
ನವದೆಹಲಿ: ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಸೂಕ್ತ ಪರವಾನಗಿ ಇಲ್ಲದೆ ಕನ್ನಡದ ಸುದ್ದಿ ವಾಹಿನಿಯಾದ ಪವರ್ ಟಿವಿ ಕಾರ್ಯ ನಿರ್ವಹಿಸುತ್ತಿತ್ತು ಎಂಬ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್ ಪ್ರಸಾರ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಸೂಚನೆ ನೀಡಿ ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿತ್ತು. ಇದೀಗ ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಸದ್ಯದ ಮಟ್ಟಿಗೆ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ. ಹೀಗಾಗಿ, ಪವರ್ ಟಿವಿ ಎಂದಿನಂತೆ ಕಾರ್ಯ ನಿರ್ವಹಣೆ ಮಾಡಬಹುದಾಗಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ಸಾರಥ್ಯದ ಪೀಠವು, ಈ ವಿಚಾರದ ಕುರಿತಾಗಿ ನಾವು ಇನ್ನೇನೂ ಕೇಳಲು ಬಯಸುವುದಿಲ್ಲ. ಇದು ರಾಜಕೀಯ ದ್ವೇಷದ ಕ್ರಮ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ. ಅವರ ದನಿಯನ್ನು ಸಂಪೂರ್ಣವಾಗಿ ಉಡುಗಿಸಬೇಕು ಎಂಬುದು ಉದ್ದೇಶವಾಗಿತ್ತು. ಹೀಗಾಗಿ ವಾಹಿನಿ ಪ್ರಸಾರಕ್ಕೆ ತಡೆ ಹಿಡಿಯಲಾಗಿತ್ತು. ಆದರೆ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡೋದು ಸರ್ಕಾರಗಳ ಕರ್ತವ್ಯ ಎಂದು ಮುಖ್ಯ ನ್ಯಾಯಮೂರ್ತಿಗಳು ಚಾಟಿ ಬೀಸಿದ್ದಾರೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸದಿದ್ದರೆ ನ್ಯಾಯಾಲಯವು ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಪವರ್ ಟಿವಿ ಚಾನೆಲ್‌ನ ಪರವಾನಗಿ 2021 ರಲ್ಲಿ ಅವಧಿ ಮುಗಿದಿದೆ ಎಂದು ಕಂಡುಬಂದ ನಂತರ ಕರ್ನಾಟಕ ಹೈಕೋರ್ಟ್ ಕಳೆದ ತಿಂಗಳು ಜುಲೈ 9 ರವರೆಗೆ ಪ್ರಸಾರ ಚಟುವಟಿಕೆಯಿಂದ ನಿರ್ಬಂಧಿಸಿತ್ತು.
ಜುಲೈ 3 ರಂದು ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪ್ರಶ್ನಿಸಿ ಮಿಥು ಜೈನ್ಹಾಸ್ ವಕೀಲರ ಮೂಲಕ ಪವರ್ ಟಿವಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಪ್ರಕರಣದ ಕುರಿತಾಗಿ ಈ ಹಿಂದೆ ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದ್ದ ಕೇಂದ್ರ ಸರ್ಕಾರ, ಪವರ್ ಟಿವಿಯನ್ನು ನಡೆಸುತ್ತಿರುವ ಪವರ್ ಸ್ಮಾರ್ಟ್ ಮೀಡಿಯಾ ಲಿಮಿಟೆಡ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿತ್ತು. ಈ ವಾಹಿನಿಗೆ ತನ್ನ ಕಾರ್ಯಕ್ರಮಗಳ ಅಪ್‌ಲಿಂಕ್ ಹಾಗೂ ಡೌನ್ ಲಿಂಕ್ ಮಾಡಲು ಅನುಮತಿಯೇ ಇರಲಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತ್ತು. 2021ರ ಅಕ್ಟೋಬರ್ 12 ರಂದೇ ಈ ವಾಹಿನಿಯ ಪರವಾನಗಿ ಅಂತ್ಯಗೊಂಡಿತ್ತು. ಬಳಿಕ 2022ರ ಡಿಸೆಂಬರ್ 30 ರಂದು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿತ್ತು.
ಮಿಟ್‌ಕಾಯಿನ್ ಇನ್‌ಫ್ರಾ 2021 ರಲ್ಲಿ ಪವರ್ ಸ್ಮಾರ್ಟ್ ಮೀಡಿಯಾದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು, ಆ ಮೂಲಕ ಸ್ಟುಡಿಯೋ ಸೇವೆಗಳನ್ನು ಪಡೆಯಲು, ಜಾಹೀರಾತುಗಳನ್ನು ಪಡೆಯಲು ಮತ್ತು ಈ ಸುದ್ದಿ ವಾಹಿನಿಯ ಕಾರ್ಯನಿರ್ವಹಣೆಗಾಗಿ ಉದ್ಯೋಗಿಗಳನ್ನುನೇಮಕ ಮಾಡಿತು, ಅವರಿಗೆ ಸಂಭಾವನೆ ಮತ್ತು ಸಂಬಳವನ್ನು ಮಿಟ್‌ಕಾನ್ ಪಾವತಿಸಲು ಒಪ್ಪಿಕೊಂಡಿತು.
Advertisement