
ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿದ್ದಾಗ ಎಸ್‌ಸಿ/ಎಸ್‌ಟಿಗಳ ಕಲ್ಯಾಣಕ್ಕೆ ಮೀಸಲಿಟ್ಟ ಅನುದಾನವನ್ನೇ ಖರ್ಚು ಮಾಡಿರಲಿಲ್ಲ ಎಂದು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌ಎಂ ರೇವಣ್ಣ ಗುರುವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸುಳ್ಳು ಪ್ರಚಾರ ಮಾಡುತ್ತಿದ್ದು, ಈ ಅಪಪ್ರಚಾರಕ್ಕೆ ಮುಂಬರುವ ಅಧಿವೇಶನದಲ್ಲಿ ಉತ್ತರ ಸಿಗಲಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಸಮುದಾಯಗಳಿಗೆ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ಅನುದಾನವನ್ನೇ ಖರ್ಚು ಮಾಡಿರಲಿಲ್ಲ, ಈಗ ಪ್ರಶ್ನಿಸಲು ಆ ಪಕ್ಷಕ್ಕೆ ಯಾವ ನೈತಿಕ ಹಕ್ಕಿದೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿದ್ದನ್ನು ಅವರು ಸಮರ್ಥಿಸಿಕೊಂಡರು.
ಎಸ್‌ಇಪಿ-ಟಿಎಸ್‌ಪಿ ಹಣವನ್ನು ಸಿದ್ದರಾಮಯ್ಯ ಸರ್ಕಾರ ಸರಿಯಾಗಿ ಬಳಸಿಕೊಂಡಿದೆ. ಹಣ ದುರುಪಯೋಗ ಆಗಿಲ್ಲ. ಐದು ಗ್ಯಾರಂಟಿಗಳಲ್ಲಿ ದಲಿತ ಫಲಾನುಭವಿಗಳೂ ಇದ್ದಾರೆ. ಹೀಗಾಗಿ ಎಸ್‌ಇಪಿ-ಟಿಎಸ್‌ಪಿ ಹಣ ಹಣವನ್ನು ಗ್ಯಾರಂಟಿಗೆ ಬಳಸಲಾಗುತ್ತಿದೆ. ಹಣ ಸರಿಯಾಗಿ ಬಳಕೆ ಮಾಡಿಕೊಳ್ಳುವುದು ನಮ್ಮ ಕೆಲಸ. ನಾನು ಕೂಡ ಇದನ್ನೇ ಮಾಡಿದ್ದು. ಬಿಜೆಪಿ ಕೇಳುತ್ತಾರೆ ಎಂದು ನಾವು ಹೆದರುವುದಿಲ್ಲ ಎಂದು ಹೇಳಿದರು.
ಆ ಹಣ ಬಳಸುವುದರಲ್ಲಿ ತಪ್ಪೇನಿದೆ, ಬಿಜೆಪಿಗೆ ಬೇರೇನೂ ಕೆಲಸವಿಲ್ಲ ಅದಕ್ಕಾಗಿಯೇ ಈ ರೀತಿಯ ಆರೋಪ ಮಾಡುತ್ತಿದ್ದಾರೆ, ಬಿಜೆಪಿ ಆರೋಪಕ್ಕೆ ಸದನದಲ್ಲಿ ಸಮರ್ಪಕ ಉತ್ತರ ನೀಡುತ್ತೇವೆ ಎಂದರು.
Advertisement