
ಬೆಂಗಳೂರು: ರಾಜ್ಯದಲ್ಲಿನ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಸಿ ಮತ್ತು ಡಿ ವರ್ಗದ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.100 ರಷ್ಟು ಮೀಸಲಾತಿ ಸೇರಿದಂತೆ ಏಳು ಮಸೂದೆಗಳನ್ನು ಮಂಡಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ಟ್ವೀಟ್ ಮಾಡುವ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕನ್ನಡಿಗರ ಹಿತ ಕಾಪಾಡುವುದು ರಾಜ್ಯ ಸರ್ಕಾರದ ಆದ್ಯತೆಯಾಗಿದೆ. ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ "ಸಿ ಮತ್ತು ಡಿ" ದರ್ಜೆಯ ಹುದ್ದೆಗಳಿಗೆ ಶೇಕಡಾ 100 ರಷ್ಟು ಕನ್ನಡಿಗರ ನೇಮಕ ಕಡ್ಡಾಯಗೊಳಿಸುವ ಮಸೂದೆಗೆ ನಿನ್ನೆ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕನ್ನಡಿಗರು ಉದ್ಯೋಗದಿಂದ ವಂಚಿತರಾಗುವುದನ್ನು ತಪ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಕನ್ನಡ ನಾಡು, ಮಾತೃಭೂಮಿಯಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು, ಕನ್ನಡಿಗರ ಹಿತ ಕಾಪಾಡುವುದೇ ನಮ್ಮ ಆದ್ಯತೆ’ ಎಂದು ಬರೆದುಕೊಂಡಿದ್ದಾರೆ.
ರಾಜ್ಯದಿಂದ ನೆಲ, ಜಲ ಸೇರಿದಂತೆ ಮೂಲಸೌಕರ್ಯ ಪಡೆಯುವ ಕೈಗಾರಿಕೆಗಳು ಸ್ಥಳೀಯರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಮಸೂದೆಯಲ್ಲಿ ಹೇಳಲಾಗಿದ್ದು, ಸಂಪುಟ ಸಭೆಯಲ್ಲಿ ಇದಕ್ಕೆ ಒಪ್ಪಿಗೆ ನೀಡಿದೆ ಎಂದು ಹೇಳಿದ್ದರು. ಆದರೆ, ಇದಕ್ಕೆ ಕಿರಣ್ ಮಜುಂದಾರ್ ಶಾ, ಮೋಹನ್ ದಾಸ್ ಪೈ ಸೇರಿದಂತೆ ಕೆಲ ಕೈಗಾರಿಕೋದ್ಯಮಿಗಳು ವಿರೋಧ ವ್ಯಕ್ತಪಡಿಸಿದ್ದು, ಪರಿಸ್ಥಿತಿ ಗಂಭೀರವಾದ ತಕ್ಷಣ ಸಿದ್ದರಾಮಯ್ಯ ತಮ್ಮ ಟ್ವೀಟ್ ನ್ನು ಡಿಲೀಟ್ ಮಾಡಿದ್ದರು. ಇದೀಗ ಮತ್ತೆ ಟ್ವೀಟ್ ಮಾಡಿದ್ದಾರೆ.
Advertisement