದ್ದರು. ಪ್ರಾಧಿಕಾರದ ಸಭೆಯಲ್ಲಿ ತಪ್ಪೊಪ್ಪಿಕೊಂಡು ವಿಜಯನಗರದಲ್ಲಿ ನಿವೇಶನ ಕೊಟ್ಟಿದ್ದಾರೆ. ನಾವು ವಿಜಯನಗರದಲ್ಲಿ ನಿವೇಶನ ಕೊಡುವಂತೆ ಕೇಳಿರಲಿಲ್ಲ. ನಿಮ್ಮ ಜಮೀನನ್ನು ವಶಪಡಿಸಿಕೊಂಡಿದ್ದರೆ ಪರಿಹಾರ ಕೇಳುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಮುಡಾದಿಂದ ನಿವೇಶನ ಪಡೆದಿರುವುದರಲ್ಲಿ ಯಾವುದೇ ತೊಡಕಿಲ್ಲ ಎಂದು ತಿಳಿಸಿದರು.

ಸಂಗ್ರಹ ಚಿತ್ರ
ಮುಡಾ ಹಗರಣ: CBI ತನಿಖೆಗೆ BJP ಆಗ್ರಹ; ಜುಲೈ 12ರಂದು ಮೈಸೂರಿನಲ್ಲಿ ಬೃಹತ್ ಪ್ರತಿಭಟನೆ

ಮುಡಾ ನಿವೇಶನ ಹಂಚಿಕೆಯನ್ನು ಬಿಜೆಪಿಯವರು ರಾಜಕೀಯ ಕಾರಣಕ್ಕಾಗಿ ವಿವಾದ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ನಮ್ಮ ಮನೆಗೆ ಮುತ್ತಿಗೆ, ಪ್ರತಿಭಟನೆ ಮಾಡಿದ್ದರು. ಈಗ ಮೈಸೂರಲ್ಲಿ ಪ್ರತಿಭಟನೆ ಮಾಡುವುದಾಗಿ ಹೇಳಿದ್ದಾರೆ. ಪ್ರತಿಭಟನೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ಮುಡಾ ನಿವೇಶನ ಹಂಚಿಕೆ ಸಂಬಂಧ ಜು. 15ರಿಂದ ಆರಂಭವಾಗುವ ಅಧಿವೇಶನದಲ್ಲಿಯೇ ಉತ್ತರ ಕೊಡುತ್ತೇವೆ ಎಂದರು.

'ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಾಯಕತ್ವದಲ್ಲಿ ರಾಮನಗರ ಜಿಲ್ಲೆಯ ಜನಪ್ರತಿನಿಧಿಗಳು ಭೇಟಿ ಮಾಡಿ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ನಾಮಕರಣ ಮಾಡುವಂತೆ ಮನವಿ ಸಲ್ಲಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಬೇಕಿದೆ ಎಂದು ಹೇಳಿದರು,

ಬಳಿಕ ರಾಮನಗರ ಹೆಸರು ಬದಲಾಯಿಸಿದರೆ ನಾವು ಅಧಿಕಾರಕ್ಕೆ ಬಂದಾಗ ಬದಲಾಯಿಸುತ್ತೇವೆ ಎಂಬ ಪ್ರತಿಪಕ್ಷ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, ಅವರು ಅಧಿಕಾರಕ್ಕೆ ಬರುವುದಿಲ್ಲ. ಜನರು ನಮಗೇ ಆಶೀರ್ವಾದ ಮಾಡಿದ್ದಾರೆ. ನಾನು ಮುಖ್ಯಮಂತ್ರಿಯಾಗುವಂತೆ ಆಶೀರ್ವಾದ ಮಾಡಿದ್ದಾರೆ. ಕುಮಾರಸ್ವಾಮಿಗೆ ಆಶೀರ್ವಾದ ಮಾಡಿದ್ದಾರೆಯೇ? ಎಂದು ಪ್ರಶ್ನಿಸಿದರು.

ದೆಹಲಿಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿದ್ದೆವು. ಮನವಿಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದ್ದಾರೆ. ಸಂಸದರು ರಾಜ್ಯದ ಪರವಾಗಿ ಅಧಿವೇಶನದಲ್ಲಿ ದನಿ ಎತ್ತುವರೆಂಬ ವಿಶ್ವಾಸವಿದೆ ಎಂದು ಹೇಳಿದರು.

ಸ್ಥಳೀಯ ಸಂಸ್ಥೆ ಚುನಾವಣೆಗೆ ಮೀಸಲು ನಿಗದಿ ಸಂಬಂಧ ವಿವಾದ ಕೋರ್ಟ್‌ನಲ್ಲಿದೆ. ವಿವಾದ ಬಗೆಹರಿಯುತ್ತಿದ್ದಂತೆ ಬಿಬಿಎಂಪಿ, ಮೈಸೂರು ನಗರ ಪಾಲಿಕೆ, ಜಿಪಂ, ತಾಪಂ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.

ಎಸ್‌ಸಿ/ಎಸ್‌ಟಿ ನಿಗಮ ನಿಧಿ ದುರುಪಯೋಗ ಹಗರಣದಲ್ಲಿ ಮಾಜಿ ಸಚಿವ ಬಿ ನಾಗೇಂದ್ರ ಅವರ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸುತ್ತಿರುವ ಕುರಿತು ಮಾತನಾಡಿ, ಇಡಿ ತನ್ನ ಕರ್ತವ್ಯವನ್ನು ಮಾಡುತ್ತಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com