
ಬಳ್ಳಾರಿ: ಅಕ್ರಮ ಪಂಪ್ ಸೆಟ್ ಗಳ ಮೂಲಕ ವಿದ್ಯುತ್ ಕಳ್ಳತನ ತಡೆಯಲು ನೀರಾವರಿ ಪಂಪ್ ಸೆಟ್ ಗಳ ಆರ್.ಆರ್ ಸಂಖ್ಯೆಯನ್ನು ಸಂಬಂಧಿಸಿದ ಗ್ರಾಹಕರ ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡುವುದು ಅಗತ್ಯವಾಗಿದೆ ಎಂದು ಇಂಧನ ಸಚಿವ ಕೆ. ಜೆ. ಜಾರ್ಜ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದಾಖಲೆ ಇಡುವ ಉದ್ದೇಶದಿಂದ ನೀರಾವರಿ ಪಂಪ್ ಸೆಟ್ ಗಳ ಆರ್ ಆರ್ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡುವ ಅಗತ್ಯವಿದೆ. ರಾಜ್ಯದಲ್ಲಿ 10 ಹೆಚ್ ಪಿ ವರೆಗಿನ ಕೃಷಿ ಪಂಪ್‌ಸೆಟ್‌ಗಳು ಉಚಿತ ವಿದ್ಯುತ್ ಪಡೆಯುತ್ತವೆ. ಆದಾಗ್ಯೂ, ಅಕ್ರಮ ಪಂಪ್‌ಸೆಟ್‌ಗಳಿಂದ ಉಂಟಾಗುವ ವಿದ್ಯುತ್ ಕಳ್ಳತನ ತಡೆಗಟ್ಟಲು ಮತ್ತು ವಿದ್ಯುತ್ ಅಗತ್ಯವನ್ನು ನಿಖರವಾಗಿ ಅಳೆಯಲು, ಆಧಾರ್ ಜೋಡಣೆ ಅತ್ಯಗತ್ಯ ಎಂದರು.
ನೀರಾವರಿ ಪಂಪ್ ಸೆಟ್ ಗಳ ಸಂಖ್ಯೆಯನ್ನು ನಿಖರವಾಗಿ ನಿರ್ಣಯಿಸುವುದು ಮತ್ತು ಸಮರ್ಥ ವಿದ್ಯುತ್ ವಿತರಣೆ ಖಾತರಿಪಡಿಸುವುದು ಈ ಕ್ರಮದ ಉದ್ದೇಶವಾಗಿದ್ದು, ಬರಗಾಲದ ಸಂದರ್ಭದಲ್ಲೂ ನಿರಂತರ ವಿದ್ಯುತ್ ಪೂರೈಕೆಗೆ ರಾಜ್ಯ ಬದ್ಧವಾಗಿದೆ. ಲೋಡ್ ಶೆಡ್ಡಿಂಗ್ ಇಲ್ಲದೆ ಪ್ರತಿನಿತ್ಯ ಏಳು ಗಂಟೆ ವಿದ್ಯುತ್ ನೀಡುವುದು ಯೋಜನೆ ರೂಪಿಸಲಾಗಿದೆ. ಬೇಡಿಕೆ ಆಧಾರಿತ ವಿದ್ಯುತ್ ಹಂಚಿಯೊಂದಿಗೆ ಈ ಗುರಿ ಸಾಧಿಸಲಾಗುವುದು, ಯಾವುದೇ ಸಮಸ್ಯೆ ಪರಿಹಾರಿಸಲು ಪ್ರತಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಮಟ್ಟದ ಸಭೆ ನಡೆಸಲಾಗುವುದು, ಶೀಘ್ರದಲ್ಲಿಯೇ ರಾಜ್ಯಾದ್ಯಂತ 2,000 ಲೈನ್‌ಮ್ಯಾನ್‌ಗಳ ನೇಮಕಾತಿ ಮಾಡಲಾಗುವುದು ಎಂದು ತಿಳಿಸಿದರು.
ವರ್ಗಾವಣೆ ಸಮಸ್ಯೆಗಳನ್ನು ತಡೆಗಟ್ಟುವ ಗುರಿಯೊಂದಿಗೆ ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಪ್ರತಿ ಜಿಲ್ಲೆಗೆ ನಿರ್ದಿಷ್ಟವಾಗಿ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಲೈನ್ ಮ್ಯಾನ್ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.
Advertisement