
ಬೆಂಗಳೂರು: ತಮಿಳುನಾಡಿಗೆ ಪ್ರತಿದಿನ ಒಂದು ಟಿಎಂಸಿ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ಸಿ) ರಾಜ್ಯಕ್ಕೆ ನೀಡಿರುವ ನಿರ್ದೇಶನದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಾವೇರಿ ನದಿ ಪಾತ್ರದ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಜುಲೈ 14ರಂದು ಸರ್ವಪಕ್ಷಗಳ ಸಭೆ ನಡೆಸಿ ರಾಜ್ಯದ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
"ಈ ಬಾರಿ ಸಾಮಾನ್ಯ ಮಳೆಯಾಗುವ ಮುನ್ಸೂಚನೆಗಳ ಹೊರತಾಗಿಯೂ, ಒಳಹರಿವಿನಲ್ಲಿ ಇದುವರೆಗೆ ಶೇ.28 ರಷ್ಟು ಕೊರತೆಯಿದೆ. ಇದನ್ನು ನಾವು ಸಿಡಬ್ಲ್ಯೂಆರ್‌ಸಿ ಮುಂದೆ ಸ್ಪಷ್ಟವಾಗಿ ಹೇಳಿದ್ದೇವೆ. ಅಲ್ಲದೆ, ಜುಲೈ ಅಂತ್ಯದವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ನಾವು ವಿನಂತಿಸಿದ್ದೇವೆ. ಆದರೂ ಜುಲೈ 12ರಿಂದ ಪ್ರತಿದಿನ ಒಂದು ಟಿಎಂಸಿ ನೀರು ಬಿಡುವಂತೆ ಸಿಡಬ್ಲ್ಯುಆರ್‌ಸಿ ಸೂಚಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
CWRC ನಿರ್ದೇಶನದ ವಿರುದ್ಧ ವಿರುದ್ಧ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ(ಸಿಡಬ್ಲ್ಯುಎಂಎ) ಮುಂದೆ ಮೇಲ್ಮನವಿ ಸಲ್ಲಿಸಬೇಕು ಎಂದು ಇಂದಿನ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
"ಕರ್ನಾಟಕದ ನೀರಿನ ವಿಷಯದಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿವೆ. ಆದ್ದರಿಂದ, (ಜುಲೈ 14 ರಂದು) ಸರ್ವಪಕ್ಷ ಸಭೆ ನಡೆಸಲಾಗುವುದು" ಎಂದು ಮುಖ್ಯಮಂತ್ರಿಗಳು ಹೇಳಿದರು.
ಕೇಂದ್ರ ಸಚಿವರು, ರಾಜ್ಯದ ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರು, ಕಾವೇರಿ ನದಿ ಜಲಾನಯನ ಪ್ರದೇಶದ ಶಾಸಕರನ್ನೂ ಈ ಸಭೆಗೆ ಆಹ್ವಾನಿಸಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರ ತನ್ನ ಮುಂದಿನ ನಡೆಯನ್ನು ನಿರ್ಧರಿಸುತ್ತದೆ.
ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡಲಾಗುತ್ತಿದ್ದು, ಇದು ಕಬಿನಿ ಅಣೆಕಟ್ಟಿನ ಒಳಹರಿವಿಗೆ ಸಮನಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಕಾವೇರಿ ಜಲಾನಯನ ಪ್ರದೇಶದ ನಾಲ್ಕೂ ಜಲಾಶಯಗಳಲ್ಲಿ ಒಟ್ಟು 60 ಟಿಎಂಸಿ ಅಡಿ ನೀರು ಮಾತ್ರ ಲಭ್ಯವಿದ್ದು, ಕೃಷಿ ಚಟುವಟಿಕೆಗಳಿಗೂ ನೀರು ಒದಗಿಸಬೇಕಿದೆ.
ಹೀಗಾಗಿ ಮಳೆ ಕೊರತೆಯನ್ನು ಗಮನದಲ್ಲಿಟ್ಟುಕೊಂಡು ಜುಲೈ ಅಂತ್ಯದವರೆಗೆ ಕಾಯುವಂತೆ ತಮಿಳುನಾಡಿಗೆ ಮನವಿ ಮಾಡಿದರು.
Advertisement